Kalaburagi Flowers: ಬಿಸಿಲ ನಾಡಲ್ಲಿ ಪುಷ್ಪ ಕ್ರಾಂತಿ! ಹೂವಿನ ನಗರಿಯಾಗಿ ಬದಲಾಗ್ತಿದೆ ತೊಗರಿ ಕಣಜ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಲಬುರಗಿ ಸುತ್ತಮುತ್ತಲಿನ ಮಾಲಗತ್ತಿ, ಭೂಪಾಲ್, ತೆಗನೂರ್, ಓಕಳಿ ಗ್ರಾಮದಲ್ಲಿ ಸಾವಿರಾರು ಎಕರೆ ಪ್ರದೇಶದಷ್ಟು ಹೂಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ.

  • Share this:

    ಕಲಬುರಗಿ: ಗುಲಾಬಿ, ಸೇವಂತಿಗೆ, ಸುಗಂಧಿ, ಚೆಂಡು ಹೂ ಹೀಗೆ ಬಿಸಿಲ ನಾಡಿನಲ್ಲಿ ಪುಷ್ಪ ಕೃಷಿ ಹೊಸ ಭರವಸೆ ಮೂಡಿಸಿದೆ. ತೊಗರಿ ನಾಡಿನಲ್ಲೆಲ್ಲ ಈಗ ಪುಷ್ಪ ಕೃಷಿಯದ್ದೇ (Kalaburagi Flowers Farming)  ಮಾತು! ಎಲ್ಲಿ ನೋಡಿದ್ರಲ್ಲಿ ತೊಗರಿ ಜಮೀನಿನಲ್ಲಿ ಈಗ ಹೂಗಳದ್ದೇ ಕಾರುಬಾರು. ಅಷ್ಟಕ್ಕೂ ಕಲಬುರಗಿ ಅಂದ್ರೆ ತೊಗರಿನಾಡು ಅಂತಾ ಕರೆಸಿಕೊಳ್ತಿದ್ದ ಊರಲ್ಲಿ ಇದ್ಯಾಕೆ ಈ ಬದಲಾವಣೆ ಅಂತೀರಾ? ಹೇಳ್ತೀವಿ ನೋಡಿ.


    ತೊಗರಿನಾಡಲ್ಲಿ ಪುಷ್ಪ ಕೃಷಿ
    ಹೌದು, ಕಲಬುರಗಿ ಅಂದ ತಕ್ಷಣ ಥಟ್ ಅಂತ ನೆನಪಾಗುವುದೇ ತೊಗರಿ ಬೆಳೆ. ಈ ಭಾಗದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವುದರಿಂದ ಇದನ್ನು ತೊಗರಿನಾಡು ಎಂದೇ ಕರೆಯುತ್ತಾರೆ. ಆದರೆ ಈ ಬಾರಿ ಇಲ್ಲಿನ ರೈತರು ಸಾಂಪ್ರದಾಯಿಕ ತೊಗರಿ ಬೆಳೆಗೆ ಗುಡ್ ಬಾಯ್ ಹೇಳಿ ಪುಷ್ಪಕೃಷಿಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಕಲಬುರಗಿ ಜಿಲ್ಲೆಯಾದ್ಯಂತ  ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂವುಗಳು ಅರಳಿ ನಿಂತಿವೆ.




    ಉತ್ತಮ ಆದಾಯ
    ಪ್ರತಿವರ್ಷ ತೊಗರಿ ಬೆಳೆದ ರೈತರು ನೆಟೆರೋಗ, ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ಹಾನಿ, ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಿ ಉತ್ತಮ ಇಳುವರಿ ಬಾರದೇ ತಲೆಕೆಡಿಸಿಕೊಂಡಿದ್ರು.  ಇದರಿಂದ ಬೇಸತ್ತ ರೈತರು ಇದೀಗ ಪುಷ್ಪ ಕೃಷಿಯತ್ತ ಮುಖ ಮಾಡಿದ್ದಾರೆ. ಕಲಬುರಗಿ ಸುತ್ತಮುತ್ತಲಿನ ಮಾಲಗತ್ತಿ, ಭೂಪಾಲ್, ತೆಗನೂರ್, ಓಕಳಿ ಗ್ರಾಮದಲ್ಲಿ ಸಾವಿರಾರು ಎಕರೆ ಪ್ರದೇಶದಷ್ಟು ಹೂಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ.


    ವರ್ಷವಿಡೀ ಆದಾಯ ಮೂಲ
    ರೈತರು ಒಂದೇ ತಳಿಯ ಹೂವನ್ನ ಬೆಳೆಯದೇ ಗುಲಾಬಿ ಹೂ, ಚೆಂಡು ಹೂ, ಸುಗಂಧರಾಜ, ಹೀಗೆ ವಿಭಿನ್ನ ಆಗಿರುವ ಹೂಗಳನ್ನು ಬೆಳೆದು ಪ್ರತಿನಿತ್ಯವು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಇದರಿಂದ ಪ್ರತಿನಿತ್ಯದ ಆದಾಯ ಹೆಚ್ಚಾಗಿದ್ದು ರೈತರಿಗೆ ಆರ್ಥಿಕ ಸದೃಢತೆಗೆ ಕಾರಣವಾಗಿದೆ. ತೊಗರಿ ಬೆಳೆಯು ವಾರ್ಷಿಕ ಬೆಳೆಯಾಗಿದ್ದು ಒಂದು ಬಾರಿ ಮಾತ್ರ ಆದಾಯ ನೀಡಿದ್ರೆ, ಇದು ಪ್ರತಿದಿನ ಆದಾಯ ನೀಡ್ತಿರೋದೆ ರೈತರ ಖುಷಿ ಡಬಲ್‌ ಆಗಿದೆ. ಅಷ್ಟೇ ಅಲ್ದೇ, ಪುಷ್ಪ ಕೃಷಿಗೆ ಒಂದು ಬಾರಿ ಉಳುಮೆ ಮಾಡಿದರೆ ಸುಮಾರು ಐದರಿಂದ ಆರು ವರ್ಷಗಳ ಕಾಲ ಇಳುವರಿ ಪಡೆಯಬಹುದಾಗಿದೆ.


    ಇದನ್ನೂ ಓದಿ: Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!




    ಬದಲಾಗುತ್ತಿದೆ ತೊಗರಿ ಕಣಜ
    ರೈತರು ಪುಷ್ಪಕೃಷಿಯತ್ತ ಹೆಚ್ಚಿನ ಒಲವು ತೋರಲು ಕಾರಣವೇ ಉತ್ತಮ ಆದಾಯ ಹಾಗೂ ಸರ್ಕಾರದ ಸವಲತ್ತು. ಜೊತೆಗೆ ತೊಗರಿಗೆ ಎದುರಾದಂತೆ ಯಾವುದೇ ಹೆಚ್ಚಿನ ಕೀಟಬಾಧೆ, ನೆಟೆರೋಗ ಆವರಿಸದು. ಅಷ್ಟೇ ಅಲ್ದೇ ಪುಷ್ಪ ಕೃಷಿಗಾಗಿ ತೋಟಗಾರಿಕೆ ಇಲಾಖೆಯೂ ಸರ್ಕಾರದ ಸೌಲಭ್ಯಗಳನ್ನ ರೈತರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.


    ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ


    ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ಸೇರಿ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳಿಂದ ಬರುವ ಲಾಭವನ್ನು ಪಡೆಯಬಹುದಾಗಿದೆ. ಒಟ್ಟಿನಲ್ಲಿ ತೊಗರಿನಾಡು ಕಲಬುರಗಿ ನಿಧಾನವಾಗಿ ಪುಷ್ಪನಾಡಾಗಿ ಬದಲಾಗ್ತಿರೋದು ನಿಜವೇ ಸರಿ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: