ಕಲಬುರಗಿ: ದೇವಿ ದರ್ಶನಕ್ಕಾಗಿ ಜನರ ಆತುರ. ದಿನಂಪ್ರತಿ ಹತ್ತು ಹಲವು ಹರಕೆ ಹೊತ್ತು ಬರುವ ಭಕ್ತರು. ನಂಬಿಕೆಯನ್ನ ಸದಾ ಕಾಪಿಡುವ ಆದಿಶಕ್ತಿ. ವಿಜಯನಗರದ (Vijayanagara Empire) ಒಳಿತು, ಅಳಿವಿಗೂ ಕಾರಣವಾದ ತ್ರಿಲೋಕ ಮಾತೆಯೂ ಈಕೆ. ಹಾಗಿದ್ರೆ ಈ ದೇವಿ (Bhagyavanti Temple) ಯಾರು? ಈಕೆಯ ಆವಾಸ ಸ್ಥಾನವಾದ್ರೂ ಎಲ್ಲಿ ಅನ್ನೋದನ್ನ ಹೇಳ್ತೀವಿ ನೋಡಿ.
ಭಾಗಮ್ಮ ತಾಯಿ, ಘತ್ತರಗಿ ಭಾಗ್ಯವಂತಿ, ಆದಿಶಕ್ತಿ, ತ್ರಿಲೋಕ ಮಾತೆ ಎಂಬ ನಾನಾ ಹೆಸರುಗಳಿಂದ ಪ್ರಖ್ಯಾತಿ ಪಡೆದಿರುವ ಈ ದೇವಿಯೇ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶ್ರೀ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದ ಅಧಿದೇವತೆ.
ದಾರಿದ್ರ್ಯ ದೂರ, ಅದೃಷ್ಟ ಹರಿದುಬರುತ್ತೆ
ಭಾಗ್ಯವಂತಿ ದೇವಸ್ಥಾನಕ್ಕೆ ಪ್ರತಿ ಶುಕ್ರವಾರ ಹಾಗೂ ಅಮಾವಾಸ್ಯೆಯಂದು ಭಕ್ತರ ದಂಡೇ ಹರಿದುಬರುತ್ತೆ. ಈ ದೇವಸ್ಥಾನಕ್ಕೆ ಹೋದ್ರೆ ದಾರಿದ್ರ್ಯವೆಲ್ಲವೂ ದೂರವಾಗಿ ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ ಎಂಬುದೇ ಭಕ್ತರ ನಂಬಿಕೆ. ಈ ದೇವಸ್ಥಾನಕ್ಕೆ ಕರ್ನಾಟಕವಷ್ಟೇ ಅಲ್ದೇ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ನಾನಾಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ.
ವಿಜಯನಗರ ಸಾಮ್ರಾಜ್ಯಕ್ಕೂ ಇದೆ ಲಿಂಕ್!
ವಿಶೇಷ ಅಂದ್ರೆ ಈ ಭಾಗ್ಯವಂತಿ ದೇವಿ ವಿಜಯನಗರ ಸಾಮ್ರಾಜ್ಯದ ಆರಾಧ್ಯದೇವಿ. ವಿಜಯನಗರದ ಉನ್ನತಿಗೂ ಈ ದೇವಿಯೇ ಕಾರಣ ಎಂದು ಎಲ್ಲ ಅರಸರು ನಂಬಿದ್ರಂತೆ. ಆದರೆ ಇದೇ ದೇವಿಯೇ ವಿಜಯನಗರದ ಅವನತಿಗೂ ಕಾರಣಳಾದಳು ಅನ್ನೋ ನಂಬಿಕೆ ಈಗ ಜನರಲ್ಲಿದೆ.
ತುಂಗಾ ನದಿಗೆ ಹಾರಿದ ಭಾಗ್ಯವಂತಿ ದೇವಿ
ಅದೇನಾಯ್ತು ಅಂದ್ರೆ, ವಿಜಯನಗರ ಸಾಮ್ರಾಜ್ಯದ ಅರಸರೆಲ್ಲರೂ ಪ್ರತಿನಿತ್ಯವು ದೇವಿಯನ್ನು ಆರಾಧಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರೆ, ಆ ಸಾಮ್ರಾಜ್ಯದ ಕೊನೆಯ ಅರಸ ರಾಮರಾಯ ದೇವಿಯನ್ನು ನಿರ್ಲಕ್ಷಿಸಿದನಂತೆ. ಇದರಿಂದ ಮುನಿಸಿಕೊಂಡ ಭಾಗ್ಯವಂತಿ ದೇವಿಯು ಆತನನ್ನ ಶಪಿಸಿ ತುಂಗಾ ನದಿಗೆ ಹಾರಿಬಿಡುತ್ತಾಳೆ. ಅಲ್ಲಿಂದ ವಿಜಯನಗರ ಸಾಮ್ರಾಜ್ಯದ ಅವನತಿಯ ಹಾದಿ ಹಿಡಿಯುತ್ತದೆ ಅನ್ನೋ ಕಥೆ ವಾಡಿಕೆಯಲ್ಲಿದೆ.
ಇದನ್ನೂ ಓದಿ: Kalaburagi: ಮೈಲಾರಲಿಂಗೇಶ್ವರನಿಗೆ ಭಂಡಾರ ಓಕುಳಿ ಸಂಭ್ರಮ!
ಹೀಗೆ ವಿಜಯನಗರ ಅರಸನಿಂದ ಮುನಿಸಿಕೊಂಡು ತುಂಗೆಯ ಒಡಲಿಗೆ ಹಾರಿದ ಭಾಗ್ಯವಂತಿ ದೇವಿ ಭೀಮೆಯ ತಟದಲ್ಲಿರುವ ಘತ್ತರಗಿ ಗ್ರಾಮದಲ್ಲಿ ಕುರಿಗಾಯಿ ದ್ಯಾವಪ್ಪ ಎಂಬುವವರಿಗೆ ಪ್ರತ್ಯಕ್ಷವಾಗ್ತಾಳೆ. ಊರಗೌಡನ ಪತ್ನಿಯ ಕನಸಲ್ಲೂ ನಾಗರಹಾವಿನ ರೂಪದಲ್ಲಿ ಪ್ರತ್ಯಕ್ಷಳಾಗಿ ಘತ್ತರಗಿಯಲ್ಲಿ ನೆಲೆಸುವುದಾಗಿ ತಿಳಿಸುತ್ತಾಳೆ. ಬಳಿಕ ಗ್ರಾಮಸ್ಥರೆಲ್ಲ ಸೇರಿ ಅದ್ದೂರಿ ಮೆರವಣಿಗೆಯೊಂದಿಗೆ ಊರಗೌಡನ ತೋಟದಲ್ಲಿ ಭಾಗ್ಯವಂತಿ ದೇವಿಯ ದೇವಸ್ಥಾನವನ್ನು ನಿರ್ಮಿಸುತ್ತಾರೆ. ಅಂದಿನಿಂದ ಈ ದೇವಿಯು ಘತ್ತರಗಿ ಭಾಗ್ಯವಂತಿ ಎಂದೆ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾಳೆ.
ದೇವಿ ದರ್ಶನ ಮಾಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇದನ್ನೂ ಓದಿ: Kalaburagi Goshala: 200 ಕ್ಕೂ ಹೆಚ್ಚು ಗೋವುಗಳಿಗೆ 'ಪುಣ್ಯಕೋಟಿ'ಯ ಆಶ್ರಯ, ಕೃಷಿಕರಿಗೂ ಲಾಭ!
ಇಲ್ಲಿಗೆ ಆಗಮಿಸುವ ಭಕ್ತರು ದೇವಿಗೆ ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಪ್ರತಿ ಶುಕ್ರವಾರವು ದೇವಿಯ ಸನ್ನಿಧಾನದಲ್ಲಿ ಸಿಡಿ ಆಡುವ ಪ್ರತೀತಿ ಇತ್ತು. ಆದರೆ ಸರ್ಕಾರ ಸಿಡಿ ಆಡುವ ಪದ್ಧತಿಯನ್ನು ನಿಷೇಧಿಸಿದ್ರಿಂದ ಅಂತಹ ಸಂಪ್ರದಾಯ ಈಗ ನಡೆಯುತ್ತಿಲ್ಲ. ಆದರೂ ಇಂದಿಗೂ ಸಹ ಸಹ ಕೋಟ್ಯಂತರ ಭಕ್ತರ ಆರಾಧ್ಯ ದೇವಿಯಾಗಿ ಭಾಗಮ್ಮ ತಾಯಿ ಸ್ಥಾನ ಪಡೆದಿದ್ದಾಳೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ