ಕಲಬುರಗಿ: ಸುಂದರ ಪರಿಸರ, ಸ್ವಚ್ಛಂದ ವಾತಾವರಣದ ನಡುವೆ ಗುಂಬಜ್ ಗತ್ತು. ಕಮಾನುಗಳ ನಡುವೆ ಆಕರ್ಷಕ ವಾಸ್ತುಶಿಲ್ಪದ ಕಟ್ಟಡ. ಒಳಗಡೆ ಇವೆ ರಾಜ ಮಹಾರಾಜರ ಸಪ್ತ ಸಮಾಧಿಗಳು. ಹಾಗಿದ್ರೆ ಜನರ ಚಿತ್ತ ಸೆಳೆಯುವ ಗೋಲ್ಗುಂಬಜ್ ಮಾದರಿಯ ಈ ಕಟ್ಟಡ ಎಲ್ಲಿದೆ ಅಂತೀರಾ? ಹೌದು, ಗಗನ ಚುಂಬಿ ಕಟ್ಟಡದಂತಿರೋ ಈ ಏಳು ಗುಂಬಜ್ ನೋಡುವುದೇ ಕಣ್ಣಿಗೊಂದು ಹಬ್ಬ. ಅದರಲ್ಲೂ ವಿಜಯಪುರದ ಗೋಲ್ಗುಂಬಜ್ ನೋಡಿದವರಿಗಂತೂ ಈ ಗುಂಬಜ್, ಕಮಾನುಗಳು ಇನ್ನಷ್ಟು ಮುದ ನೀಡುವುದರಲ್ಲಿ ಡೌಟಿಲ್ಲ.
ಇಷ್ಟೊಂದು ಆಕರ್ಷಕ ಗುಂಬಜ್ ಇರೋದು ಕಲಬುರಗಿಯಲ್ಲಿ. ಅಂದ ಹಾಗೆ ಈ ಗುಂಬಜ್ ಗಳು ಸಪ್ತ ಸಮಾಧಿಗಳನ್ನು ಹೊಂದಿರುವುದು ಇನ್ನೊಂದು ವಿಶೇಷ. ನಗರದ ದರ್ಗಾ ರಸ್ತೆಯಲ್ಲಿರುವ ಇದಕ್ಕೆ ಸಾಥ್ ಗುಂಬಜ್ ಅಥವಾ ಹಫ್ತ್ ಗುಂಬಜ್ ಗಳೆಂದೇ ಹೆಸರಿದೆ.
ಗುಂಬಜ್ ಒಳಗಡೆ ಇವೆ ಸಮಾಧಿ
ಸಪ್ತ ಗುಂಬಜ್ ಒಳಗಡೆ ಇರೋ ಸಮಾಧಿಗಳು ಬಹುಮನಿ ಸುಲ್ತಾನರ ರಾಜ ಮಹಾರಾಜರದ್ದು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಬಹಮನಿ ಸುಲ್ತಾನರಾದ ಮುಜಾಹಿದ್ ಷಾ, ದೌದ್ ಷಾ, ಶಮ್ಸ್ ಅಲ್-ದಿನ್ ಮತ್ತು ಘಿಯಾತ್ ಅಲ್-ದಿನ ಹಾಗೂ ಬಹಮನಿ ಸುಲ್ತಾನರ ಪ್ರಬಲ ದೊರೆಯಾಗಿದ್ದ ಫಿರೋಜ್ ಷಾ ಸಮಾಧಿಗಳು ಇಲ್ಲಿವೆ. ಇಲ್ಲಿರುವ ಜೋಡು ಗುಮ್ಮಟಗಳು ದೌದ್ ಶಾ ಹಾಗೂ ಪೀರೋಜ್ ಷಾನದ್ದಾಗಿದೆ.
ಪ್ರವಾಸಿಗರ ಕೈ ಬೀಸಿ ಸೆಳೆಯುವ ಗುಂಬಜ್
ಜನರಿಗಂತೂ ಈ ಸಾಥ್ ಗುಂಬಜ್ ಅನ್ನೋದು ಪ್ರಮುಖ ಪ್ರವಾಸಿ ತಾಣವಾಗಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಹೀಗೆ ಎಲ್ಲಾ ವಯೋಮಾನದವರೂ ಇಲ್ಲಿಗೆ ಪ್ರವಾಸಿಗರಾಗಿ ಆಗಮಿಸುತ್ತಾರೆ. ಇಲ್ಲಿನ ಸ್ವಚ್ಛಂದ ಪರಿಸರ, ಉದ್ಯಾನವನದಲ್ಲಿ ಕಾಲ ಕಳೆಯುತ್ತಾ ಖುಷಿ ಪಡುತ್ತಾರೆ. ಗುಂಬಜ್ ಮುಂದೆ ನಿಂತು ಫೋಟೋಗಳಿಗೆ ಫೋಸ್ ಕೊಡುತ್ತಾರೆ. ಇಲ್ಲಿನ ಪರಿಸರವೂ ಪ್ರವಾಸಿಗರಿಗೆ ಇಷ್ಟವಾಗುವಂತಹ ಸ್ನೇಹಮಯಿ ವಾತಾವರಣನ್ನು ಹೊಂದಿದೆ.
ವಿಶೇಷವೆಂದ್ರೆ ಬಹಮನಿ ಸುಲ್ತಾನರು ತಮ್ಮ ಸಮಾಧಿಯನ್ನು ತಾವು ಬದುಕಿರುವಾಗಲೇ ತಮಗಿಷ್ಟ ಬಂದ ರೀತಿಯಲ್ಲಿ ಆಕರ್ಷಕವಾಗಿ ನಿರ್ಮಿಸಿಕೊಳ್ಳುತ್ತಿದ್ದರು. ಹೀಗಾಗಿ ಒಂದೊಂದು ಗುಮ್ಮಟಗಳು ವಿಭಿನ್ನತೆಯಿಂದ ಕೂಡಿವೆ. ಈ ಗುಮ್ಮಟಗಳಲ್ಲಿ ಐದು ಜನ ಸುಲ್ತಾನರ ಸಮಾಧಿಗಳು ಮಾತ್ರ ಇದ್ದು, ಇನ್ನುಳಿದ ಇಬ್ಬರು ಸುಲ್ತಾನರು ಬೇರೆ ಸ್ಥಳಗಳಲ್ಲಿ ಸಾವನ್ನಪ್ಪಿದರಿಂದ ಕೇವಲ ಗುಮ್ಮಟಗಳಿದ್ದು ಸಮಾಧಿಗಳಿಲ್ಲ ಎಂಬುವುದು ಇತಿಹಾಸದಲ್ಲಿ ದಾಖಲಾಗಿದೆ. ಬಹಮನಿ ಸುಲ್ತಾನರ ಈ ಸಮಾಧಿಗಳು ಇಸ್ಲಾಮಿಕ್ ವಾಸ್ತುಶಿಲ್ಪಗಳಿಂದ ಕೂಡಿವೆ. ಈ ಸಮಾಧಿಗಳು ಎರಡು ಕೋಣೆಗಳ್ನು ಹೊಂದಿವೆ.
ಫಿರೋಜ್ ಸಮಾಧಿ ವಿಭಿನ್ನ
ಒಂದು ಕೋಣೆ ರಾಜನಿಗೆ ಮತ್ತು ಇನ್ನೊಂದು ಅವನ ಕುಟುಂಬಸ್ಥರಿಗಾಗಿ ನಿರ್ಮಿಸಲಾಗಿದೆ. ಬಹಮನಿ ಸುಲ್ತಾನರ ಪ್ರಮುಖ ಆಡಳಿತಗಾರ ಹಾಗೂ ಪ್ರಬಲ ಅರಸನಾಗಿದ್ದ ಫಿರೋಜ್ ಷಾ ಸಮಾಧಿಯು ಈ ಆರು ಜನ ರಾಜರ ಗೋರಿಗಳಿಗಿಂತಲೂ ಎತ್ತರವಿದ್ದು, ವಿಶೇಷ ವಾಸ್ತುಶಿಲ್ಪಗಳಿಂದ ಕೂಡಿದೆ. ಹೀಗೆ ಸಾಥ್ ಗುಂಬಜ್ ವಿಶಿಷ್ಟ ವಾಸ್ತುಶಿಲ್ಪ, ಸುಂದರ ಇತಿಹಾಸ ಕಥನಗಳನ್ನ ಹೊಂದಿವೆ. ಒಟ್ಟಿನಲ್ಲಿ ತೊಗರಿ ನಾಡಿಗೆ ಬರೋ ಪ್ರತಿಯೊಬ್ಬ ಪ್ರವಾಸಿಗನೂ ಈ ಸಾಥ್ ಗುಂಬಜ್ ಮಿಸ್ ಮಾಡ್ದೇ ಭೇಟಿ ನೀಡ್ಲೇಬೇಕಾದ ಜಾಗವಿದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ