ಕಲಬುರಗಿ: ಒಂದೇ ಆವರಣದಲ್ಲಿದೆ ಹಿಂದೂ ಮುಸ್ಲಿಮರ ದೇವರ ಆಲಯ. ಇಲ್ಲಿ ಹಿಂದೂಗಳ ದೇವರಿಗೆ ಮುಸ್ಲಿಮರು, ಮುಸ್ಲಿಮರ ದೇವರಿಗೆ ಹಿಂದೂಗಳು (Hindu Muslim Communal Harmony) ನಡೆದುಕೊಳ್ಳುವ ಸಂಪ್ರದಾಯವಿದೆ. ಈ ಇಡೀ ಗ್ರಾಮವೇ ಭಾವೈಕ್ಯತೆಯ ತಾಣವೂ ಹೌದು. ಹಿಂದೂ ದೇವರ ಪೂಜೆ ಪುನಸ್ಕಾರ, ಮುಸ್ಲಿಮರ ನಮಾಝ್ ಈ ಊರನ್ನ ಬೆಳಗಿದೆ ಅನ್ನೋ ನಂಬಿಕೆ ಇಲ್ಲಿನ ಭಕ್ತರದ್ದು.
ಒಂದೇ ಆವರಣದಲ್ಲಿ ಹಿಂದೂ-ಮುಸ್ಲಿಂ ದೇವರು!
ಪರಸ್ಪರ ವಿವಿಧ ಧರ್ಮದ ಭಕ್ತರು ತಮ್ಮಿಷ್ಟದ ಯಾವುದೇ ಧರ್ಮದ ದೇವರನ್ನ ಪೂಜಿಸುವುದು ಅಥವಾ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಇದೆ. ಆದರೆ ಕಲಬುರಗಿಯ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಹಿಂದೂ - ಮುಸ್ಲಿಂ ದೇವರು ಒಟ್ಟಿಗೆ ಒಂದೇ ದೇವಸ್ಥಾನದಲ್ಲಿ ಶತಮಾನಗಳಿಂದ ಇವೆ ಅನ್ನೋದು ನಿಜಕ್ಕೂ ಅಚ್ಚರಿಯೇ ಸರಿ. ಹಾಗಂತ ಇಲ್ಲಿಗೆ ಬರೋ ಭಕ್ತರಿಗೆ ಇದ್ಯಾವುದೂ ಸಮಸ್ಯೆನೇ ಆಗಿಲ್ಲ. ಪರಸ್ಪರರು ಎರಡೂ ದೇವರುಗಳಿಗೆ ಬೇಕಾದಂತೆ ನಡೆಯುತ್ತಾ ಸಂಪ್ರದಾಯ ಪಾಲಿಸ್ತಾರೆ. ಜೊತೆಗೆ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಬೇಡಿಕೊಳ್ಳುತ್ತಾರೆ.
ಪೂಜೆ ಪುನಸ್ಕಾರ, ನಮಾಜ್!
ಈ ಆವರಣದಲ್ಲಿ ಮೌನೇಶ್ವರ ಅರ್ಥಾತ್ ಅಯ್ಯಪ್ಪಯ್ಯ ಮುತ್ಯಾ ದೇವಸ್ಥಾನ ಹಾಗೂ ಮುಸ್ಲಿಂರ ಹಸೇನ್ ಹುಸೇನ್, ಮೌಲಾಲಿ ಸೇರಿದಂತೆ ಐದು ದೇವರುಗಳಿವೆ. ಒಂದೇ ಗರ್ಭಗುಡಿಯಲ್ಲಿ ಹಿಂದು ಮುಸ್ಲಿಂ ದೇವರಿಗೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಮೌನೇಶ್ವರ ದೇವಾಲಯದ ಗರ್ಭಗುಡಿಯಲ್ಲಿಯೇ ಮುಸ್ಲಿಂ ಸಮುದಾಯದ ಪೀರ್ ಗಳನ್ನು ಇಡಲಾಗಿದೆ.
ಇದನ್ನೂ ಓದಿ: Kalaburagi Voting Awareness: ಎತ್ತಿನ ಚಕ್ಕಡಿಯಲ್ಲಿ ಮತದಾನ ಜಾಗೃತಿ, ಇಲ್ಲಿದೆ ನೋಡಿ ಸಖತ್ ವಿಡಿಯೋ
ಹೀಗಾಗಿ ಇಲ್ಲಿ ಮುಸ್ಲಿಂ ಸಮುದಾಯದವರು ಹಿಂದುಗಳ ದೇವರಿಗೂ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗೇ ಹಿಂದುಗಳ ಈ ಗುಡಿಯ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮುದಾಯವರು ಪಾಲ್ಗೊಳ್ಳುತ್ತಿರುವ ವಾಡಿಕೆ ಇದೆ. ಅಯ್ಯಪ್ಪಯ್ಯ ಮುತ್ಯಾ ದೇವಸ್ಥಾನದ ಆವರಣದಲ್ಲಿಯೇ ಮುಸ್ಲಿಂ ಬಾಂಧವರು ನಮಾಜ್ ಕೂಡಾ ಮಾಡುತ್ತಾರೆ.
ಇದನ್ನೂ ಓದಿ: Kalaburagi News: ಅಂಬೇಡ್ಕರ್ ಹಬ್ಬ ಆಚರಣೆಗೆ ತವರಿಗೆ ವಾಪಸ್ ಆದ ಹೆಣ್ಮಕ್ಕಳು!
ಭಾವೈಕ್ಯತೆಯ ತಾಣ
ಹಿಂದೂ ಮುಸ್ಲಿಂ ದೇವರು ಒಂದೇ ಗರ್ಭಗುಡಿಯಲ್ಲಿ ನೋಡಲು ಸಿಗುವುದು ಅಪರೂಪವೇ ಸರಿ. ಹಾಗಾಗಿ ಈ ದೇಗುಲಕ್ಕೆ ವಿಶೇಷ ಕಾರಣಿಕ ಶಕ್ತಿ ಇದೆ ಎಂದೇ ಭಕ್ತರು ನಂಬುತ್ತಾರೆ. ಹಾಗಾಗಿ ಇಲ್ಲಿ ನಡೆಯುವ ಜಾತ್ರೆಗೆ ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಹೀಗೆ ಒಂದೇ ಆವರಣದಲ್ಲಿರುವ ಈ ಎರಡು ವಿಭಿನ್ನ ಧರ್ಮಗಳ ದೇಗುಲವು ಭಾವೈಕ್ಯತೆಯ ಪಾಠವನ್ನು ಸಾರುತ್ತಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ