• Home
 • »
 • News
 • »
 • kalburgi
 • »
 • Kalaburagi: ಈ ಪುರಾತನ ದೇಗುಲ ದರ್ಶನದಿಂದಲೇ ಶುಭವಾಗುತ್ತಂತೆ!

Kalaburagi: ಈ ಪುರಾತನ ದೇಗುಲ ದರ್ಶನದಿಂದಲೇ ಶುಭವಾಗುತ್ತಂತೆ!

ದೇವಸ್ಥಾನ ದರ್ಶನ ಮಾಡಿ

"ದೇವಸ್ಥಾನ ದರ್ಶನ ಮಾಡಿ"

ದೇವಸ್ಥಾನದ ಎದುರಿಗೆ ವಿಶಾಲವಾದ ತೆರೆದ ನಂದಿ ಮಂಟಪವಿದೆ. ಈ ಮಂಟಪದಲ್ಲಿರುವ ಬೃಹತ್ ನಂದಿ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತನೆ ಮಾಡಿದ್ದು ಕಣ್ಮನ ಸೆಳೆಯುತ್ತದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಪುರಾತನವಾದ ಭವ್ಯ ವಾಸ್ತುಶಿಲ್ಪ ಅಂದ್ರೆ ತಕ್ಷಣ ನೆನಪಾಗೋದೇ ಶಿಲ್ಪಗಳ ನೆಲೆಬೀಡು ಬೇಲೂರು, ಹಳೇಬೀಡು. ಆದರೆ, ಕಲಬುರ್ಗಿ ಜಿಲ್ಲೆಯಲ್ಲಿ (Kalaburagi News) ಒಂದು ಗ್ರಾಮವಿದೆ. ಆ ಗ್ರಾಮದ ಪುರಾತನ ದೇವಾಲಯ (Ancient Temple In Kalaburagi)  ಥೇಟ್ ಹಳೇಬೀಡು, ಬೇಲೂರು ವಾಸ್ತುಶಿಲ್ಪಗಳನ್ನೇ ನೆನಪಿಸುತ್ತೆ. ಹಾಗಾದ್ರೆ ಯಾವುದು ಆ ಗ್ರಾಮ ಅಂತಿರಾ! ಈ ಸ್ಟೋರಿ ನೋಡಿ. ಅಳಿವಿನಂಚಿಗೆ ಬಂದಿರುವ ಪುರಾತನ ದೇವಸ್ಥಾನ, ಒಂದೇ ಕಲ್ಲಿನಲಿ ಕೆತ್ತನೆ ಮಾಡಿರುವ ಬೃಹತ್ ನಂದಿ ವಿಗ್ರಹ, ನಾಗದೇವತೆ, ಶಿವಪಾರ್ವತಿಯರು ಹೀಗೆ ಹತ್ತು ಹಲವು ವಾಸ್ತುಶಿಲ್ಪಗಳು. ಇವುಗಳನ್ನ ನೋಡುತ್ತಿದ್ರೆ ತಾನು ತಾನಾಗೇ ಕೈ ಮುಗಿದುಬಿಡ್ತೀವಿ!


  ಸಾಮಾನ್ಯವಾಗಿ ಈ ಮಾದರಿಯ ದೇವಸ್ಥಾನಗಳು, ವಾಸ್ತುಶಿಲ್ಪಗಳು ಕಂಡುಬರುವುದು ಬೇಲೂರು, ಹಳೇಬೀಡು ಭಾಗದಲ್ಲಿ. ಆದರೆ ನಾವು ತೋರಿಸುತ್ತಿರುವ ಈ ದೃಶ್ಯಗಳು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹೊಡಲ್ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ್ದು.


  ಕ್ರಿ.ಶ 1880ರಲ್ಲಿ ನಿರ್ಮಾಣ
  ಈ ದೇವಸ್ಥಾನವು ಸಾವಿರಾರು ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ಹೊಡಲ್ ಶ್ರೀ ಪ್ರಸನ್ನ ರಾಮೇಶ್ವರ ದೇವಸ್ಥಾನವೇ ಇಂದಿನ ರಾಮಲಿಂಗೇಶ್ವರ ದೇವಸ್ಥಾನವಂತೆ. ಈ ದೇವಸ್ಥಾನವನ್ನ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಕ್ರಿ.ಶ 1880ರಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಅನ್ನುತ್ತೆ ಇತಿಹಾಸ.


  ಕಲ್ಯಾಣದ ಚಾಲುಕ್ಯರಿಂದ ದಾನ
  ಈ ದೇವಸ್ಥಾನಕ್ಕೆ ಕಲ್ಯಾಣದ ಚಾಲುಕ್ಯರು ಸೇರಿದಂತೆ ಅನೇಕ ಅರಸ ಮನೆತನಗಳು ನಡೆದುಕೊಳ್ಳುತ್ತಿದ್ದವಂತೆ. ಕಲ್ಯಾಣದ  ಚಾಲುಕ್ಯರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಭೂಮಿಯನ್ನು ದಾನ ಕೊಟ್ಟಿದ್ರು ಎಂದು ದೇವಸ್ಥಾನದ ಮಂಟಪದಲ್ಲಿರುವ ಹಳೆಗನ್ನಡ ಶಾಸನದಲ್ಲಿ ಉಲ್ಲೇಖಿಸಲಾಗಿದೆ.


  ಇದನ್ನೂ ಓದಿ: Susla Recipe: ಮಸ್ತ್​ ಮಸ್ತ್ ರುಚಿಯ ಸೂಸಲಾ! ಅದ್ಭುತ ರೆಸಿಪಿ ಇಲ್ಲಿದೆ


  ಈ ದೇವಸ್ಥಾನವು ಮೂರು ಗರ್ಭಗೃಹಗಳನ್ನು ಹೊಂದಿದ್ದು ಪೂರ್ವಾಭಿಮುಖಕ್ಕೆ ನಂದಿ ಮಂಟಪವಿದೆ. ಪ್ರಧಾನ ಗರ್ಭಗುಡಿಯಲ್ಲಿ ರಾಮಲಿಂಗೇಶ್ವರ ಶಿವಲಿಂಗವಿದೆ. ದೇವಸ್ಥಾನದ ಒಳಗಡೆ ಹಾಗೂ ಹೊರಗಡೆಯಲ್ಲಿ ಕಲ್ಲಿನಿಂದ ಕೆತ್ತನೆ ಮಾಡಿರುವಂತಹ ಶಿವ ಪಾರ್ವತಿ, ಬ್ರಹ್ಮ ವಿಷ್ಡು, ನಾಗದೇವತೆ, ಮಹಿಷಾಸುರ ಮರ್ದಿನಿ, ನವಗ್ರಹಗಳ ಸುಂದರ ಶಿಲೆಗಳಿವೆ. ದೇವಾಲಯದ ಮೇಲ್ಚಾವಣಿಯನ್ನು ಅಷ್ಟದಿಕ್ಪಾಲಕರ ಸುಂದರ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಇಲ್ಲಿನ ಕಂಬಗಳು ಅಲಂಕಾರಿಕ ಕೆತ್ತನೆಗಳಿಂದ ಕೂಡಿವೆ. ದ್ವಾರ ಬಾಗಿಲುಗಳು ಶೈವದ್ವಾರಪಾಲಕರ ಚೌರಿಧಾರಿ ಪರಿಚಾರಿಕೆಯರ ಹಾಗೂ ನಂದಿರೂಢ ಉಮಾಮಹೇಶ್ವರ ಶಿಲ್ಪಗಳನ್ನು ಹೊಂದಿವೆ.


  Kalaburagi Hodel Ramalingeshwara Temple
  ದರ್ಶನ ಪಡೆಯಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಒಂದೇ ಕಲ್ಲಿನಲ್ಲಿ ಬೃಹತ್ ನಂದಿ ವಿಗ್ರಹ
  ಮೇಲ್ಭಾಗದಲ್ಲಿ ಮಕರ ತೋರಣೆಗಳಿವೆ. ದೇವಸ್ಥಾನದ ಎದುರಿಗೆ ವಿಶಾಲವಾದ ತೆರೆದ ನಂದಿ ಮಂಟಪವಿದೆ. ಈ ಮಂಟಪದಲ್ಲಿರುವ ಬೃಹತ್ ನಂದಿ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತನೆ ಮಾಡಿದ್ದು ಕಣ್ಮನ ಸೆಳೆಯುತ್ತದೆ. ದೇವಸ್ಥಾನದ ಸುತ್ತಮುತ್ತಲು ಹನುಮಂತ, ಬೀರದೇವರು, ಬಸವಣ್ಣ, ಲಕ್ಷ್ಮಿದೇವಿ ಹಾಗೂ ದುರ್ಗಾ ದೇವಿಯ ಹೊಸ ಮಾದರಿಯ ದೇವಸ್ಥಾನಗಳಿವೆ.


  ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!


  ಇಷ್ಟೊಂದು ವೈಶಿಷ್ಟತೆ ಹಾಗೂ ಪುರಾತನ ಇತಿಹಾಸವನ್ನು ಹೊಂದಿರುವ ದೇವಸ್ಥಾನ ಅಳಿವಿನಂಚಿಗೆ ಬಂದು ನಿಂತಿರುವುದು ಮಾತ್ರ ವಿಪರ್ಯಾಸವೇ ಸರಿ. ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಈ ದೇವಸ್ಥಾನವು ನಶಿಸಿ ಹೋಗುತ್ತಿದೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಿ ದೇವಸ್ಥಾನವನ್ನು ನಶಿಸಿ ಹೋಗದಂತೆ ಸಂರಕ್ಷಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: