ಕಲಬುರಗಿ: ಪದ್ಮಾಸನ, ತಾಡಾಸನ, ವೃಕ್ಷಾಸನ, ಭುಜಂಗಾಸನ ಹೀಗೆ ಯಾವುದೇ ಆಸನಗಳಿದ್ರೂ ಶಿಸ್ತುಬದ್ಧವಾಗಿ ಮಾಡಬಲ್ಲಳು ಈ ಪುಟ್ಟ ಬಾಲಕಿ. ಆದ್ರೆ, ಈಕೆಯ ಯೋಗ ಗುರು ಯಾರೂಂತ ಕೇಳಿದ್ರೆ ಮಾತ್ರ ನೋ ಆನ್ಸರ್. ಮತ್ತೂ ನೀವೇನಾದ್ರೂ ಕೇಳಿದ್ರೆ ಈ ಕ್ಯೂಟ್ ಕ್ಯೂಟ್ ಆಗಿರೋ ಪುಟಾಣಿ ಹೇಳೋ ಆನ್ಸರ್ ಯೂಟ್ಯೂಬ್. ಅರೆ, ಯೋಗ ಗುರುವಿಗೂ ಈ ಯೂಟ್ಯೂಬ್ಗೂ ಏನ್ ಸಂಬಂಧ ಅಂತೀರಾ? ಅಲ್ಲೇ ಇದೆ ನೋಡಿ ಈ ತೊಗರಿ ನಾಡಿನ ಕುವರಿಯ ಸಾಧನೆಯ ಸೀಕ್ರೇಟ್.
ಕಲಬುರಗಿಯ ಈ ಕ್ಯೂಟ್ ಬಾಲಕಿ ಯೋಗ ಕಲಿತಿದ್ದೇ ಯೂಟ್ಯೂಬ್ ನೋಡಿ. ಒಂದನೇ ಕ್ಲಾಸ್ ಓದುತ್ತಿರೋ ಆರು ವರ್ಷದ ಈ ಬಾಲಕಿಯ ಹೆಸರು ಪ್ರಣೀತಾ. ಕಲಬುರಗಿಯ ನಿವಾಸಿ ನವೀನಕುಮಾರ ಹಾಗೂ ಸಂಗೀತ ದಂಪತಿಯ ಮುದ್ದಾದ ಮಗಳಿವಳು. ಹೆತ್ತವರ ಮೊಬೈಲ್ನಲ್ಲಿ ಯೂಟ್ಯೂಬ್ ಓಪನ್ ಮಾಡಿ ಯೋಗ ನೋಡುತ್ತಿದ್ದ ಪ್ರಣೀತಾ, ತಾನು ಯೋಗಾಸನ ಕಲಿಯಲು ಆರಂಭಿಸಿದ್ದಾಳೆ. ಹೀಗೆ ಕಲಿಯುತ್ತಾ ಕಲಿಯುತ್ತಾ ಪ್ರಣೀತಾ ಯೂಟ್ಯೂಬ್ನ್ನೇ ಗುರುವನ್ನಾಗಿಸಿ ಹತ್ತರಿಂದ ಹದಿನೈದು ವಿವಿಧ ಭಂಗಿಯ ಯೋಗಾಸನಗಳನ್ನು ಕಲಿತು ಸೈ ಎನಿಸಿಕೊಂಡಿದ್ದಾಳೆ.
ತಂದೆ, ತಾಯಿಯ ಪ್ರೋತ್ಸಾಹ
ಪುಟಾಣಿ ಪ್ರಣೀತಾ ಈಗಂತೂ ನೀರು ಕುಡಿದಷ್ಟೇ ಸಲೀಸಾಗಿ ಯೋಗವನ್ನು ಮಾಡುತ್ತಾಳೆ. ಪ್ರಣೀತಾಳ ಈ ಯೋಗ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳು ಪುರಸ್ಕಾರ ನೀಡಿ ಪ್ರೋತ್ಸಾಹಿಸಿವೆ. ಯೋಗದಲ್ಲಿ ಸಾಧನೆ ಮಾಡಲು ಹೊರಟಿರುವ ಈ ಪುಟ್ಟ ಬಾಲಕಿಗೆ ಆಕೆಯ ತಂದೆ, ತಾಯಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ ಮೊಬೈಲ್ ವಿಡಿಯೋ ಮೂಲಕವೇ ಯೋಗಾಸನ ಕಲಿತು ನೋಡುಗರನ್ನು ಈ ಮಟ್ಟಿಗೆ ಬೆರಗಾಗುವಂತೆ ಮಾಡುವ ಪ್ರಣಿತಾಳ ಈ ಸಾಧನೆ ಪೋಷಕರ ಖುಷಿಯನ್ನೂ ಹೆಚ್ಚಿಸಿದೆ.
ಪುಟಾಣಿ ಸಾಧನೆಯ ಛಲ
ಮಕ್ಕಳಿಗೆ ಮೊಬೈಲ್ ನೀಡಬಾರದೆನ್ನುವ ಪೋಷಕರ ವಾದ ಸರಿಯೇ ಇರಬಹುದು. ಆದರೆ, ಪ್ರಣೀತಾಳಂತಹ ಬಾಲಕಿಯರಿಗೆ ಮಾತ್ರ ಮೊಬೈಲ್ ಅನ್ನೋದು ಕೇವಲ ಯೋಗ ಕಲಿಕೆಯ ಸಾಧನವಷ್ಟೇ. ಈ ಪುಟ್ಟ ಬಾಲಕಿಯ ಸಾಧನೆಯು ಮುಂದೆ ಇಡೀ ಜಗತ್ತು ಗುರುತಿಸುವಂತಾಗಲಿ ಅನ್ನೋದೇ ನಮ್ಮ ಹಾರೈಕೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ