ಕಲಬುರಗಿ: ಆಕಾಶ ತುಂಬಾ ತ್ರಿವರ್ಣದ ರಂಗು, ಅದಕ್ಕೆ ಮೆರುಗು ನೀಡ್ತಿರೋ ನಕ್ಷತ್ರಗಳ ಸಾಲು. ಹೀಗೆ ಆಗಸ ತುಂಬೆಲ್ಲ ಕಲರ್ಫುಲ್ ಚಿತ್ತಾರದ ಮೆರುಗು. ಮಕ್ಕಳಿಗಂತೂ ಮೈಮರೆಸುವಂತೆ (Kalyana Karnataka Utsav) ಮಾಡಿತು ಗಾಳಿಪಟ ಕ್ರೇಝ್. ಹಾಗಿದ್ರೆ ಹೇಗಿತ್ತು ನೋಡೋಣ ಗಾಳಿಪಟ ಉತ್ಸವದ (Kite Festival) ಈ ಸೊಬಗು.
ಕಲಬುರಗಿಯಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಗುಲಬರ್ಗಾ ವಿವಿ ಆವರಣದಲ್ಲಿ ಗಾಳಿಪಟ ಉತ್ಸವವನ್ನು ಏರ್ಪಾಡು ಮಾಡಲಾಗಿತ್ತು. ಈ ವೇಳೆ ಮಕ್ಕಳು, ಯುವಕ-ಯುವತಿಯರು, ಅಧಿಕಾರಿಗಳು ಮೊದಲಾಗಿ ಗಾಳಿಪಟವನ್ನು ಆಕಾಶದತ್ತ ಹಾರಿಸುವ ಮೂಲಕ ಸಂಭ್ರಮಿಸಿದರು.
ತ್ರಿವರ್ಣ ರಂಗು
ಶಾಲಾ ಮಕ್ಕಳಂತೂ ಬಿಸಿಲನ್ನೂ ಲೆಕ್ಕಿಸದೇ ಗಾಳಿಪಟ ಹಾರಿಸುತ್ತಾ ಭಾರೀ ಖುಷಿಪಟ್ಟರು. ಒಂದೊಂದು ಗಾಳಿಪಟನೂ ಆಗಸದೆತ್ತರಕ್ಕೆ ಚಿಮ್ಮುತ್ತಲೇ ತನ್ನ ಸೌಂದರ್ಯ ಪ್ರದರ್ಶಿಸಿ ಜನರ ಕಣ್ಮನ ಸೆಳೆಯಿತು. ಅದರಲ್ಲೂ ಆಗಸದೆತ್ತರಕ್ಕೆ ಚಾಚಿಕೊಂಡಂತಿದ್ದ ತ್ರಿವರ್ಣ ಧ್ವಜದ ಸಾಲುಗಳ ಗಾಳಿಪಟ ನೆರೆದವರನ್ನು ಖುಷಿಯಲ್ಲಿ ತೇಲಾಡಿಸಿತು.
ಇದನ್ನೂ ಓದಿ: Positive Story: ಈ ವಿಶೇಷ ಚೇತನರ ಬದುಕೇ ಸ್ಪೂರ್ತಿ, ಎಲ್ರಿಗೂ ಮಾದರಿ ಕಲಬುರಗಿಯ ನಾಗೇಂದ್ರ
ಆಕಾಶದಲ್ಲಿ ಮೂಡಿತು ಚಿತ್ತಾರ
ಇನ್ನು ಆಗಸಕ್ಕೆ ಮೆರುಗು ಎಂಬಂತೆ ಬಂಗಾರ ಬಣ್ಣದ ನಕ್ಷತ್ರಗಳು ಹಾಗೂ ವಿವಿಧ ಗಾಳಿಪಟಗಳು ಆಗಸದಲ್ಲಿ ತೇಲಾಡುತ್ತಿದ್ದರೆ, ಜನರು ಮೈದಾನದಲ್ಲಿ ನಿಂತು ಸಂಭ್ರಮದಿಂದ ತೇಲಾಡಿದರು. ಪುಟ್ಟ ಪುಟ್ಟ ಪತಂಗಗಳು ಗಾಳಿಗೆ ಸಿಕ್ಕಿ ನೀರಲ್ಲಿ ಈಜಾಡೋ ಮೀನಿನಂತೆ ಕಂಡುಬಂದವು. ಆಗಸದ ತುಂಬೆಲ್ಲ ಮಿಂಚುಹುಳಗಳಂತೆ ಪತಂಗಗಳು ಕಂಗೊಳಿಸಿ ಖುಷಿಪಡಿಸಿದವು.
ಇದನ್ನೂ ಓದಿ: Kalaburagi: ಆಕಾಶದಿಂದ ಕಲಬುರಗಿ ನೋಡಿ! ಕಲಬುರಗಿಯಲ್ಲಿ ಮೋಜಿನ ಹೆಲಿಕಾಪ್ಟರ್ ರೈಡ್!
ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ನಡೆದ ಕೈಟ್ ಫೆಸ್ಟಿವಲ್ ಬಿಸಿಲನಾಡಿನ ಬಿಸಿಲಿಗೂ ಸವಾಲೊಡ್ಡಿದ್ದಂತಿತ್ತು. ಜನರೆಲ್ಲ ಮೈದಾನಕ್ಕಿಳಿದು ರಜೆಯ ಮಜಾ ಪಡೆದುಕೊಂಡರು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ