ಕಲಬುರಗಿ: ಆಸ್ಪತ್ರೆ ಬೆಡ್ನಲ್ಲಿ ದಾಖಲಾಗಿರೋ ರೋಗಿಗಳು, ಅವರನ್ನ ವಿಚಾರಿಸುತ್ತಿರುವ ದಂಪತಿ. ಅಂದಹಾಗೆ ಇದ್ಯಾವುದೋ ಸರ್ಕಾರಿ ಆಸ್ಪತ್ರೆ (Government Hospital) ಅಲ್ಲ, ಅಲ್ಲಿನ ವ್ಯವಸ್ಥೆ ನೋಡೋ ಈ ದಂಪತಿ ಈ ಭಾಗದ ಎಂಎಲ್ಎ, ಎಂಎಲ್ಸಿನೂ ಅಲ್ಲ. ಆದರೆ, ಸರ್ಕಾರವೊಂದು ಮಾಡಬೇಕಿದ್ದ ಜವಾಬ್ದಾರಿಯುತ ಕೆಲಸವನ್ನ ಈ ದಂಪತಿ ಮಾಡುತ್ತಾ ಬಂದಿದ್ದಾರೆ. ಅದೆಷ್ಟೋ ಬಡರೋಗಿಗಳ ಪಾಲಿನ ಜೀವದಾತರೂ (Lifeline) ಆಗಿದ್ದಾರೆ. ಹಾಗಿದ್ರೆ ಇವ್ರು ಯಾರು? ಇವ್ರು ನೀಡ್ತಿರೋ ಸೇವೆ ಏನು ಅಂತೀರಾ? (Free Dialysis Service) ಎಲ್ಲವನ್ನೂ ಹೇಳ್ತೀವಿ ನೋಡಿ
ಉಚಿತ ಡಯಾಲಿಸಿಸ್ ಕೇಂದ್ರ
ಯೆಸ್, ಇದು ಕಲಬುರಗಿ ನಗರದ ಶ್ರೀಮತಿ ಪೂರ್ಣಿಮಾ ಪಿ ಎಮ್ ಬಿರಾದಾರ ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯಗಳು. ಅಂದಹಾಗೆ ಇದು ಯಾವುದೋ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರನೂ ಅಲ್ಲ, ಬದಲಿಗೆ ಇಲ್ಲಿ ಕಾಣ್ತಿರೋ ಉದ್ಯಮಿ ಶರಣು ಪಪ್ಪಾ ನಿರ್ಮಿಸಿದ ಉಚಿತ ಡಯಾಲಿಸಿಸ್ ಕೇಂದ್ರ. ಪ್ರತಿದಿನ ಹತ್ತಾರು ಡಯಾಲಿಸಿಸ್ ರೋಗಿಗಳು ಇಲ್ಲಿಗೆ ಬಂದು ಡಯಾಲಿಸಿಸ್ ಮಾಡಿಕೊಂಡು ಹೋಗುತ್ತಾರೆ.
ಸರಕಾರದ ನೆರವು ಪಡೆದಿಲ್ಲ
ಹೀಗೆ ಯಾರೇ ಬಡರೋಗಿಗಳು ಬಂದ್ರೂ ಅವ್ರಿಗೆ ಉಚಿತವಾಗಿಯೇ ಡಯಾಲಿಸಿಸ್ ವ್ಯವಸ್ಥೆಯನ್ನ ಇಲ್ಲಿ ಕಲ್ಪಿಸಲಾಗಿದೆ. ಸರಕಾರದಿಂದ ಬಿಡಿಗಾಸು ಪಡೆಯದೇ ಶರಣು ಪಪ್ಪಾ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಇಂತಹ ಮಹಾತ್ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಕಲಬುರಗಿ ನಗರದ ಏಷ್ಯನ್ ಬ್ಯುಸಿನೆಸ್ ಮಾಲ್ನ ಬಾಡಿಗೆ ಕಟ್ಟಡದಲ್ಲಿದ್ದರೂ ಯಾವ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಉಚಿತ ಸೇವೆ ನೀಡುತ್ತಾ ಬಂದಿದೆ.
ಸ್ನೇಹಿತರ, ಕುಟುಂಬಿಕರ ಸಾಥ್
ಫಾರ್ಮಸಿ ವಿದ್ಯಾಭ್ಯಾಸ ಮಾಡಿದ ಶರಣು ಪಪ್ಪಾ ಇವರು, ಮೆಡಿಕಲ್ ರೆಪ್ರೆಸೆಂಟೇಟಿವ್ ಕಾರ್ಯ ನಡೆಸುವ ಮೂಲಕ ಸಹಿ ಅನಿಸಿಕೊಂಡಿದ್ದಾರೆ. ಅಲ್ಲದೇ, ಅಲ್ಲಿ ತಕ್ಕಮಟ್ಟಿಗೆ ಗಳಿಸಿದ ಸಂಪಾದನೆಯನ್ನ ಬಡ ರೋಗಿಗಳಿಗೆ ಮೀಸಲು ಇಟ್ಟಿದ್ದಾರೆ. ಹೀಗಾಗಿ ತಮ್ಮ ಸ್ನೇಹಿತರ ಜೊತೆಗೂಡಿ G99 ಎಂಬ ತಂಡವನ್ನ ಕಟ್ಟಿದ್ದು, ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದ್ದಾರೆ. ಸ್ನೇಹಿತರು ಹಾಗೂ ಕುಟುಂಬಸ್ಥರ ಆರ್ಥಿಕ ಸಹಕಾರ ಇವರ ಕೆಲಸವನ್ನ ಪೂರ್ತಿಗೊಳಿಸಿದೆ.
ನೂರಾರು ರೋಗಿಗಳಿಗೆ ಆಸರೆ
ಹೀಗೆ ಎರಡು ವರ್ಷಗಳಿಂದ ಒಂದೇ ಸಮಯಕ್ಕೆ ಹತ್ತು ಮಂದಿಯ ಡಯಾಲಿಸಿಸ್ ಮಾಡಬಹುದಾದ ವ್ಯವಸ್ಥೆ ಇಲ್ಲಿದೆ. ಇದು ಅದೆಷ್ಟೋ ಬಡಪಾಯಿ ಕಿಡ್ನಿ ರೋಗಿಗಳಿಗೆ ನೆರವಾಗಿದೆ. ಇನ್ನು ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿನಿತ್ಯವೂ ನೂರಾರು ರೋಗಿಗಳು ಬಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Kalyana Karnataka: ಆರ್ಡಿನರಿ ಬಸ್ಗೆ ಎಕ್ಸ್ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ
ಔಷಧಿಗಷ್ಟೇ ಫೀಸು
ದೂರದ ಬೆಂಗಳೂರು ಅಥವಾ ಖಾಸಗಿ ದುಬಾರಿ ಆಸ್ಪತ್ರೆಗೆ ಹೋಗಲಾಗದೆ ಡಯಾಲಿಸಿಸ್ ಮಾಡಿಸಿಕೊಳ್ಳದೆ ನರಳಾಡುವ ಅದೆಷ್ಟೋ ಬಡವರಿಗೆ ಕಲಬುರಗಿಯಲ್ಲಿ ಡಯಾಲಿಸಿಸ್ ಕೇಂದ್ರವನ್ನ ಸ್ಥಾಪಿಸುವ ಮೂಲಕ ಉಚಿತ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಆದರೆ ರೋಗಿಗಳು 300 ಅಥವಾ 500 ರೂ. ಔಷಧಿಯನ್ನು ಹೊರಗಡೆಯಿಂದ ತರಬೇಕಾಗುತ್ತದೆ. ಮಿಕ್ಕಿದೆಲ್ಲವೂ ಉಚಿತವಾಗಿ ಭರಿಸಲಾಗುತ್ತದೆ.
ಇದನ್ನೂ ಓದಿ: Kalaburagi: ಬೆಳೆ ರಕ್ಷಣೆಗೆ ಕಲಬುರಗಿ ರೈತರ ಹೊಸ ಉಪಾಯ!
ಸರಕಾರದ ನೆರವು ಬೇಕಿದೆ
ಸದ್ಯದ ಪರಿಸ್ಥಿತಿಯಲ್ಲಿ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಶರಣು ಪಪ್ಪಾ ಅವರ ಹೊರೆಯೂ ಹೆಚ್ಚಾಗಿದೆ. ಹಾಗಾಗಿ ಸರಕಾರದ ನೆರವನ್ನ ಬಯಸುತ್ತಿದ್ದಾರೆ. ಆದರೂ ಎಷ್ಟೇ ಕಷ್ಟ ಆದರೂ ಡಯಾಲಿಸಿಸ್ ಕೇಂದ್ರವನ್ನ ನಡೆಸುತ್ತಾ ಬಂದಿದ್ದಾರೆ. ಸರಕಾರ ಮಾಡಬೇಕಾದ ಕೆಲಸವನ್ನ ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲ ಅನ್ನೋ ರೀತೀಲಿ ನಡೆಸಿಕೊಂಡು ಬರಲಾಗ್ತಿರುವ ಈ ಆಸ್ಪತ್ರೆ ಬಗ್ಗೆ ಸರಕಾರ ಗಮನ ಹರಿಸಿದ್ದಲ್ಲಿ ಅದೆಷ್ಟೋ ಬಡಜೀವಗಳಿಗೆ ನೆರವಾದೀತು.
ಶರಣು ಪಪ್ಪಾ ಅವರ ಸಂಪರ್ಕ ಸಂಖ್ಯೆ ಹೀಗಿದೆ: 9620644671
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ