ಕಲಬುರಗಿ: ನಾಗಕ್ಷೇತ್ರ ಅಂದಾಗ ತಟ್ಟನೆ ನೆನಪಿಗೆ ಬರೋದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ. ಆದರೆ ಕಲ್ಯಾಣ ಕರ್ನಾಟಕದ (Kalyana Karnataka) ಮಂದಿಗೆ ಮಾತ್ರ ಕುಕ್ಕೆ (Kukke temple) ಅಂದ್ರೆ ನೆನಪಿಗೆ ಬರೋದು ಕಲಬುರಗಿಯ (Temple's In Kalaburagi) ಈ ದೇಗುಲ. ಹೌದು, ಮಿನಿ ಕುಕ್ಕೆ (Mini Kukke Temple) ಎಂದೇ ಈ ದೇಗುಲವನ್ನ ಕರೆಯಲಾಗುತ್ತದೆ. ಸರ್ಪದೋಷಗಳು ಎದುರಾದರೆ ಪರಿಹಾರ ಸಿಗುತ್ತೆ ಅನ್ನೋ ನಂಬಿಕೆಯಿದೆ. ಹಾಗಿದ್ರೆ ಈ ಕ್ಷೇತ್ರ ಯಾವುದು? ಇಲ್ಲಿನ ವಿಶೇಷತೆ ಏನು ಅನ್ನೋದನ್ನ ಹೇಳ್ತೀವಿ ನೋಡಿ.
ಎಲ್ಲಿ ನೋಡಿದ್ರಲ್ಲಿ ನಾಗದೇವತೆಯ ಮೂರ್ತಿಗಳು, ವಿಶಾಲವಾದ ಪ್ರದೇಶದಲ್ಲಿ ಚಿಕ್ಕ ದೇವಸ್ಥಾನ. ಮಧ್ಯದಲ್ಲೊಂದು ತೀರ್ಥ ಸ್ವರೂಪ ಬಾವಿ. ಇದುವೇ ರಾಜ್ಯದ ಎರಡನೇ ಕುಕ್ಕೇ ಸುಬ್ರಹ್ಮಣ್ಯ ಅಥವಾ ಮಿನಿ ಕುಕ್ಕೆ ಅನ್ನೋ ಖ್ಯಾತಿಗೆ ಪಡೆದಿರೋ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಲಗತ್ತಿ ಗ್ರಾಮದ ಹಿರೋಡೇಶ್ವರ ದೇವಸ್ಥಾನ.
ಮಾಲಗತ್ತಿ ಗ್ರಾಮದಿಂದ ನಾಲ್ಕೇ ಕಿಲೋಮೀಟರ್
ದಕ್ಷಿಣ ಕನ್ನಡದ ಕುಕ್ಕೆಯಲ್ಲಿ ಹೇಗೆ ನಾಗದೋಷ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆಯೋ ಅದೇ ರೀತಿಯ ನಂಬಿಕೆ ಕಲ್ಯಾಣ ಕರ್ನಾಟಕದ ಈ ಜಿಲ್ಲೆಯಲ್ಲಿದೆ. ಮಾಲಗತ್ತಿ ಗ್ರಾಮದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಇದ್ದು ಅಪಾರ ಮಹಿಮೆಯನ್ನು ಹೊಂದಿದೆ.
1,100 ಕ್ಕೂ ಹೆಚ್ಚು ನಾಗದೇವತೆಯ ಮೂರ್ತಿಗಳು!
ಹಿರೋಡೇಶ್ವರ ದೇವಸ್ಥಾನದಲ್ಲಿ ಒಂದಲ್ಲ ಎರಡಲ್ಲ 1,100 ಕ್ಕೂ ಹೆಚ್ಚು ನಾಗದೇವತೆಯ ಕಲ್ಲಿನ ಮೂರ್ತಿಗಳಿವೆ. ಹಾಗಂತ ಇವುಗಳನ್ನು ಯಾರೂ ನಿರ್ಮಿಸಿಲ್ಲ. ಇವುಗಳೆಲ್ಲವನ್ನು ಹರಕೆ ಈಡೇರಿದ ಭಕ್ತರೇ ಕಾಣಿಕೆ ನೀಡಿದ್ದಾರೆ.
ಅನಾರೋಗ್ಯ ಪೀಡಿತರ ಆಶ್ರಯ ತಾಣ
ಇನ್ನೊಂದು ವಿಶೇಷ ಅಂದ್ರೆ ಅನಾರೋಗ್ಯ ಪೀಡಿತರು ತಿಂಗಳುಗಟ್ಟಲೆ ಇಲ್ಲಿ ವಾಸವಾಗಿರುತ್ತಾರೆ. ಭಕ್ತರಿಗೆ ಉಚಿತ ದಾಸೋಹ ವ್ಯವಸ್ಥೆಯೂ ಇದೆ. ಇಲ್ಲಿರುವ ಶನೀಶ್ವರ, ಹನುಮಂತ, ನಾಗದೇವತೆ, ಹಿರೋಡೇಶ್ವರ ದರ್ಶನ ಪಡೆಯುತ್ತಾರೆ. ಕೇವಲ ರಾಜ್ಯವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಇನ್ನು ದೇವಸ್ಥಾನದ ಮಧ್ಯೆದಲ್ಲಿ ಇರೋ ತೀರ್ಥಗುಂಡಿ ಸರ್ವರೋಗಕ್ಕೂ ಮದ್ದಾಗಿದೆ ಎನ್ನೋ ನಂಬಿಕೆ ಭಕ್ತರಲ್ಲಿದೆ.
ಇದನ್ನೂ ಓದಿ: Ganagapura: ಭಕ್ತರ ಕಾಯುವ ಗಾಣಗಾಪುರ ದತ್ತ ಪಾದುಕೆ, ವರ್ಷದಲ್ಲಿ 2 ಬಾರಿ ರಥೋತ್ಸವ ನಡೆಯುವ ಸನ್ನಿಧಿ
ಬೀಬೀ ಫಾತಿಮಾ ಗದ್ದುಗೆಗಿದೆ ಐತಿಹ್ಯ
ಇಷ್ಟು ಮಾತ್ರವಲ್ಲ, ಈ ದೇಗುಲವು ಭಾವೈಕ್ಯತೆಯ ತಾಣವೂ ಆಗಿದೆ. ಹಿಂದು ಮಾತ್ರವಲ್ಲ ಮುಸ್ಲಿಂ ಸಮುದಾಯದವರು ಇಲ್ಲಿನ ಸಂಪ್ರದಾಯ ಪ್ರಕಾರ ನಡೆದುಕೊಳ್ಳುತ್ತಾರೆ. ಹಿಂದೊಮ್ಮೆ ಹೊಸದಾಗಿ ಮದುವೆಯಾದ ಮುಸ್ಲಿಂ ಜೋಡಿಯೊಂದು ದರ್ಶನ ಪಡೆಯಲು ಬಂದಾಗ ಊಟಕ್ಕೆ ಕುಳಿತ ಗಂಡನಿಗೆ ತೀರ್ಥಗುಂಡಿಯಲ್ಲಿನ ನೀರು ತರಲು ಹೋಗಿ ನವವಧು ಇಲ್ಲೇ ಐಕ್ಯವಾದಳಂತೆ. ಹೀಗಾಗಿ ದೇವಸ್ಥಾನದಲ್ಲಿಯೇ ಬೀಬಿ ಫಾತಿಮಾ ಹೆಸರಿನ ಗದ್ದುಗೆ ಇದ್ದು, ನಿತ್ಯ ಪೂಜೆ ಕೂಡಾ ನಡೆಯುತ್ತೆ.
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Koranti Hanuman: ಮಹಾಮಾರಿ ದೂರ ಮಾಡುವ ಕೋರಂಟಿ ಹನುಮಾನ್!
ಒಟ್ಟಿನಲ್ಲಿ ನಾಗಕ್ಷೇತ್ರ ಎಂದಾಗ ಕರಾವಳಿಯ ಕುಕ್ಕೆ ನೆನಪಾಗೋದು ಸಹಜ. ಆದರೆ ಅದೆಷ್ಟೋ ಮಂದಿ ಕಲಬುರಗಿಯ ಹಿರೋಡೇಶ್ವರನ ಸನ್ನಿಧಾನಕ್ಕೂ ತೆರಳಿ ನಾಗದೋಷ ಪರಿಹರಿಸಿಕೊಳ್ಳುವ ಮೂಲಕ ಈ ಕ್ಷೇತ್ರಕ್ಕೆ ಎರಡನೇ ಕುಕ್ಕೆ ಅನ್ನೋ ಹೆಸರು ಬರಲು ಕಾರಣೀಕರ್ತರಾಗಿದ್ದಾರೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ