ಕಲಬುರಗಿ: ಹೊರಗಡೆ ಸಾಂಚಿಯ ಸ್ತೂಪದಂತೆ ಕಂಗೊಳಿಸೋ ಶ್ವೇತಮಯ ಪ್ರಾರ್ಥನಾ ಮಂದಿರ. ಒಳಗಡೆ ಅಷ್ಟೇ ಪ್ರಸನ್ನವದನನಾಗಿ ಕೂತಿರೋ ಬುದ್ಧ. ಅದೆಷ್ಟೋ ಭಕ್ತರು, ಪೂಜೆ ಪುನಸ್ಕಾರ, ಭಿಕ್ಕುಗಳಿಂದ ಆಶೀರ್ವಾದ. ಹೌದು, ಬೌದ್ಧರ ನಾಡು ಟಿಬೆಟ್ ನೆನಪಿಸುವಂತಿದೆ ಕರುನಾಡಿನ ಈ ಬೌದ್ಧ ವಿಹಾರ. ಹಾಗಿದ್ರೆ ಇದು ಇರೋದಾದ್ರೂ ಎಲ್ಲಿ? ಏನಿದರ ಸ್ಪೆಷಲ್? (Buddha Vihaara) ಎಲ್ಲವನ್ನೂ ಹೇಳ್ತೀವಿ ನೋಡಿ.
ಇದು ಕಲಬುರಗಿ ಜಿಲ್ಲೆಯ ಸೇಡಂ ರಸ್ತೆಯಲ್ಲಿರುವ ಆಕರ್ಷಣಿಯ ಬೌದ್ಧ ವಿಹಾರ. 2007ರಲ್ಲಿ ನಿರ್ಮಾಣವಾದ ಈ ಬುದ್ಧ ವಿಹಾರವು 70 ಎಕರೆಯಲ್ಲಿ ಚಾಚಿಕೊಂಡಿದ್ದು, ಅದೆಷ್ಟೋ ಪ್ರವಾಸಿಗರು ಈ ಶ್ವೇತವರ್ಣದ ಬುದ್ಧ ವಿಹಾರ ಕಾಣಲು ಬರುತ್ತಾರೆ. ಪ್ರತಿ ವರ್ಷವೂ ವೈಶಾಖ ಬುದ್ಧ ಪೂರ್ಣಿಮೆಯಂತೂ ಅತ್ಯಂತ ಸಂಭ್ರಮ ಸಡಗರದಿಂದ ಇಲ್ಲಿ ಹಬ್ಬವನ್ನ ಆಚರಿಸಲಾಗುತ್ತೆ. ದೇಶ-ವಿದೇಶಗಳ ಬೌದ್ದ ಬಿಕ್ಕುಗಳಿಂದ ವಿಶೇಷ ಪೂಜೆ ನೆರವೇರಿಸಲಾಗುತ್ತೆ. ಕರ್ನಾಟಕವಲ್ಲದೇ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳ ಅನೇಕ ಬೌದ್ದ ಉಪಾಸಕರು ಆಗಮಿಸುತ್ತಾರೆ.
ವಿಹಾರಕ್ಕೆ 170 ಕಂಬಗಳ ಆಧಾರ!
ಈ ವಿಹಾರದ ಶಿಲ್ಪಕಲೆಗಳು ಸಾಂಚಿ, ಅಜಂತಾ ಎಲ್ಲೋರ ಮತ್ತು ನಾಗ್ಪುರದ ಪ್ರಖ್ಯಾತ ಬೌದ್ಧ ಕೇಂದ್ರಗಳ ವಾಸ್ತುಶಿಲ್ಪದ ಮಾದರಿಯನ್ನೇ ಪ್ರತಿಬಿಂಬಿಸುವಂತಿದೆ. ಈ ವಿಹಾರಕ್ಕೆ ಆಧಾರವಾಗಿ 170 ಕಂಬಗಳು ನಿಂತಿರೋದು ಕಣ್ಮನ ಸೆಳೆಯುತ್ತೆ.
2 ಸಾವಿರ ಭಕ್ತರಿಂದ ಒಂದೇ ಸಲಕ್ಕೆ ಪ್ರಾರ್ಥನೆ!
ವಿಹಾರದ ಮೊದಲ ಮಹಡಿಯಲ್ಲಿ ಮನೋಹರ ಕೆತ್ತನೆಯನ್ನು ಒಳಗೊಂಡ ಎರಡು ಬುದ್ಧನ ಮೂರ್ತಿಗಳಿವೆ. ನೆಲ ಮಹಡಿಯಲ್ಲಿ ಕಪ್ಪು ವಿಗ್ರಹದ ಆರು ಅಡಿ ಎತ್ತರದ ಬುದ್ಧನ ಮೂರ್ತಿಯಿದ್ದು ವಿಹಾರದ ನೆಲ ಮನೆಯಲ್ಲಿ ಸುಮಾರು 2 ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುವಷ್ಟು ಸ್ಥಳಾವಕಾಶವಿದೆ.
ಇದನ್ನೂ ಓದಿ: Kalaburagi: ಕಲಬುರಗಿಯ ಸಿದ್ಧಲಿಂಗೇಶ್ವರ ಸಂಸ್ಥಾನ ಮಠಕ್ಕೆ ಹೊಸ ಪೀಠಾಧಿಪತಿ!
ಇಲ್ಲಿನ ಕುಳಿತ ಬುದ್ಧನ ಮೂರ್ತಿಯಂತೂ ಅತ್ಯಂತ ಆಕರ್ಷಕ. ಅಶೋಕನ ಮಾದರಿಯಂತೆ ನಾಲ್ಕು ದಿಕ್ಕುಗಳಲ್ಲಿ ಕಂಬಗಳನ್ನು ಇಡಲಾಗಿದೆ. ಈ ವಿಹಾರಕ್ಕೆ ಒಟ್ಟು ಆರು ದ್ವಾರಗಳಿದ್ದು, ವಿಹಾರದ ಸುತ್ತಲು ಹಸಿರು ಗಿಡಮರಗಳನ್ನು ಬೆಳೆಸಿ ಸುಂದರ ಪರಿಸರ ಮುದ ನೀಡುತ್ತೆ.
ಇದನ್ನೂ ಓದಿ: Kalaburagi: ಊರು ಕಾಯುವ ಆಂಜನೇಯನಿಗೆ ಇಲ್ಲಿ ವೃದ್ಧರೊಬ್ಬರೇ ಆಸರೆ!
ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)
ಕಲಬುರಗಿಯ ಈ ಬುದ್ಧ ವಿಹಾರಕ್ಕೆ ನೀವೂ ಒಮ್ಮೆ ಬರೋದಿದ್ರೆ ಕಲಬುರಗಿ ನಗರದಿಂದ ಬಸ್, ಆಟೋ ವ್ಯವಸ್ಥೆ ಕೂಡ ಇದೆ. ಏನೇ ಇರಲಿ, ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧನ ವಿಹಾರಕ್ಕೆ ಭೇಟಿ ನೀಡಿ ನೀವೂ ಮನಸ್ಸಿಗೆ ಶಾಂತಿ ಪಡೆಯಬಹುದಾಗಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ