ಕಲಬುರಗಿ: ಕತ್ತಲಾಗ್ತಲೇ ಆ ಗ್ರಾಮದಲ್ಲಿ ಒಂದು ರೀತಿಯ ಸಂಭ್ರಮ. ಮರಕ್ಕೆ ಕಟ್ಟಲಾದ ದೊಡ್ಡದಾದ ಲೈಟ್ನಡಿ ಎತ್ತುಗಳ ಸುತ್ತು. ಇದೆಲ್ಲವನ್ನು ಕುತೂಹಲ, ಖುಷಿಯಿಂದ ವೀಕ್ಷಣೆ ಮಾಡ್ತಿರೋ ಗ್ರಾಮಸ್ಥರು. ಅರೇ! ಇದೇನು ಸಂಭ್ರಮ ಅಂತಾ ಯುವ ಜನಾಂಗ ಕೇಳೋದ್ರಲ್ಲಿ ಆಶ್ಚರ್ಯವಿಲ್ಲ. ಅಂತಹ ಸಾಂಪ್ರದಾಯಿಕ ಕೃಷಿ ವಿಧಾನವೊಂದು (Traditional Agriculture) ಇಲ್ಲಿ ಮರು ಜೀವ ಪಡೆದಿತ್ತು.
ಯೆಸ್, ಆಧುನಿಕ ಯಂತ್ರೋಪಕರಣ ಕಾಲದಲ್ಲಿ ಇಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಅಂತ್ಯ ಹಾಡಲಾಗಿದೆ. ಆದ್ರೆ ಕಲಬುರಗಿಯ ಚಿತಾಪೂರ ತಾಲೂಕಿನ ಸೂಗುರು ಎನ್ ಗ್ರಾಮದಲ್ಲಿ ಕಣ್ಮರೆಯಾಗಿದ್ದ ಆಚರಣೆಗೆ ಮತ್ತೆ ಜೀವಕಳೆ ಬಂದಿದೆ.
ಮುಂದಿನ ಪೀಳಿಗೆಗೆ ಸಂಸ್ಕೃತಿ ಪರಿಚಯ
ಗ್ರಾಮಸ್ಥರೆಲ್ಲ ಕತ್ತಲಾಗ್ತಿದ್ದಂತೆ ಕುತೂಹಲದಿಂದ ಬಂದ್ರೆ, ರೈತರು ಜೋಳದ ರಾಶಿಯೊಂದಿಗೆ ಭೋಜಲಿಂಗೇಶ್ವರ ಮಠದ ಕಡೆಗೆ ಆಗಮಿಸಿದ್ರು. ಇಲ್ಲಿನ ಪೀಠಾಧಿಪತಿಯಾಗಿರುವ ಈರಗಪ್ಪ ತಾತ ಅವರ ನೇತೃತ್ವದಲ್ಲಿ ಮುಂದಿನ ಪೀಳಿಗೆಗೆ ಜೋಳದ ಹಂತಿ ರಾಶಿ ಕಟ್ಟುವ ಹಂತಿಕಟ್ಟೆ ಆಚರಣೆಯನ್ನು ಪರಿಚಯಿಸಲಾಯಿತು.
ರಾತ್ರಿಯಿಡೀ ಜಾಗರಣೆಯಂತೆ ಜನ ಈ ಹಂತಿಕಟ್ಟೆ ಆಚರಣೆಯನ್ನ ಸಂಭ್ರಮಿಸಿದರು. ಎತ್ತುಗಳನ್ನು ಗಿರಗಿರನೆ ತಿರುಗಿಸುತ್ತಾ ಹಂತಿ ರಾಶಿ ಮಾಡುತ್ತಿದ್ರೆ, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಉತ್ಸಾಹದಿಂದ ತೊಡಗಿಕೊಂಡರು.
ಇದನ್ನೂ ಓದಿ: Kalaburagi: ಈ ಶಾಲೆಯಲ್ಲಿ ಪ್ರತಿನಿತ್ಯ ಎರಡು ಗಂಟೆಯಷ್ಟೇ ಪಾಠ!
ಯಂತ್ರೋಪಕರಣ ಇದ್ದರೂ ಜನಪದರ ಸಂಭ್ರಮ
ಇನ್ನು ಸೂಗುರು ಗ್ರಾಮಕ್ಕೆ ಸಾವಿರಾರು ಜನ ರೈತರು ಬಂದು ಈ ಹಂತಿಕಟ್ಟೆ ಜೋಳದ ರಾಶಿ ಮಾಡೋದ್ರಲ್ಲಿ ಪಾಲ್ಗೊಂಡರು. ರಾತ್ರಿ ಇಡೀ ಬರುವ ರೈತರಿಗೆ ಮಠದ ಕಡೆಯಿಂದ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಇನ್ನೂ ಹಂತಿ ರಾಶಿ ಮಾಡುವ ಸುತ್ತಲೂ ಬೇರೆ ಊರುಗಳಿಂದ ಬರುವ ಜನರು ಕುತೂಹಲದಿಂದ ನೋಡಿ ಖುಷಿಪಟ್ಟರು. ಸತತ ಮೂರು ವರ್ಷಗಳಿಂದ ಮಠದ ಶ್ರೀಗಳು ಇದನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾ ಬಂದಿದ್ದು, ಆಧುನಿಕ ಯಂತ್ರೋಪಕರಣಗಳಿದ್ರೂ ಮಠದ ಮೇಲಿನ ಅಭಿಮಾನದಿಂದ ಜನ ಈ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಇದನ್ನೂ ಓದಿ: Qawwali Family: ಮನೆಯವರೆಲ್ರೂ ಕಲಾವಿದರು, ಕವಾಲಿ ಲೋಕದಲ್ಲಿ ತೇಲಾಡಿಸುವ ಕುಟುಂಬವಿದು!
ಒಟ್ಟಾರೆ ಆಧುನಿಕ ಯುಗದಲ್ಲಿ ನವೀನ ಮಾದರಿಯ ಯಂತ್ರೋಪಕರಣಗಳು ಬಂದಿರುವುದರಿಂದ ರೈತರು ರಾಶಿ ಮಾಡುವುದೇ ಕಡಿಮೆಯಾಗಿದೆ. ಹೀಗಾಗಿ ಇಂತಹ ಹಂತಿ ರಾಶಿಯನ್ನು ಸತತ ಮೂರು ವರ್ಷಗಳ ಕಾಲ ಭೋಜಲಿಂಗೇಶ್ವರ ಮಠದಿಂದ ನಡೆಸಿಕೊಂಡು ಬರುತ್ತಿದ್ದು, ರೈತಾಪಿ ಜನರು ಕೂಡಾ ಸಂಭ್ರಮದಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ