ಕಲಬುರಗಿ: ಒಂದು ಕಡೆ ದೊಡ್ಡದಾದ ತೇರನ್ನ ಎಳೆಯುತ್ತಿರುವ ಭಕ್ತಗಣ, ಇನ್ನೊಂದೆಡೆ ರಥದ ಮೇಲೆ ಉತ್ತುತ್ತಿ ಕಾರಿಕಾ ಎಸೆದು ಭಕ್ತಿ ಮೆರೆದ ಜನ. ಮಗದೊಂದೆಡೆ ಮೈದಾನದಲ್ಲಿ ನಡೆಯಿತು ಕುಸ್ತಿ ಕಾಳಗ. ಹೌದು, ಇದೆಲ್ಲವೂ ಕಂಡು ಬಂದಿದ್ದು ಕಲಬುರಗಿಯ ಇತಿಹಾಸ ಪ್ರಸಿದ್ಧ ಜೋಡು ಬಸವೇಶ್ವರ ದೇವಸ್ಥಾನದ (Jodu Basaveshwara Temple) ಜಾತ್ರಾ ಮಹೋತ್ಸವದಲ್ಲಿ.
ಜಾತ್ರಾ ಸಂಭ್ರಮ
ಹೌದು, ಎಲ್ಲಿ ನೋಡಿದರು ಜನ ಸಾಗರ, ಸಂಭ್ರಮ. ಬಸವೇಶ್ವರ ದೇವರ ಆಶೀರ್ವಾದ ಪಡೆಯುವ ಧಾವಂತದಲ್ಲಿ ಸಹಸ್ರಾರು ಭಕ್ತರು. ಇಂತಹ ದೃಶ್ಯ ಮಾಮೂಲು ಎನ್ನುವಂತೆ ಐದು ದಿನಗಳ ಕಾಲ ಉದನೂರು ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವ ಸಾಕ್ಷಿಯಾಯಿತು.
ರಥೋತ್ಸವ ಸಂಭ್ರಮ
ನೆರೆದ ಭಕ್ತರಂತೂ ಮುಗಿಲೆತ್ತರಕ್ಕೆ ಇರೋವಂತೆ ಕಾಣುತ್ತಿದ್ದ ದೊಡ್ಡದಾದ ರಥವನ್ನ ಎಳೆದು ಸಂಭ್ರಮಿಸಿದರು. ಹೀಗೆ ರಥ ಸಾಗಬೇಕಾದರೆ ಉಳಿದ ಭಕ್ತರು ರಾಶಿ ರಾಶಿ ಉತ್ತುತ್ತಿ ಕಾರಿಕಾ ಎಸೆದು ದೇವರನ್ನ ಬೇಡಿಕೊಂಡರು. ಈ ಜಾತ್ರಾ ಸಂಭ್ರಮಕ್ಕೆ ಕಲಬುರ್ಗಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ನೆರೆಯ ರಾಜ್ಯಗಳ ಭಕ್ತರು ಆಗಮಿಸಿದ್ದರು. ನೆರೆದವರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು.
ವಿವಿಧ ಧಾರ್ಮಿಕ ಕಾರ್ಯಕ್ರಮ
ಜಾತ್ರಾ ಮಹೋತ್ಸವದ ಹಿನ್ನೆಲೆ ಐದು ದಿನಗಳ ಕಾಲ ಪ್ರತಿನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ಜರುಗಿದವು. ಕಡಕೋಳ ಮಡಿವಾಳೇಶ್ವರ ಪುರಾಣ, ಭಜನೆ ಕೀರ್ತನೆ ಜೋಡಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ರಥೋತ್ಸವ ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಇದನ್ನೂ ಓದಿ: Kalaburagi: ಊರು ಕಾಯುವ ಆಂಜನೇಯನಿಗೆ ಇಲ್ಲಿ ವೃದ್ಧರೊಬ್ಬರೇ ಆಸರೆ!
ಕುಸ್ತಿ ಮೆರುಗು
ಇನ್ನು ಜಾತ್ರಾ ಮೈದಾನದಲ್ಲಿ ನಡೆದ ಜಂಗಿ ಕುಸ್ತಿಯಂತೂ ಎಲ್ಲ ವಯೋಮಾನದ ಜನರನ್ನ ಆಕರ್ಷಿಸಿತು. ಕುಸ್ತಿಪಟುಗಳು ಅಷ್ಟೇ ತಮ್ಮ ಎದುರಾಳಿಗಳನ್ನು ಬಗ್ಗು ಬಡಿಯಲು ಮಾಡುತ್ತಿದ್ದ ಕಸರತ್ತು ರೋಮಾಂಚನಕಾರಿಯಾಗಿತ್ತು.
ಇದನ್ನೂ ಓದಿ: Kalaburagi: ಕರುನಾಡಿನಲ್ಲಿ 70 ಎಕರೆಯ ಬೌದ್ಧ ವಿಹಾರ! 2 ಸಾವಿರ ಭಕ್ತರಿಂದ ಒಂದೇ ಸಲಕ್ಕೆ ಪ್ರಾರ್ಥನೆ!
ಒಟ್ಟಿನಲ್ಲಿ ಕಲಬುರಗಿಯ ಜೋಡು ಬಸವೇಶ್ವರ ದೇವರ ಜಾತ್ರೆ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು. ಭಕ್ತರು ಐದು ದಿವಸಗಳ ಕಾಲ ಭಕ್ತಿ ಕಡಲಲ್ಲಿ ಮಿಂದೆದ್ದರು.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ