ಕಲಬುರಗಿ: ಕೋಣೆಯೊಳಗೊಂದು ಕೋಣೆ, ಗೋಡೆ ಕೊರೆದು ಮಾಡಿರೋ ಸುರಂಗ, ನೆಲ ಮಾಳಿಗೆ, ಬರೋಬ್ಬರಿ 108 ಬಾಗಿಲು ಹೊಂದಿರುವ 48 ಕೋಣೆಗಳ (Kalaburagi 48 Rooms Home) ಈ ಮನೆ ಇರೋದು ಕಲಬುರಗಿ ಜಿಲ್ಲೆಯ (Kalaburagi News) ಆಳಂದ ತಾಲೂಕಿನ (Alund) ಭೂಸನೂರು ಗ್ರಾಮದಲ್ಲಿ.
ಭೂಸನೂರು ಗ್ರಾಮದ ನಿವಾಸಿಯಾಗಿರುವ ಧರ್ಮರಾಜ್ ಸಾಹು ಎಂಬುವವರಿಗೆ ಸೇರಿದ ಈ ಮನೆ ಸುಮಾರು 200 ವರ್ಷಗಳ ಹಳೆಯ ಮನೆಯೆಂದು ಊಹಿಸಲಾಗಿದೆ. ಇಂದಿಗೂ ಸುಭದ್ರವಾಗಿರುವ ಈ ಮನೆಯಲ್ಲಿ ಐದನೇ ತಲೆಮಾರಿನ ಕುಟುಂಬ ಇದನ್ನ ನಿರ್ವಹಿಸುತ್ತಾ ಬಂದಿದೆ. ಧರ್ಮರಾಜ್ ಸಾಹು ಅವರ ಮುತ್ತಜ್ಜನವರ ಅಜ್ಜ ಬಸಪ್ಪ ಸಾಹು ಎಂಬುವರು ಈ ಮನೆಯನ್ನು ನಿರ್ಮಿಸಿದ್ರಂತೆ. ಮೂರಂತಸ್ತಿನ ಈ ಮನೆ ಹಲವು ಸಿನೆಮಾ ಶೂಟಿಂಗ್ ಗೂ ಬಳಕೆಯಾಗಿರುವುದು ವಿಶೇಷ.
ಯಾವ ಕೋಣೆಗೇ ಹೋದ್ರೂ ಮರಳಿ ಆ ಕೋಣೆಗೇ ಸಂಪರ್ಕ!
ಈ ಮನೆಯನ್ನ 2 ಎಕರೆ ಪ್ರದೇಶದಲ್ಲಿ ಕರಿ ಕಲ್ಲಿನಿಂದ ಕಟ್ಟಲಾಗಿದ್ದು, ಕಟ್ಟಿಗೆಯ ವಾಸ್ತುಶಿಲ್ಪಗಳನ್ನು ಬಳಸಲಾಗಿದೆ. 48 ಕೋಣೆಗಳು ಹಾಗೂ 108 ಬಾಗಿಲುಗಳಿದ್ದು, ಪ್ರತಿ ಕೋಣೆಯೊಳಗೊಂದು ಸಣ್ಣ ಬಾಗಿಲುಗಳನ್ನು ಅಳವಡಿಸಲಾಗಿದೆ. ಯಾವ ಕೋಣೆಯಲ್ಲಿ ಹೋದ್ರೂ ಮರಳಿ ಆ ಕೋಣೆಗೆ ಬರುವಂತೆ ಪ್ಲಾನ್ ಮಾಡಿ ಮನೆಯನ್ನ ಕಟ್ಟಲಾಗಿದೆ.
ಮನೆಯೊಳಗೆ ಸುರಂಗ, ದೇವಸ್ಥಾನಕ್ಕೆ ಸಂಪರ್ಕ
ವಿಶೇಷ ಅಂದ್ರೆ, ಮನೆಯ ನೆಲಮಹಡಿಯ ಸುರಂಗ ಮಾರ್ಗ ಮನೆಯಿಂದ 500 ಮೀಟರ್ ದೂರದಲ್ಲಿರುವ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹಿಂದಿನ ಕಾಲದಲ್ಲಿ ಧರ್ಮರಾಜ್ ಸಾಹು ಅವರ ಪೂರ್ವಜರು ಆ ಸುರಂಗ ಮಾರ್ಗದಿಂದಲೇ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುತ್ತಿದ್ದರಂತೆ.
ಇದನ್ನೂ ಓದಿ: Kalaburagi: ಕಲಬುರಗಿಯ ಸಿದ್ಧಲಿಂಗೇಶ್ವರ ಸಂಸ್ಥಾನ ಮಠಕ್ಕೆ ಹೊಸ ಪೀಠಾಧಿಪತಿ!
ಈ ಪುರಾತನ ಮನೆಯು ಕಿಂಚಿತ್ತೂ ಹಾನಿಯಾಗದಂತೆ ಸಾಹು ಕುಟುಂಬ ಸಂರಕ್ಷಣೆ ಮಾಡಿಕೊಂಡು ಬಂದಿದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗದ ನಿಮಿತ್ತ ಈ ಮನೆಯ ಯಜಮಾನರ ಕುಟುಂಬ ಕಲಬುರಗಿ ನಗರದಲ್ಲಿ ವಾಸವಾಗಿದೆ. ಈ ಮನೆಯನ್ನ ನೋಡಿಕೊಳ್ಳಲೆಂದೇ ಕೆಲಸಗಾರನ್ನು ನೇಮಿಸಲಾಗಿದೆ. ಈ ಮನೆಯಲ್ಲಿ ಇಂದಿಗೂ ಪ್ರತಿದಿನ ಪೂಜೆ ನಡೆಯುತ್ತದೆ. ಪ್ರತಿ ವಾರಕ್ಕೊಮ್ಮೆ ಧರ್ಮರಾಜ್ ಸಾಹು ಅವರು ಮನೆಗೆ ಭೇಟಿ ನೀಡಿ ಮನೆಯ ಆಗು ಹೋಗುಗಳನ್ನ ವಿಚಾರಿಸುತ್ತಾರೆ.
ಇದನ್ನೂ ಓದಿ: Kalaburagi: ವೀರಭದ್ರೇಶ್ವರ ಜಾತ್ರೆ ಸಂಭ್ರಮದಲ್ಲಿ ರೋಮಾಂಚಕ ಕೆಂಡ ಸೇವೆ
ಒಟ್ಟಿನಲ್ಲಿ ಟೆಕ್ನಾಲಜಿಗಳ ಜಮಾನಾ ಅಲ್ಲದ ಟೈಮಲ್ಲೂ ಇಂತಹ ಮನೆಯನ್ನ ವಿಶಿಷ್ಟವಾಗಿ ಕಟ್ಟಿದು ಒಂದು ವಿಶೇಷವಾದ್ರೆ, ಅದು ಇದುವರೆಗೂ ಗಟ್ಟಿಮುಟ್ಟಾಗಿದ್ದು ನೋಡುಗರ ಚಿತ್ತಾಕರ್ಷಣೆ ಪಡೆಯುತ್ತಿರುವುದು ಇನ್ನೊಂದು ವಿಶೇಷವೇ ಸರಿ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ