ಕಲಬುರಗಿ: ಕೃಷಿ (Agriculture) ಉತ್ಪನ್ನಗಳನ್ನು ಬೆಳೆಯುವ ರೈತರು ಅದರ ಮಾರಾಟಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸುವುದು ಇಂದು ನಿನ್ನೆಯ ವಿಷಯವಲ್ಲ. ಸರಕಾರ ಎಷ್ಟೇ ಹೇಳಿದರೂ ಇಂದಿಗೂ ಅದೇ ಪದ್ಧತಿ ಮುಂದುವರೆಯುತ್ತಾ ಬಂದಿದೆ. ಇದೀಗ ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ (Support Price) ಯೋಜನೆಯಡಿ 2022-23ನೇ ಸಾಲಿನ ಮುಂಗಾರು (Monsoon) ಋತುವಿನಲ್ಲಿ ಕಲಬುರಗಿಯಲ್ಲಿ ಭತ್ತ (Paddy) ಮತ್ತು ಜೋಳ (Corn) ಬೆಳೆದ ರೈತರಿಂದ ಭತ್ತ ಹಾಗೂ ಜೋಳ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ (Karnataka Food and Civil Supplies Corporation) ತಲಾ 7 ಭತ್ತ ಹಾಗೂ ಜೋಳ ಖರೀದಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ತೆರೆಯಲಾಗಿದೆ. ಕಲಬುರಗಿಯ ರೈತರ ಪಾಲಿಗಂತೂ ಇದು ಸಿಹಿ ಸುದ್ದಿ. ನೇರವಾಗಿ ಖರೀದಿ ಕೇಂದ್ರವೇ ರೈತರ ಬಳಿಗೆ ತೆರಳಿ ಜೋಳ, ಭತ್ತವನ್ನ ಖರೀದಿಸಲಿದೆ.
ಖರೀದಿ ದರ ಇಂತಿದೆ
ಭತ್ತ (ಸಾಮಾನ್ಯ) 2,040 ರೂ., ಭತ್ತ (ಗ್ರೇಡ್-ಎ) 2,060 ರೂ., ಬಿಳಿ ಜೋಳ(ಹೈಬ್ರಿಡ್) 2,970 ರೂ. ಹಾಗೂ ಬಿಳಿ ಜೋಳ (ಮಾಲ್ದಂಡಿ) 2,990 ರೂ. ಗಳಂತೆ ಖರೀದಿಸಲಾಗುವುದು.
ರೈತರಿಂದ ಹೀಗೆ ಪಡೆಯುತ್ತಾರೆ
ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಭತ್ತ ಹಾಗೂ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಮೀರದಂತೆ ಜೋಳ ಖರೀದಿಸಲಾಗುತ್ತದೆ.
FD Rates: ಗುಡ್ನ್ಯೂಸ್, ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಿಸಿದ ಮತ್ತೊಂದು ಬ್ಯಾಂಕ್!
ನೋಂದಣಿ ಕಡ್ಡಾಯ
ಭತ್ತ ಹಾಗೂ ಜೋಳ ನೀಡಲು ಇಚ್ಛೆ ವ್ಯಕ್ತಪಡಿಸುವ ರೈತರ ನೋಂದಣಿ ಪ್ರಕ್ರಿಯೆ ಇದೇ ಡಿಸೆಂಬರ್ 15 ರಿಂದ ಪ್ರಾರಂಭಗೊಳ್ಳಲಿದೆ. 2023ರ ಜನವರಿ 1 ರಿಂದ 31ರ ವರೆಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ. ಆಸಕ್ತ ರೈತರು ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಡಿ.ಸಿ ಯಶವಂತ ಗುರಕುರ್ ತಿಳಿಸಿದ್ದಾರೆ.
ಭತ್ತ ಖರೀದಿಯ ಸ್ಥಳಗಳು ಯಾವುದೆಲ್ಲ?
ಭತ್ತ ಖರೀದಿಗೆ ಚಿತ್ತಾಪೂರ ತಾಲೂಕಿನ ಸನ್ನತ್ತಿ ಮತ್ತು ಕಲ್ಲೂರು, ಸೇಡಂ ತಾಲೂಕಿನ ಮುಧೋಳ, ಕೋಳಕುಂದಾ ಹಾಗೂ ನಾಡೆಪಲ್ಲಿ, ಜೇವರ್ಗಿ ತಾಲೂಕಿನ ಬಳಬಟ್ಟಿ ಹಾಗೂ ಯಡ್ರಾಮಿ ತಾಲೂಕಿನ ಮಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗುರುತಿಸಲಾಗಿದೆ.
ಜೋಳ ಖರೀದಿಯ ಸ್ಥಳಗಳಿವು
ಅದೇ ರೀತಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಕಲಬುರಗಿ, ಜೇವರ್ಗಿ ಹಾಗೂ ಸೇಡಂ ಕೇಂದ್ರಗಳನ್ನು ಗುರುತಿಸಿದೆ.
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕ-9448496023 ಸಂಪರ್ಕಿಸಲು ಕೋರಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ