Kalaburagi: ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ, ಮಳೇಂದ್ರ ಶಿವಾಚಾರ್ಯರ ಭಕ್ತರ ಜಯಘೋಷ

X
ಗದ್ದುಗೆಗೆ ಲೋಹದ ಹಕ್ಕಿಯ ಪುಷ್ಪವೃಷ್ಠಿ

"ಗದ್ದುಗೆಗೆ ಲೋಹದ ಹಕ್ಕಿಯ ಪುಷ್ಪವೃಷ್ಠಿ"

ಹೆಲಿಕಾಪ್ಟರ್‌ನಿಂದ ಶ್ರೀಗಳ ಕರ್ತೃ ಗದ್ದುಗೆಗೆ ಪುಷ್ಪವೃಷ್ಠಿ ಮಾಡಲಾಯಿತು. ನಂತರ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.

  • Share this:

    ಕಲುಬುರಗಿ: ದೇಗುಲ ಸುತ್ತಲೂ ಜನವೋ ಜನ. ಆಗಸದಲ್ಲಿ ಹಾರಿ ಬಂದ ಹೆಲಿಕಾಪ್ಟರ್​ನಿಂದ (Helicopter) ಪುಷ್ಪಾರ್ಚನೆ! ನೆರೆದ ಭಕ್ತರಿಂದ ಜಯಘೋಷ. ಹೀಗೆ ಜನರ ಹೃದಯ ಗೆದ್ದ ಸಾಮ್ರಾಟನಿಗೆ ಭಕ್ತರ ಸಮ್ಮುಖದಲ್ಲಿ ನಡೆಯಿತು ನೋಡಿ ಅದ್ಧೂರಿಯ ನಮನ.


    ಭಕ್ತರ ಜಯಘೋಷ
    ಹೌದು, ಹೀಗೆ ಕಲಬುರಗಿಯ ಅಫಜಲಪುರದ ಸುಪ್ರಸಿದ್ಧ ಶ್ರೀ ಮಳೇಂದ್ರ ಶಿವಾಚಾರ್ಯರ ಮಠದ ಬಳಿ ಲೋಹದ ಹಕ್ಕಿಯ ಹಾರಾಟ ಕಂಡುಬಂತು. ಪುಷ್ಪಾರ್ಚನೆ ಮೂಲಕ ನೆರೆದ ಭಕ್ತರ ಕಣ್ಮನ ಸೆಳೆಯಿತು. ಕಾತರದಿಂದ ಕಾಯುತ್ತಿದ್ದ ಜನರೆಲ್ಲರೂ ಹೆಲಿಕಾಪ್ಟರ್ ಆಗಮಿಸ್ತಿದ್ದಂತೆ ಜಯಘೋಷ ಮೊಳಗಿಸಿ ಭಕ್ತಿ ಮೆರೆದರು. ಅಷ್ಟಕ್ಕೂ ಈ ಎಲ್ಲ ಅದ್ಧೂರಿಯ ಕ್ಷಣಕ್ಕೆ ಸಾಕ್ಷಿಯಾಗಿದ್ದು ಶ್ರೀಮಳೇಂದ್ರ ಶಿವಾಚಾರ್ಯ ಅವರಿಗೆ ಸಲ್ಲಿಸಲಾದ ನೂತನ ಕರ್ತೃ ಗದ್ದುಗೆಯ ಲೋಕಾರ್ಪಣೆಯ ಸಮಯದಲ್ಲಿ.


    ವಿವಿಧ ಸಾಮಾಜಿಕ ಚಟುವಟಿಕೆ
    ಪ್ರಸ್ತುತ ಮಳೇಂದ್ರ ಮಠವು 19ನೇ ಪೀಠಾಧಿಪತಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರಿಂದ ಮುನ್ನಡೆಯುತ್ತಿದೆ. ಭಕ್ತರ ಇಷ್ಟಾರ್ಥ ಪೂರೈಸುವ ಮೂಲಕ ಮಾತೃ ಹೃದಯಿ ಶ್ರೀಗಳು ಎಂದೇ ಹೆಸರು ಪಡೆದಿದ್ದಾರೆ. ಉಜ್ಜಯಿನಿ ಪೀಠ ಪರಂಪರೆಯಲ್ಲಿ ಬರುವ ನಾಡಿನ ಮಠಗಳಲ್ಲಿ ಮಳೇಂದ್ರ ಮಠ ಕೂಡ ಒಂದಾಗಿದೆ. ಕಲ್ಯಾಣ ಪ್ರದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಎಂಬ ಸಂಕಲ್ಪದೊಂದಿಗೆ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿದವರು. ಜೊತೆಗೆ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಇತರೆ ಸಮಾಜಮುಖಿ ಕಾರ್ಯಗಳಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.


    ಇದನ್ನೂ ಓದಿ: Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!




    ನೂತನ ಗದ್ದುಗೆಯ ಲೋಕಾರ್ಪಣೆ
    ಮಳೇಂದ್ರ ಮಠವು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನು ಹಂಚುತ್ತಿವೆ. ಇದೀಗ ಅವುಗಳ ಸಾಲಿಗೆ ನೂತನ ಗದ್ದುಗೆ ಸೇರಿಕೊಂಡಿದೆ. ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ಸಂಕಲ್ಪದಿಂದ 11ನೇ ಶತಮಾನದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಶಿಲಾ ಮಂಟಪ ಕರ್ತೃ ಗದ್ದುಗೆ ಮೇಲೆ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಜರುಗಿತು. ಉಜ್ಜಯಿನಿ ಜಗದ್ಗುರುಗಳು ಉದ್ಘಾಟನೆ ನೆರವೇರಿಸಿದರು.


    ಇದನ್ನೂ ಓದಿ: Kalaburagi: ಟ್ರಾಫಿಕ್ ಸಮಸ್ಯೆ ಟಾಟಾ ಹೇಳಲು ಕಲಬುರಗಿ ರೆಡಿ!


    2 ಕೋಟಿ ರೂ. ಮೊತ್ತದ ಗದ್ದುಗೆ
    ಹೆಲಿಕಾಪ್ಟರ್‌ನಿಂದ ಶ್ರೀಗಳ ಕರ್ತೃ ಗದ್ದುಗೆಗೆ ಪುಷ್ಪವೃಷ್ಠಿ ಮಾಡಲಾಯಿತು. ನಂತರ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸರಿಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕರ್ತೃ ಗದ್ದುಗೆಯನ್ನ ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಮಳೇಂದ್ರ ಶಿವಾಚಾರ್ಯ ಮಠದಲ್ಲಿ ಹಬ್ಬದ ವಾತಾವರಣ ಕಂಡು ಬಂತು.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: