ಐತಿಹಾಸಿಕ ನಿರ್ಧಾರ: ಇನ್ಮುಂದೆ NDAಯಲ್ಲಿ ಮಹಿಳೆಯರಿಗೂ ಅವಕಾಶ; ಸುಪ್ರೀಂಗೆ ತಿಳಿಸಿದ ಕೇಂದ್ರ

ಸರ್ಕಾರದ ಈ ನಿಲುವಿನಿಂದ ಸಂತಸವಾಯಿತು. ಸುಧಾರಣೆಗಳು ಒಂದೇ ದಿನದಲ್ಲಿ ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ಶೀಘ್ರದಲ್ಲಿ ಈ ಪ್ರಕ್ರಿಯೆ ಮತ್ತು ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿ

ಮಹಿಳಾ ಸೇನಾಧಿಕಾರಿಗಳು

ಮಹಿಳಾ ಸೇನಾಧಿಕಾರಿಗಳು

 • Share this:
  ನವದೆಹಲಿ (ಸೆ. 8): ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA – National Defence Academy)) ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗಕ್ಕಾಗಿ ಇನ್ಮುಂದೆ ಮಹಿಳೆಯರ ದಾಖಲಾತಿಯನ್ನು ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಅಲ್ಲದೇ ಈ ಕುರಿತು ಮಾರ್ಗಸೂಚಿ ರೂಪಿಸಲು ಕೆಲ ಸಮಯ ಬೇಕಾಗುತ್ತದೆ ಎಂದು ತಿಳಿಸಿದೆ. ಇನ್ನು ಕಳೆದ ಕೆಲವು ದಿನಗಳ ಹಿಂದಷ್ಟೇ ಈ ಕುರಿತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದ ಸುಪ್ರೀಂ ಕೋರ್ಟ್, ಎನ್​ಡಿಎ ಪರೀಕ್ಷೆ ಕೇವಲ ಪುರಷರಿಗೆ ಮಾತ್ರ ಸೀಮಿತವಾಗಿರುವುದು ಲಿಂಗ ತಾರತಮ್ಯದ ಧೋರಣೆ. ಇನ್ಮುಂದೆ ಮಹಿಳೆಯರಿಗೂ ಎನ್​ಡಿಎ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ತಿಳಿಸಿತು.

  ಎನ್​ಡಿಎ ಮತ್ತು ನೌಕಾ ಅಕಾಡೆಮಿಗೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬ ಅರ್ಜಿ ವಿಚಾರಣೆ ಈ ಕುರಿತು ಸುಪ್ರೀಂ ಕೋರಟ್​ಗೆ ಮಾಹಿತಿ ನೀಡಿದ ಸಾಲಿಸಿಟರ್​​ ಜನರಲ್​ ಐಶ್ವರ್ಯ ಭಾಟಿ, ಎನ್‌ಡಿಎಗೆ ಮಹಿಳೆಯರನ್ನು ಸೇರಿಸುವ ನಿರ್ಧಾರವನ್ನು ಸಶಸ್ತ್ರ ಪಡೆಗಳು ತಾವೇ ತೆಗೆದುಕೊಂಡಿವೆ ಎಂದು ತಿಳಿಸಿದರು.

  ಈ ಕುರಿತು ಸಂತಸ ವ್ಯಕ್ತಪಡಿಸಿದ ಪೀಠ, ದೇಶದಲ್ಲಿ ರಕ್ಷಣಾ ಪಡೆಗಳಿಗೆ ಹೆಚ್ಚಿನ ಗೌರವವಿದೆ. ಆದರೆ, ಲಿಂಗ ಸಮಾನತೆ ವಿಚಾರದಲ್ಲಿ ಅವರು ಇನ್ನೂ ಸಾಕಷ್ಟು ಸುಧಾರಣೆಗಳನ್ನು ತರಬೇಕಿದೆ. ಸರ್ಕಾರದ ಈ ನಿಲುವಿನಿಂದ ಸಂತಸವಾಯಿತು. ಸುಧಾರಣೆಗಳು ಒಂದೇ ದಿನದಲ್ಲಿ ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ಸರ್ಕಾರ ಶೀಘ್ರದಲ್ಲಿ ಈ ಪ್ರಕ್ರಿಯೆ ಮತ್ತು ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದೆ.

  ಈ ಸಂಬಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​ ಎನ್​ಡಿಎ ಪರೀಕ್ಷೆಯಲ್ಲಿ ಮಹಿಳೆಯರಿಗೆ ಭಾಗಿಯಾಗಲು ಅವಕಾಶ ನೀಡದಿರುವುದು ಸಂವಿಧಾನದ ಕಲಂ 14, 15, 16 ಮತ್ತು 19 ರ ಅಡಿಯಲ್ಲಿ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್​ ತಿಳಿಸಿತ್ತು.

  ಇದನ್ನು ಓದಿ: ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿ ಕಣಕ್ಕೆ ಇಳಿಸಿ ಬಿಜೆಪಿಗೆ ಸಹಾಯ ಮಾಡಲ್ಲ ಎಂದ ಕಾಂಗ್ರೆಸ್

  ಕಳೆದ ಹದಿನೈದು ದಿನಗಳ ಹಿಂದೆ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಮಹಿಳೆಯರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿ ಮಧ್ಯತಂರ ಆದೇಶ ಹೊರಡಿಸಿತ್ತು. ಕುಶ್ ಕಾಲ್ರಾ ಎಂಬುವವರು ಎನ್​ಡಿಎ ಪರೀಕ್ಷೆಯನ್ನ ಮಹಿಳೆಯರೂ ಬರೆಯುವಂತೆ ಅವಕಾಶ ಕೋರಿ ಸುಪ್ರೀಂ ಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ, ಸೇನೆಯಲ್ಲಿರುವ ಲಿಂಗ ತಾರತಮ್ಯ ಧೋರಣೆಯನ್ನ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

  ಎನ್​ಡಿಎ ಪರೀಕ್ಷೆಯನ್ನ ಪುರುಷರಿಗಷ್ಟೇ ಸೀಮಿತಗೊಳಿಸುವುದು ಸೇನಾ ನೀತಿಯ ನಿರ್ಧಾರ ಮಾತ್ರ ಎಂದು ಸೇನೆ ಪರ ವಕೀಲರು ಕೋರ್ಟ್ ವಿಚಾರಣೆ ವೇಳೆ ವಾದಿಸಿದರು. ಸೇನೆಯ ನೀತಿ ವಿಚಾರವಾಗಿರುವುದರಿಂದ ಕೋರ್ಟ್ ಇದರಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕೂಡ ಸಮರ್ಥನೆ ಮಾಡಿಕೊಂಡಿತ್ತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಬರೆದು ಆಯ್ಕೆಯಾಗುವ ಪುರುಷರಿಗೆ ಅವರ ವೃತ್ತಿಯಲ್ಲಿ ಏಳ್ಗೆಯಾಗಲು ಮಹಿಳೆಯರಿಗಿಂತ ವಿಶೇಷ ಅವಕಾಶವೇನೂ ಇರುವುದಿಲ್ಲ. ಎನ್​ಡಿಎ ಪರೀಕ್ಷೆ ಬರೆಯಲಿಲ್ಲವೆಂದಾಕ್ಷಣ ಮಹಿಳೆಯರು ಸೇನಾ ವೃತ್ತಿಯಲ್ಲಿ ಮೇಲೇರಲು ಕಷ್ಟಸಾಧ್ಯ ಎಂಬಂತಿಲ್ಲ. ಹೀಗಾಗಿ, ಎನ್​ ಡಿ ಎ- ಡಿಫೆನ್ಸ್ ಅಕಾಡೆಮಿ ಪರೀಕ್ಷೆಯ ವಿಚಾರವನ್ನು ಸೇನಾ ನೀತಿಗೆ ಬಿಟ್ಟುಬಿಡಬೇಕೆಂದು ಕೇಂದ್ರ ವಾದ ಮುಂದಿಟ್ಟಿತು. ಆದರೆ, ಈ ನೀತಿಯು ಲಿಂಗ ತಾರತಮ್ಯತೆಯ ಆಧಾರಿತವಾಗಿದೆ ಎಂದು ಕೋರ್ಟ್ ಛೀಮಾರಿ ಹಾಕಿದರು.

  ಸದ್ಯ ಮಹಿಳೆಯರು ಸೇನೆಗೆ ಸೇರಬೇಕೆಂದರೆ ಎಸ್ ಎಸ್ ಸಿ (ಶಾರ್ಟ್ ಸರ್ವಿಸ್ ಕಮಿಷನ್) ಪರೀಕ್ಷೆಯೊಂದೇ ದಾರಿಯಾಗಿದೆ. ಇದರಲ್ಲೂ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಸ್ಥಾನ ಸಿಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಿ ಎಸ್ ಎಸ್ ಸಿಯ ಮಹಿಳಾ ಅಧಿಕಾರಿಗಳಿಗೆ ಸೇನೆಯಲ್ಲಿ ಪರ್ಮನೆಂಟ್ ಕಮಿಷನ್ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
  Published by:Seema R
  First published: