ಕೈ ಎತ್ತಿ ಮುಗಿಯುತ್ತಲೇ ಒಳಪ್ರವೇಶಿಸುವ ಭಕ್ತರ ದಂಡು. ದರ್ಶನ ಪಡೆಯುತ್ತಲೇ ಭಾವುಕರಾಗುವ ಭಕ್ತಗಣ. ಇನ್ನೊಂದೆಡೆ ತೂಗಿದ ತೊಟ್ಟಿಲಿಗೆ ಹೂ ಎಸೆದು ಸಂಭ್ರಮಿಸುತ್ತಿರೋ ಜನರು. ಭೂತ ಪ್ರೇತ ಉಚ್ಛಾಟನೆಯ ಅಚ್ಚರಿ. ಹೌದು, ಇದೆಲ್ಲವೂ ಕಂಡು ಬರುವುದು ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ. ಇದು ಕಲಬುರಗಿ ಜಿಲ್ಲೆ (Temple's In Kalaburagi) ಅಫಜಲಪುರ ತಾಲೂಕಿನ ಗಾಣಗಾಪುರದ (Ganagapura Dattatreya Temple) ದತ್ತಾತ್ರೇಯ ದೇಗುಲ. ಹತ್ತು ಹಲವು ವಿಶೇಷತೆ, ಪವಾಡಗಳಿಗೆ ಈ ದೇಗುಲ ಹೆಸರುವಾಸಿ.
ಹಾಗಾಗಿ ಸದಾ ಭಕ್ತರಿಂದ ಗಿಜಿಗಿಡುವ ಈ ದೇಗುಲಕ್ಕೆ ಇಷ್ಟಾರ್ಥ ಈಡೇರಿಕೆಯ ಪುಣ್ಯ ತಾಣ ಅನ್ನೋ ಪ್ರತೀತಿಯಿದೆ. ಹೀಗಾಗಿಯೇ ನೋಡಿ ಕರ್ನಾಟಕವೊಂದೇ ಅಲ್ದೇ ಹಲವು ರಾಜ್ಯಗಳಿಂದಲೂ ಭಕ್ತರು ಆಗಮಿಸ್ತಾರೆ. ಅಷ್ಟೇ ಅಲ್ಲ, ದತ್ತಾತ್ರೇಯ ಸ್ವಾಮಿಗೆ ವರ್ಷಕ್ಕೆ ಎರಡು ಬಾರಿ ಉತ್ಸವ ನಡೆಯುತ್ತೆ ಅನ್ನೋದು ಇನ್ನೂ ವಿಶೇಷ.
700 ವರ್ಷಗಳ ಇತಿಹಾಸ!
ಈ ದೇವಸ್ಥಾನದ ಇತಿಹಾಸ ಹಿಡಿದು ಹೊರಟರೇ 700 ವರ್ಷಗಳ ಹಿಂದೆ ಹೋಗ್ಬಿಡ್ತೀವಿ. ಆಕಾಲಕ್ಕೇ ಇಲ್ಲಿಗೆ ಆಗಮಿಸಿದ್ದ ದತ್ತಾತ್ರೇಯರು ಈಗಲೂ ಪಾದುಕೆಯಲ್ಲಿ ಗುಪ್ತವಾಗಿದ್ದಾರೆ ಅನ್ನೋ ನಂಬಿಕೆಯಿದೆ. ಹೀಗಾಗಿಯೇ ಈ ಮಂದಿರದಲ್ಲಿ ಪಾದುಕೆ ಪೂಜೆಗೆ ಎಲ್ಲಿಲ್ಲದ ಮಹತ್ವ. ದತ್ತ ಪಾದುಕೆ ದರ್ಶನಕ್ಕಾಗಿಯೇ ದೇಶದ ಮೂಲೆ ಮೂಲೆಗಳಿಂದ ಜನಸಾಗರ ಹರಿದು ಬರುತ್ತೆ.
ಮಕ್ಕಳಾಗದವರಿಗೆ ಮಕ್ಕಳಾಗುತ್ತೆ
ಈ ಪವಿತ್ರ ಸನ್ನಿಧಿಯಲ್ಲಿ ವರ್ಷಕ್ಕೆ ಎರಡು ಬಾರಿ ಉತ್ಸವಗಳು ನಡೆಯುತ್ತೆ. ದತ್ತಾತ್ರೇಯ ಜಯಂತಿ ದಿನ ಒಮ್ಮೆ ಉತ್ಸವ ನಡೆದ್ರೆ, ಮತ್ತೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತೆ. ಜಯಂತಿ ಉತ್ಸವ ದಿನವಂತೂ ಸರ್ವಾಲಂಕಾರ ಭೂಷಿತ ತೊಟ್ಟಿಲು ತೂಗಿ ಬಿಡಲಾಗುತ್ತೆ.
ಎತ್ತರದಲ್ಲಿರೋ ಆ ತೊಟ್ಟಿಲಿಗೆ ಕ್ಷೇತ್ರಕ್ಕೆ ಬಂದ ಭಕ್ತರು ಹೂಮಳೆಗರೆದು ಸಂಭ್ರಮಿಸ್ತಾರೆ. ಹೀಗೆ ಮಾಡೋದ್ರಿಂದ ಮಕ್ಕಳಾಗದವರಿಗೆ ಮಕ್ಕಳಾಗುತ್ತವೆ ಅನ್ನೋ ನಂಬಿಕೆಯಿದೆ.
ಎದೆ ಝಲ್ ಅನಿಸುವ ದೃಶ್ಯಗಳು
ಇನ್ನು ಈ ಕ್ಷೇತ್ರದ ಇನ್ನೊಂದು ವಿಶೇಷ ಏನೆಂದರೆ, ಭಕ್ತರ ಜೊತೆಗೆ ಭೂತ-ಪ್ರೇತ ಪೀಡಿತರೂ ಇಲ್ಲಿಗೆ ಆಗಮಿಸ್ತಾರೆ. ನೋಡಲು ತುಸು ಭಯಾನಕವಾಗಿ ಕಾಣುವ ಈ ದೃಶ್ಯವಂತೂ ಸಾಮಾನ್ಯ ಭಕ್ತರ ಎದೆ ಝಲ್ ಎನ್ನುವಂತೆ ಮಾಡುತ್ತದೆ. ಕಂಬಗಳನ್ನೇರಿ ಮಾಡುವ ಚಿತ್ರ ವಿಚಿತ್ರ ವರ್ತನೆಗಳು ತುಸು ಭಯ ಹುಟ್ಟಿಸುತ್ತೆ.
ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!
ಗಾಣಗಾಪುರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇನ್ನು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ದತ್ತನ ಕ್ಷೇತ್ರದಲ್ಲಿ ಬಾಲ ದತ್ತ ಮಗುವಿಗೆ ಕಾಕಡಾರತಿ, ಮಹಾನ್ಯಾಸ, ಹಾಲಿನ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತವೆ. ಈ ದೇವಸ್ಥಾನದಲ್ಲಿರುವ ನಿರ್ಗುಣ ಪಾದುಕೆಗಳಿಗೆ ಪಾದಪೂಜೆ ಹಾಗೂ ಮಹಾ ಮಂಗಳಾರತಿ ನಡೆಯುತ್ತೆ. ಅನ್ನಸಂತರ್ಪಣೆ, ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ, ಅಭಿಷೇಕ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಕ್ತರು ಪಾಲ್ಗೊಳ್ತಾರೆ.
ಒಟ್ಟಾರೆ ನಿಮ್ಮ ದೇವಸ್ಥಾನ ದರ್ಶನ ಲಿಸ್ಟ್ನಲ್ಲಿ ಗಾಣಗಾಪುರ ಕ್ಷೇತ್ರವನ್ನ ಸೇರಿಸ್ಕೊಳ್ಳೋದನ್ನ ಸೇರಿಸ್ಕೊಳ್ಳೋದನ್ನ ಮರೆಯಬೇಡಿ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ