ಕಲಬುರಗಿ: ಕಾಲಿಗೆ ಹೈ ಹೀಲ್ಡ್ ಶೂ. ರ್ಯಾಂಪ್ ಮೇಲೆ ಪುರುಷರ ಕ್ಯಾಟ್ ವಾಕ್. ಅರೆ, ಇದೇನಿದು ರಾಂಗ್ ನಂಬರ್ ಅಂದ್ಕೊಂಡ್ರ? ಯೆಸ್, ಹೈ ಹೀಲ್ಡ್ಸ್ ಸ್ಯಾಂಡಲ್ ಧರಿಸಿ ಮಹಿಳೆಯರು ಕ್ಯಾಟ್ ವಾಕ್ (Cat Walk) ಮಾಡುವುದನ್ನು ನೋಡಿರ್ತೀರ. ಆದ್ರಿಲ್ಲಿ ಪುರುಷರು ಮಹಿಳೆಯರ ಸ್ಯಾಂಡಲ್ ಧರಿಸಿ ರ್ಯಾಂಪ್ ಮೇಲೆ ಸಖತ್ ಹೆಜ್ಜೆ ಹಾಕಿದ್ರು. ಸೊಂಟ ಬಳಕಿಸುತ್ತಾ ನಡೆದ ಕ್ಯಾಟ್ ವಾಕ್ (Men's Cat Walk) ಜನರನ್ನ ನಗೆಗಡಲಲ್ಲಿ ತೇಲಾಡಿಸ್ತು.
ಲಿಂಗ ಸಮಾನತೆಗಾಗಿ ಕಾರ್ಯಕ್ರಮ
ಅಷ್ಟಕ್ಕೂ ಈ ಕಾರ್ಯಕ್ರಮವನ್ನ ಕಲಬುರಗಿಯ ಹೆಚ್ಸಿಜಿ ಆಸ್ಪತ್ರೆ ವತಿಯಿಂದ ಕಲಬುರಗಿ ನಗರ ಸೆಂಟ್ರಲ್ ಮಾಲ್ನಲ್ಲಿ ಆಯೋಜಿಸಲಾಗಿತ್ತು. ಲಿಂಗ ತಾರತಮ್ಯ ಹೋಗಲಾಡಿಸುವ ಉದ್ದೇಶದಿಂದ ಹಾಗೂ ಮಹಿಳೆಯ ಸಮಸ್ಯೆ, ಅವರು ಎದುರಿಸುವ ತೊಂದರೆಗಳ ಕುರಿತಾಗಿ ತಿಳುವಳಿಕೆ ಮೂಡಿಸಲು ಈ ಪ್ರಯತ್ನ ನಡೆಯಿತು.
ಪುರುಷರಿಂದ ಉತ್ತಮ ಸ್ಪಂದನೆ
‘’ಸ್ಟೆಪ್ ಇನ್ ಹರ್ ಶೂಸ್’’ ಎಂಬ ಈ ವಿನೂತನ ಕಾರ್ಯಕ್ರಮದಲ್ಲಿ ಪುರುಷರು ಸೊಂಟ ಬಳಕಿಸುತ್ತಾ ಹೆಜ್ಜೆ ಹಾಕಿದ್ದು ಮಜಾ ಎನಿಸಿತು. ಸುಮಾರು 25 ಪುರುಷರು ಮಹಿಳೆಯರಂತೆಯೇ ರ್ಯಾಂಪ್ ವಾಕ್ ಮಾಡಿ ಗಮನಸೆಳೆದರು. ನೆರೆದ ಜನರಂತೂ ಚಪ್ಪಾಳೆ ತಟ್ಟಿ ಪುರುಷ ಫ್ಯಾಶನ್ ಧಾರಿಗಳನ್ನ ಹುರಿದುಂಬಿಸಿದ್ರು.
ಇದನ್ನೂ ಓದಿ: Kalaburagi: ಕಲ್ಯಾಣ ನಾಡಿನ ಕೆರೆಗೆ ಮತ್ತೆ ಜೀವಕಳೆ, ಬೋಟಿಂಗ್ ಮಾಡಲು ರೆಡಿಯಾಗಿ!
ಮಹಿಳೆಯರಿಂದಲೂ ಕ್ಯಾಟ್ ವಾಕ್
ಇಷ್ಟೇ ಇಲ್ದೇ, ಮಹಿಳೆಯರು ಕೂಡಾ ಅಷ್ಟೇ ಕ್ಯೂಟ್ ಆಗಿ ಕ್ಯಾಟ್ ವಾಕ್ ಮಾಡಿ ಸಂಭ್ರಮಿಸಿದರು. ಪುರುಷರಷ್ಟು ಕಷ್ಟಪಡದೇ ಆರಾಮವಾಗಿ ರ್ಯಾಂಪ್ ವಾಕ್ ಮಾಡಿ ಪುರುಷರ ಮುಂದೆ ಹಿರಿಹಿರಿಯಾಗಿ ಹಿಗ್ಗಿದರು. ಹೀಗೆ ಪುರುಷರು, ಮಹಿಳೆಯರು ಒಂದೇ ರ್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು. ಲಿಂಗ ತಾರತಮ್ಯವಿಲ್ಲದೇ ನೆರೆದವರು ಈ ಕಾರ್ಯಕ್ರಮವನ್ನ ಭರ್ಜರಿಯಾಗಿ ಸಂಭ್ರಮಿಸಿದರು.
ಇದನ್ನೂ ಓದಿ: Temple: ಇಲ್ಲಿ ಮದ್ವೆ ಆಗ್ಬೇಕು ಅಂದ್ರೆ ದೇವಿ ಅಪ್ಪಣೆ ಬೇಕೇ ಬೇಕು!
ಮಜಾ ಕೊಟ್ಟ ಕ್ಯಾಟ್ ವಾಕ್
ಅದೇನೆ ಇರಲಿ, ಪುರುಷರು ಯಾವುದೇ ಮುಜುಗರಕ್ಕೆ ಒಳಗಾಗದೆ ಸಂಭ್ರಮದಿಂದ ಫ್ಯಾಶನ್ ಶೋನಲ್ಲಿ ಭಾಗಿಯಾಗಿ ಸಮಾರಂಭದಲ್ಲಿ ಸೇರಿದವರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿದರು. ಒಟ್ಟಿನಲ್ಲಿ ಮಹಿಳೆಯ ಸ್ಯಾಂಡಲ್ ಧರಿಸಿ ಪುರುಷರು ರ್ಯಾಂಪ್ ವಾಕ್ ಮಾಡಿರುವುದು ಮಜಾವೆನಿಸಿದರೂ, ಸಮಾಜಕ್ಕೊಂದು ಉತ್ತಮ ಸಂದೇಶ ಸಾರಿತು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ