ಕಲಬುರಗಿ: ಸುಂದರ ಕೆತ್ತನೆ, ಆಕರ್ಷಕ ಕಂಬಗಳ ಸಾಲು. ಒಳಗಡೆ ಬ್ರಹ್ಮ, ವಿಷ್ಣು, ಮಹೇಶ್ವರ! ಬಿಸಿಲ ನಗರಿಯಲ್ಲಿದೆ ಇಂತಹ ಅದ್ಭುತ ದೇಗುಲ! (Hindu Temple) ವಿಶೇಷ ಅಂದ್ರೆ ಬ್ರಹ್ಮನನ್ನ (Brahma) ಆರಾಧಿಸುವ ಕೆಲವೇ ಕೆಲವು ದೇಗುಲಗಳಲ್ಲಿ ಇದೂ ಒಂದು!
60 ಕಂಬಗಳ ದೇಗುಲ
ಹೌದು, ಇದು ಕಲಬುರಗಿಯ ನಾಗವಿ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ತಾಪುರ ಪಟ್ಟಣದಲ್ಲಿರುವ ಅರವತ್ತು ಕಂಬದ ಬ್ರಹ್ಮ ವಿಷ್ಣು ಮಹೇಶ್ವರ ದೇಗುಲ. ಅತ್ಯಂತ ಪುರಾತನವಾಗಿರುವ ಈ ದೇಗುಲವು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ದೇಗುಲದಲ್ಲಿ 60 ಕಂಬಗಳಿದ್ದು 60 ಕಂಬಗಳ ದೇಗುಲ ಅಂತಾನೇ ಫೇಮಸ್ ಆಗಿದೆ.
ವಿಶಿಷ್ಟ ವಾಸ್ತುಶಿಲ್ಪ
ಈ ದೇಗುಲ ವಾಸ್ತುಶಿಲ್ಪ, ಕೆತ್ತನೆಯಂತೂ ಇಂದಿಗೂ ಅದ್ಭುತವೆನಿಸುವಂತಿದೆ. ಈ ದೇಗುಲ ಹೊರಭಾಗದಲ್ಲಿ ವಿಶಾಲವಾದ ಪ್ರಾಂಗಣವೂ ಇದ್ದು ಪ್ರವಾಸಿಗರಿಗೆ ಹೆಚ್ಚು ಮುದವೆನಿಸುತ್ತದೆ. ದೇಗುಲದ ಪ್ರವೇಶ ದ್ವಾರದ ಮೆಟ್ಟಿಲುಗಳು ಆಧುನಿಕ ಕಾಲದ ಮೆಟ್ಟಿಲುಗಳಿಗಿಂತಲೂ ಅದ್ಭುತವೆನಿಸುವಂತಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಬಾದಾಮಿ ಚಾಲುಕ್ಯರ ಕೊಡುಗೆ
ಇನ್ನೊಂದು ವಿಶೇಷ ಅಂದ್ರೆ ಈ ದೇವಾಲಯವನ್ನು ಒಂದೇ ಕಲ್ಲಿನ ವೇದಿಕೆಯ ಮೇಲೆ ಕಟ್ಟಲಾಗಿದೆ. ಇದಕ್ಕೆ ಪೂರ್ವ ದಿಕ್ಕಿನ ಕಡೆಗೆ ಇರುವ ಒಂದು ಬಾಗಿಲಿದ್ದು, ಅದರ ಮೇಲೆ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಬರೆಯಲಾಗಿದೆ. ಇದನ್ನು ಬಾದಾಮಿ ಚಾಲುಕ್ಯ ವಂಶದ ಮೊದಲನೆಯ ಸೋಮೇಶ್ವರ ರಾಜನ ಆಳ್ವಿಕೆಯಲ್ಲಿ ಕಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ.
ಶಿವಲಿಂಗಗಳು
ಇನ್ನು ದೇವಾಲಯದ ನಡುವೆ ಒಂದು ಚಿಕ್ಕ ನೀರಿನ ಹೊಂಡವಿದ್ದು, ಸರಿಯಾಗಿ ಅದರ ಮೇಲಿನ ಸೂರು ತೆರೆದಿದೆ. ಈ 60 ಕಂಬಗಳಲ್ಲಿ ನೀರಿನ ಹೊಂಡದ ಸುತ್ತಲಿರುವ ನಾಲ್ಕು ಕಂಬಗಳು ಮಾತ್ರ ಅಳತೆ ಹಾಗೂ ರಚನೆಯಲ್ಲಿ ಉಳಿದ ಕಂಬಗಳಿಂದ ಸ್ವಲ್ಪ ಭಿನ್ನವಾಗಿವೆ. ದೇವಾಲಯದ ಒಳಗಡೆ ಗುಡಿಯಲ್ಲಿ ಶಿವಲಿಂಗಗಳಿವೆ.
ಒಟ್ಟಿನಲ್ಲಿ 60 ಕಂಬಗಳ ಈ ದೇಗುಲದ ವಿಶಿಷ್ಟ ವಾಸ್ತುಶಿಲ್ಪ, ಕಲ್ಲಿನ ರಚನೆ ಇದೆಲ್ಲವೂ ಅತ್ಯಂತ ಆಕರ್ಷವೆನಿಸಿದೆ. ಅದೆಷ್ಟೇ ಹಳೆಯದಾದರೂ ಇಂದಿಗೂ ಪ್ರವಾಸಿಗರನ್ನ ಕೈ ಬೀಸಿ ಸೆಳೆಯುವ ಸೂಜಿಗಲ್ಲಿನಂತಹ ನೋಟವನ್ನೂ ಈ ಬ್ರಹ್ಮ, ವಿಷ್ಣು, ಮಹೇಶ್ವರ ದೇಗುಲ ಹೊಂದಿರುವುದು ವಿಶೇಷವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ