ಕಲಬುರಗಿ: ಇಡ್ಲಿ ವಡಾ ಎಲ್ಲ ಕಡೆ ಕಾಮನ್ ಅಂತಾ ಮೂಗು ಮುರೀಬೇಡಿ. ನೀವೇನಾದ್ರೂ ಈ ಪುಟ್ಟ ಗಾತ್ರದ ಇಡ್ಲಿ ವಡಾ ತಿಂದ್ರೆ, ಅರೆ! ನಿಜಕ್ಕೂ ಇದು ಸಖತ್ ಟೇಸ್ಟಿ ಇದೆಯಲ್ವ ಅನ್ನೋದು ಗ್ಯಾರಂಟಿ. ಯಾಕಂದ್ರೆ ಇದು ಕಾಮನ್ ಇಡ್ಲಿ ವಡಾ ಅಲ್ಲ. ಬಲು ರುಚಿ ರುಚಿಯಾದ ಸೂಪರ್ ಟೇಸ್ಟಿ (Tasty Food) ಹೊಂದಿರೋ ಕ್ಯೂಟ್ ಕ್ಯೂಟ್ ಆದ ಟಿಫನ್ ಸ್ಪೆಷಲ್ ಇಡ್ಲಿ ವಡಾ. ಹೌದು, ಕೆಲವರದ್ದಂತೂ ದಿನ ಬೆಳಗಾಗೋದೆ ಈ ಇಡ್ಲಿ ವಡಾದಿಂದ. ಸಿಟಿಯಲ್ಲೇನಾದ್ರೂ ಇದ್ರೆ ಇದನ್ನೇ ಮೂರು ಹೊತ್ತು ತಿನ್ನೋರು ಇದ್ದಾರೆ. ಹಾಗೆಯೇ ಬಿಸಿಲ ನಗರಿ ಕಲಬುರಗಿಯಲ್ಲೂ (Kalaburagi) ಈ ಡಿಫರೆಂಟ್ ಗಾತ್ರದ ಇಡ್ಲಿ ವಡಾ (Idli Vada) ತಿನ್ನೋಕೆ ಜನ ಕ್ಯೂ ನಿಂತಿರ್ತಾರೆ.
ಇಲ್ಲಿದೆ ಮಲ್ಲು ಇಡ್ಲಿ ವಡಾ
ಬ್ರಹ್ಮಪುರ ಬಡಾವಣೆಯ ಶರಬಸವೇಶ್ವರ ದೇವಸ್ಥಾನದ ಹಿಂದುಗಡೆಯ ಶಾಸ್ತ್ರಿ ವೃತ್ತದಲ್ಲಿಇರೋ ಮಲ್ಲು ಇಡ್ಲಿ ವಡಾ ತಳ್ಳು ಗಾಡಿ ಕ್ಯಾಂಟೀನ್ ಮುಂದೆ ಹೀಗೆ ಸದಾ ಜನ ನಿಂತಿರ್ತಾರೆ. ಅತ್ತ ಪಟಪಟನೆ ಇಡ್ಲಿ ಬೇಯಿಸೋದು ನೋಡ್ಬೇಕು, ಇನ್ನು ವಡಾಗಳಂತೂ ಒಂದೇ ಸಮನೆ ಬಿಸಿ ಬಿಸಿ ಎಣ್ಣೆಯ ಬಾಣಲೆಯಲ್ಲಿ ಕರಿದು ಕುರ್ ಕುರ್ ಅನ್ನೋದಕ್ಕೆ ರೆಡಿಯಾಗಿರ್ತವೆ. ಇವೆರಡನ್ನ ಪ್ಲೇಟ್ ನಲ್ಲಿ ಹಾಕೊಂಡು ಅಲ್ಲೇ ನಿಂತು ಜನ ತಿಂದು ಕಚೇರಿಗೋ, ಕೆಲಸಕ್ಕೋ ತೆರಳುತ್ತಾರೆ.
‘ಇಡ್ಲಿ ಮಲ್ಪಪ್ಪ‘ ಅಂತಲೇ ಫೇಮಸ್ ಆದ ಮಾಲೀಕ
ವಿಶೇಷ ಅಂದ್ರೆ ಮಲ್ಲು ಇಡ್ಲಿ ವಡಾ ಒಂದು ರೂಪಾಯಿ ಕಾಯಿನ್ ಗಾತ್ರದಲ್ಲಿದ್ದು ಬಟನ್ ಇಡ್ಲಿ ವಡಾ ಎಂದೇ ಫೇಮಸ್ ಆಗಿದೆ. ಕಳೆದ 25 ವರ್ಷಗಳಿಂದ ತಳ್ಳು ಬಂಡಿಯಲ್ಲಿ ಇಡ್ಲಿ ವಡಾ ಹೋಟೆಲ್ ನಡೆಸುತ್ತಿರುವ ಮಲ್ಲಿಕಾರ್ಜುನ, ಸದ್ಯ ಇದ್ರಿಂದಾಗಿಯೇ ‘ಇಡ್ಲಿ ಮಲ್ಲಪ್ಪ‘ ಅಂತಲೆ ಪ್ರಸಿದ್ಧಿ ಪಡೆದಿದ್ದಾರೆ.
ಬಜೆಟ್ ಫ್ರೆಂಡ್ಲಿ ಕ್ಯಾಂಟೀನ್ ಇದು
ಕಲಬುರಗಿ ಮಾತ್ರವಲ್ಲದೆ ಬೇರೆ ಜಿಲ್ಲೆ ಬೇರೆ ರಾಜ್ಯದಿಂದ ಕಲಬುರಗಿ ಪ್ರವಾಸಕ್ಕೆ, ಕಾರ್ಯಕ್ರಮಗಳಿಗೆ ಆಗಮಿಸುವ ಜನ ಮಲ್ಲು ಇಡ್ಲಿ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ವಿದ್ಯಾರ್ಥಿಗಳು ಕಾರ್ಮಿಕರಿಗೆ ಸಹಕಾರವಾಗಲಿ ಎಂದು ಬೆಳಗ್ಗೆ 4 ಗಂಟೆಗೆ ಹೋಟೆಲ್ ಓಪನ್ ಮಾಡಲಾಗುತ್ತದೆ.
ಇವರ ಇಡ್ಲಿ ವಡಾ ರುಚಿಗೆ ಫಿದಾ ಆದ ಜನ ನಗರದ ನಾನಾ ಕಡೆಗಳಿಂದ ಇಲ್ಲಿಗೆ ಆಗಮಿಸಿ ಕಾದು ನಿಂತು ಟಿಫನ್ ಮಾಡ್ತಾರೆ. ವಿದ್ಯಾರ್ಥಿಗಳಿಗಂತೂ ಬಜೆಟ್ ಫ್ರೆಂಡ್ಲಿ ಫುಡ್ ಎನ್ನಬಹುದು. ಅಷ್ಟೆ ಅಲ್ಲ ಇವರ ಬಳಿ ತಟ್ಟೆ ಇಡ್ಲಿ, ಬಾಸಮತಿ ಅಕ್ಕಿ ಇಂದ ಮಾಡುವ ರೈಸ್ ಬಾತ್ ಕೂಡಾ ಸಿಗ್ತವೆ. ಅದು ಬೇರೆ ಕೇವಲ 20 ರೂಪಾಯಿಗೆ.
ಒಟ್ಟಿನಲ್ಲಿ ಈ ಮಲ್ಲು ಇಡ್ಲಿ ವಡಾ ಕಡಿಮೆ ದರ, ಒಳೆಯ ಕ್ವಾಂಟಿಟಿ ಹಾಗೂ ಕ್ವಾಲಿಟಿಯಿಂದ ಕಲಬುರಗಿಯಲ್ಲಿ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದೆ. ನೀವೇನಾದ್ರೂ ತೊಗರಿ ನಾಡಿಗೆ ಹೋದ್ರೆ ಕಾಯಿನ್ ಗಾತ್ರದ ಈ ಬಟನ್ ಇಡ್ಲಿ, ವಡಾ ತಿನ್ನೋದನ್ನ ಮರೀಬೇಡಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ