ಮುಗಿಲೆತ್ತರಕ್ಕೆ ಚಾಚಿಕೊಂಡಂತಿರೋ ಬೆಟ್ಟ, ಶಾಂತವಾಗಿ ಹರಿಯುತ್ತಿರೋ ಹೊಳೆ. ಎಂತವರನ್ನೂ ಕೈ ಬೀಸಿ ಕರೆಯಬಲ್ಲಂತಹ ಸೊಬಗು. ಚಾರಣ ಪ್ರಿಯರಿಗಂತೂ ಬಿಸಿಲ ನಾಡಿನ ಸ್ವರ್ಗವಿದು. ವನ್ಯಜೀವಿಗಳ ಪಾಲಿನ ಆಶ್ರಯ ತಾಣವಿದು. ಇದುವೇ ಚಂದ್ರಂಪಳ್ಳಿ ವನ್ಯಧಾಮ. ಹೌದು, ಕಲ್ಯಾಣ ಕರ್ನಾಟಕದ ಚಾರಣಪ್ರಿಯರ ಹಾಟ್ ಸ್ಪಾಟ್ (Best Trekking Place) ಈ ಚಿಂಚೋಳಿಯ ಚಂದ್ರಂಪಳ್ಳಿ (Chincholi Forest Treck) ವನ್ಯಧಾಮ. ಕಲಬುರಗಿ ಜಿಲ್ಲೆಗೆ (Kalaburagi) ಮುಕುಟ ಮಣಿಯಂತಿರೋ ಈ ವನ್ಯಧಾಮ ಪ್ರವಾಸಿಗರು, ಪರಿಸರ ಪ್ರೇಮಿಗಳ ಪಾಲಿಗಂತೂ ಆಸಕ್ತಿಯ ತಾಣ.
ಪ್ರಕೃತಿಯ ಹಲವು ರಮಣೀಯತೆಯನ್ನ ಈ ಚಂದ್ರಂಪಳ್ಳಿ ಜಲಾಶಯ ಹೊಂದಿದೆ. ಮಲೆನಾಡಿನ ಅನುಭವ ನೀಡುವ ಈ ತಾಣಕ್ಕೆ ಆಗಮಿಸಿದರೆ ಸುಲಭವಾಗಿ ಹಿಂತಿರುಗಲು ಮನಸ್ಸು ಕೇಳದು. ಜುಳುಜುಳು ಹರಿಯುವ ಕೋತ್ವಾಲ ನಾಲಾ ಹಾಗೂ ಪ್ರಸಿದ್ಧ ಚಂದ್ರಪಳ್ಳಿ ಜಲಾಶಯ ಚಾರಣಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಇಲ್ಲಿದೆ ನಾಲ್ಕು ಚಾರಣದ ಮಾರ್ಗಗಳು!
ಕಲ್ಯಾಣ ಕರ್ನಾಟಕ ಪ್ರವಾಸಿಗರು, ಚಾರಣ ಪ್ರಿಯರು, ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಅರಣ್ಯ ಸೌಂದರ್ಯವನ್ನು ಸವಿಯುತ್ತಾರೆ. ಈ ಅರಣ್ಯ ಪ್ರದೇಶವು 134 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು, ವನ್ಯಧಾಮದಲ್ಲಿ ನಾಲ್ಕು ಚಾರಣದ ಮಾರ್ಗಗಳನ್ನು ಗುರುತಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪ್ರೇಕ್ಷಣೀಯ ತಾಣವಾಗಿರುವ ಚಂದ್ರಂಪಳ್ಳಿ ಜಲಾಶಯದಿಂದ ಗೊಟ್ಟಮಗೊಟ್ಟದವರೆಗೆ ಚಾರಣದ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಿದೆ.
ಚಾರಣವೊಂದೇ ಅಲ್ಲ ಕಣ್ರೀ!
ಈ ಮಾರ್ಗದಲ್ಲಿ ಸುಮಾರು 9 ಕಿ.ಮೀ. ಉದ್ದದ ಎತ್ತರದ ಪರ್ವತಗಳು ಜತೆಗೆ ಗಿಡಮರಗಳ ಸುಂದರ ಪರಿಸರವನ್ನ ಕಣ್ತುಂಬಿಕೊಳ್ಳಬಹುದು. ಚಾರಣದ ವೇಳೆ ಸಸ್ಯಶಾಸ್ತ್ರ, ಭೂಗೋಳ, ಪ್ರಾಣಿಶಾಸ್ತ್ರದ ಸಂಕ್ಷಿಪ್ತ ಮಾಹಿತಿ ಲಭಿಸುವತಂಹ ನಾಮಫಲಕಗಳು ಅಲ್ಲಲ್ಲಿ ಅಳವಡಿಸಿದ್ದು ಚಾರಣಿಗರಿಗೆ ವನ್ಯಜೀವಿಗಳ, ಸಸ್ಯಗಳ ಹೆಸರು ಮತ್ತು ಚಿತ್ರಗಳ ಕಿರುಮಾಹಿತಿ ಒದಗಿಸುತ್ತದೆ. ಜೊತೆಗೆ ಅರಣ್ಯ ಅಲಲ್ಲಿ ಸೆಲ್ಪಿ ಝೋನ್ ಗಳನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ
ಹೀಗೊಂದು ಆ್ಯಪ್ ಸಹ ಇದೆ!
ಇನ್ನು ಚಾರಣರಿಗೆ ಸಹಕಾರವಾಗಲಿ ಎಂಬ ಉದ್ದೇಶದಿಂದ ಚಿಂಚೋಳಿ ವನ್ಯಜೀವಿ ಧಾಮದ ಚಾರಣ ಮಾರ್ಗದ ಕುರಿತು ಅರಣ್ಯ ಇಲಾಖೆ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಚಾರಣಿಗರು ಚಾರಣ ನಡೆಸುವಾಗ, ಈ ಆ್ಯಪ್ ಮೂಲಕ ತಾವು ಎಲ್ಲಿದ್ದೇವೆ? ಸುತ್ತಲಿನ ಏನೆಲ್ಲ ಇದೆ? ಅನ್ನೋ ಮಾಹಿತಿಯೂ ಸಿಗುತ್ತೆ. ಜೊತೆಗೆ ಸಮೀಪದಲ್ಲಿ ಲಭ್ಯವಿರುವ ಸಸ್ಯ ಪ್ರಕಾರಗಳು, ಪ್ರಾಣಿಗಳ ಮಾಹಿತಿಯೂ ಆ್ಯಪ್ನಲ್ಲಿದೆ. ಕುಸ್ರಂಪಳ್ಳಿ ಗೊಟ್ಟಂಗೊಟ್ಟ, ಮಂಡಿಬಸವಣ್ಣ ಕ್ಯಾಂಪ್ನಿಂದ ಶೇರಿ ಭಿಕನಳ್ಳಿ, ಚಂದ್ರಂಪಳ್ಳಿಯಿಂದ ಶೇರಿ ಭಿಕನಳ್ಳಿ, ಶೇರಿ ಭಿಕನಳ್ಳಿಯಿಂದ ಗೊಟ್ಟಂಗೊಟ್ಟ ಮಾರ್ಗಗಳು ಕೂಡ ಚಾರಣಕ್ಕೆ ಸೂಕ್ತವಾಗಿವೆ.
ಇದನ್ನೂ ಓದಿ: Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್ ಟೈಮ್ ರೈತ
ಚಾರಣಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]
ಕೇವಲ ಮಲೆನಾಡು ಮಾತ್ರವಲ್ಲದೇ ಕಲ್ಯಾಣ ಕರ್ನಾಟಕದ ಬಿಸಿಲೂರಿನ ಚಿಂಚೋಳಿಯ ಫಾರೆಸ್ಟ್ ಕೂಡಾ ಚಾರಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಹಾಗಿದ್ರೆ, ಕಲಬುರಗಿ ಕಡೆ ನೀವೇನಾದ್ರೂ ಪ್ರವಾಸ ಹೋಗ್ತೀರಿ ಅಂದ್ರೆ ಒಂದು ದಿನ ಚಿಂಚೋಳಿ ಚಾರಣಕ್ಕಾಗಿ ಮೀಸಲಿಟ್ಟು ಎಂಜಾಯ್ ಮಾಡಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ