ಕಲಬುರಗಿ: ರಸ್ತೆ ಸಾರಿಗೆ ನಿಗಮದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ತಮ್ಮ ಸಿಬ್ಬಂದಿಗಳಿಗೆ ಅಪಘಾತ ವಿಮೆ (Accident Insurance) ನೀಡಲು ಮುಂದಾಗಿದೆ. ಈ ಯೋಜನೆಗೆ ಎಂದೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಅಪಘಾತ ವಿಮೆಯು ಸಂಪೂರ್ಣ ಪ್ರೀಮಿಯಂ ರಹಿತವಾಗಿರುತ್ತದೆ ಎಂದು ರಸ್ತೆ ಸಾರಿಗೆ ನಿಗಮವು ತಿಳಿಸಿದೆ. ಈ ಮೂಲಕ ನಿಗಮವು ತಮ್ಮ ಬಸ್ಗಳಲ್ಲಿ ದುಡಿಯುವ ನೌಕರರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಸಿಎಸ್ ಪಿ ಬ್ಯಾಂಕ್ ಖಾತೆ ಕಡ್ಡಾಯ
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿಗಳು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಸ್ಟೇಟ್ ಬ್ಯಾಕ್ ಆಫ್ ಇಂಡಿಯಾದ Corporate Salary Package(CSP) ನಡಿ ಇರುವಂತೆ ನೋಡಿಕೊಳ್ಳಬೇಕು. ಈಗಾಗಲೇ SBI ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ ನೌಕರರು ಅದನ್ನು Corporate Salary Package (CSP)ಗೆ ಬದಲಾಯಿಸಲು ಬ್ಯಾಂಕ್ಗೆ ಮನವಿ ಮಾಡಬೇಕಿದೆ.
SBI ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವ ಎಲ್ಲಾ ನೌಕರರು ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸತಕ್ಕದು. ಒಂದು ವೇಳೆ CSP ಖಾತೆಯನ್ನು ಹೊಂದಿರುವ ಸಿಬ್ಬಂದಿಯು ಬೇರೆ ಬ್ಯಾಂಕುಗಳಲ್ಲಿ ತನ್ನ ವೇತನ ಖಾತೆಯನ್ನು ತೆರಯಲು ಇಚ್ಛಿಸಿದ್ದಲ್ಲಿ ಕಡ್ಡಾಯವಾಗಿ SBI ಬ್ಯಾಂಕಿನಿಂದ ಆಕ್ಷೇಪಣಾ ರಹಿತ ದೃಢೀಕರಣ ಪತ್ರವನ್ನು ಪಡೆಯಬೇಕಿರುತ್ತದೆ.
ವಿಮೆ ಮೊತ್ತವೆಷ್ಟು?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ನಡೆದ ಒಪ್ಪಂದದಂತೆ ಗರಿಷ್ಟ ಮೊತ್ತದ ವಿಮೆ ಮೊತ್ತ ನೀಡಲು ಬ್ಯಾಂಕ್ ಒಪ್ಪಿಕೊಂಡಿದೆ. ಒಂದು ವೇಳೆ ಸಾರಿಗೆ ಇಲಾಖೆ ನೌಕರ ಕರ್ತವ್ಯದ ವೇಳೆ ಮೃತಪಟ್ಟಲ್ಲಿ ಅಂತಹ ಮೃತಪಟ್ಟ ನೌಕರನ ಕುಟುಂಬಕ್ಕೆ ರೂ. 50 ಲಕ್ಷಗಳ ವಿಮಾ ಪರಿಹಾರವನ್ನು ವಿತರಿಸಲಿದೆ. ಒಂದು ವೇಳೆ ಕರ್ತವ್ಯ ಸಮಯದಲ್ಲಿ ಅಪಘಾತದಿಂದ ಅಂಗನ್ಯೂನ್ಯತೆಗೆ ಒಳಗಾದಲ್ಲಿ 20 ಲಕ್ಷ ರೂ. ಮತ್ತು ಭಾಗಶಃ ಅಂಗನ್ಯೂನ್ಯತೆಗೆ ₹10 ಲಕ್ಷ ರೂ. ಪರಿಹಾರ ಮೊತ್ತ ವಿತರಿಸಲಿದೆ.
ಖಾತೆ ಆಧರಿಸಿ ಹೆಚ್ಚುವರಿ ವಿಮೆ ಮೊತ್ತ
ನೌಕರನ ಖಾತೆಗೆ ಪ್ರತಿ ತಿಂಗಳು ಜಮಾ ಆಗುವ ವೇತನದ ಆಧಾರದ ಮೇಲೆ CSP ಬ್ಯಾಂಕ್ ಖಾತೆದಾರರನ್ನು Silver (ರೂ. 10,000 ದಿಂದ 25,000). Gold (ರೂ. 25,001 ದಿಂದ 50,000). Diamond (ರೂ 50,001 ದಿಂದ 1,00,000). Platinum (ರೂ. 1,00,000 ಮೇಲ್ಪಟ್ಟು) ಎಂದು ವಿಂಗಡಿಸಿದ್ದು, ಆ ಪ್ರಕಾರ ಪಾಲಿಸಿದಾರರು ಅಪಘಾತದಿಂದ ಮರಣ ಹೊಂದಿದ್ದಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುತ್ತಾರೆ.. ಡೆಬಿಟ್ ಕಾರ್ಡ್ (Master/ Visa) ಬಳಕೆದಾರರಿಗೆ ಹೆಚ್ಚುವರಿ ವೈಯಕ್ತಿಕ ಅಪಘಾತ ವಿಮೆ ಇದರಲ್ಲಿ Platinum ಖಾತೆದಾರರಿಗೆ ರೂ. 5 ಲಕ್ಷ, Diamond & Gold ಖಾತೆದಾರರಿಗೆ ರೂ. 2 ಲಕ್ಷಗಳ ಹೆಚ್ಚುವರಿಯಾಗಿ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವಿದೆ.
ಇದನ್ನೂ ಓದಿ: Kalaburagi: ಇದು ಹಿಂದೂ-ಮುಸ್ಲಿಂ ಧರ್ಮೀಯರನ್ನು ಒಗ್ಗೂಡಿಸೋ ಕಲಬುರಗಿಯ ಭಾವೈಕ್ಯತೆಯ ತಾಣ!
ಅಪಘಾತದ ಮಾಹಿತಿ ನೀಡುವಿಕೆ ಕಡ್ಡಾಯ
ಅಪಘಾತ ನಡೆದ ದಿನಾಂಕದ ಹಿಂದಿನ 3 ತಿಂಗಳಲ್ಲಿ ನಿರಂತರವಾಗಿ ಅವರ ವೇತನವು CSP-SBI ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕು. ಒಂದು ವೇಳೆ ವೇತನವು ಜಮಾ ಆಗದೇ ಇದ್ದ ಪಕ್ಷದಲ್ಲಿ ಅವರ CSP ಬ್ಯಾಂಕ್ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಬದಲಾಗುವುದು.
ಅವರು ಈ ಮೇಲ್ಕಂಡ ವಿಮಾ ಹಾಗೂ ಇತರೇ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ. ಬ್ಯಾಂಕಿನವರಿಗೆ ಅಪಘಾತ ನಡೆದ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡಬೇಕಿದೆ. ಪೂರಕ ದಾಖಲೆಗಳನ್ನು 180 ದಿನಗಳ ಒಳಗೆ ಸಲ್ಲಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ