ಸಂಭ್ರಮದ ಮೆರವಣಿಗೆ, ಧರ್ಮಬೇಧ ಮೀರಿದ ಆಚರಣೆ. ಕಲಬುರಗಿಯ ಸಂತ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು. ಅದುವೇ ತೊಗರಿ ನಾಡಿನ ಭಾವೈಕ್ಯತೆಗೂ ಸಾಕ್ಷಿಯಾಗಿದೆ. ನಿಜ, ಮಹಾರಾಷ್ಟ್ರ ಗಡಿಭಾಗಕ್ಕೆ (Maharashtra Border) ಹೊಂದಿರುವ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದಲ್ಲಿ ಭಕ್ತರ ಭಾವೈಕ್ಯ ಮೂಡಿಸಿದ್ದು ಮಹಾಸಂತ ಹಜರತ್ ಖ್ವಾಜಾ ಸೈಫನ್ ಮುಲ್ಕ್ ಚಿಸ್ತಿ (Hazrat Syed Khaja Saifan Mulk Kalaburagi). ಅವರ 889ನೇ ಮಹೋತ್ಸವವು ಅದ್ದೂರಿಯಾಗಿ ಸಂಪನ್ನಗೊಂಡಿತು. ಮೆರವಣಿಗೆಯುದ್ದಕ್ಕೂ ಭಕ್ತರು ಕುಣಿಯುತ್ತಾ, ಕೇಕೆ ಹಾಕುತ್ತಾ ಸಂಭ್ರಮಿಸಿದರು.
ರಾತ್ರಿ ಆರಂಭವಾಗುವ ಗಂಧದ ಬಂಡಿಯು ಗ್ರಾಮದ ಪೊಲೀಸ್ ಪಾಟೀಲ್ ಮನೆಯಿಂದ ವಾದ್ಯ ಮೇಳದೊಂದಿಗೆ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಹೈದ್ರಾ ಗ್ರಾಮದಲ್ಲಿರುವ ಖ್ವಾಜಾ ಸೈಫನ್ ಮುಲ್ಕ್ ದರ್ಗಾಕ್ಕೆ ತೆರಳಿತು.
ವಿಶೇಷ ಪೂಜೆ, ನೈವೇದ್ಯ ಸಲ್ಲಿಕೆ
ಅಲ್ಲಿ ಗಂಧ ತೀರ್ಥ ಮಾಡಲಾಯಿತು. ನಂತರ ಬೆಳಗ್ಗೆ ಅಲ್ಲಿಂದ ಹೊರಟು ಮಧ್ಯಾಹ್ನದ ಹೊತ್ತಿಗೆ ಸಹಸ್ರಾರು ಭಕ್ತರು ಕರಜಗಿಗೆ ತಲುಪಿದರು. ಈ ಸಂದರ್ಭದಲ್ಲಂತೂ ಭಕ್ತರು ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿದರು. ವಾದ್ಯ ಮೇಳಗಳ ಜೊತೆಗೆ ಡಿಜೆ ಸೌಂಡ್ ಸದ್ದಿನೊಂದಿಗೆ ಗ್ರಾಮದ ಮುಖಂಡರು ಒಗ್ಗೂಡಿ ಮೆರವಣಿಗೆಯನ್ನು ಸ್ವಾಗತಿಸಿದರು.
ಗಂಧ, ದೀಪ, ಧೂಪ ಫಲ ಪುಷ್ಪಗಳಿಂದ ಪೂಜೆ
ಖ್ವಾಜಾ ಸೈಫನ್ ಮುಲ್ಕ್ ಅವರ ಮಹೋತ್ಸವವು ಪ್ರತಿವರ್ಷ ಜಮಾದಿ ಲಾವಲ್ನಲ್ಲಿ ನಡೆಯುತ್ತೆ. ಗಂಧ, ದೀಪ, ಧೂಪ, ಫಲಪುಷ್ಪಗಳಿಂದ ಪೂಜೆ ಸಲ್ಲಿಸಿ, ಫಕೀರರಿಗೆ ಉಣಬಡಿಸ್ತಾರೆ. ಈ ಮಹೋತ್ಸವದಲ್ಲಿ ವಿವಿಧ ಜಾತಿ, ಜನಾಂಗದವರು ಖ್ವಾಜಾ ಮುಲ್ಕ್ ಅವರ ಆಶಯದಂತೆ ಪಾಲ್ಗೊಳ್ಳುತ್ತಾರೆ.
ಹಿಂದೂ-ಮುಸ್ಲಿಮರಿಂದ ಆಚರಣೆ
ಅಲ್ಲದೇ ಖ್ವಾಜಾರ ಈ ಸಂದಲ್ ಮೆರವಣಿಗೆಯನ್ನು ಸ್ವತಃ ಹಿಂದೂ-ಮುಸ್ಲಿಮರೇ ಸೇರಿ ಆಚರಿಸುತ್ತಾರೆ. ಸಾವಿರಾರು ಭಕ್ತರು ಹೈದ್ರಾ ಗ್ರಾಮದಿಂದ ಕರಜಗಿ ಗ್ರಾಮಕ್ಕೆ ಬರುವ ದಾರಿಯುದ್ದಕ್ಕೂ ತಮ್ಮ ಎತ್ತುಗಳನ್ನು ಬಂಡಿಗೆ ಜೊತೆಗೂಡಿ ಎರಡು ಹೆಜ್ಜೆ ನಡೆಸಿ ಕಾಯಿ ಕರ್ಪೂರದಿಂದ ಪೂಜಿಸುತ್ತಾರೆ.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ಹೀಗೆ ಖ್ವಾಜಾ ಸೈಫನ್ ಮುಲ್ಕ್ ಚಿಸ್ತಿ ಹಾಕಿಕೊಟ್ಟ ಮಾರ್ಗದಲ್ಲಿ ಗಡಿ ಭಾಗದ ಜನರು ಬೆರೆಯುತ್ತಾ ಮುನ್ನಡೆಯುತ್ತಿರುವುದು ನಾಡಿನ ಭಾವೈಕ್ಯತೆಗೆ ಮಾದರಿ ಎನಿಸುವಂತಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ