ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ವೇದಿಕೆ ಸಿದ್ದಪಡಿಸಿಕೊಂಡು ಕುಳಿತಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ನಾಯಕಿ ಮಾಯಾವತಿ ಅವರು ಪಂಜಾಬ್ನ ಅಕಾಲಿ ದಳದೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡಿದ್ದು, ಇದನ್ನು “ಐತಿಹಾಸಿಕ ಮೈತ್ರಿ” ಎಂದು ಕರೆದಿದ್ದಾರೆ. ಅಕಾಲಿದಳ ಈ ಮೊದಲು ಬಿಜೆಪಿಯ ಮಿತ್ರ ಪಕ್ಷವಾಗಿತ್ತು.
ಆದರೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ)ದ ಮುಂದಿರುವ ನಿಜವಾದ ಸವಾಲು ಎಂದರೆ 2022ರಲ್ಲಿ ಬರುವ ಉತ್ತರ ಪ್ರದೇಶ ಚುನಾವಣೆ. ಏಕೆಂದರೆ ಅಲ್ಲಿ ಬಿಜೆಪಿಯನ್ನು ಹೇಗೆ ಎದುರಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ ಎನ್ನುವುದು. ಆದರೆ ಈಗ ಪಂಜಾಬ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಇಲ್ಲೇನಾದರೂ ಕಮಾಲ್ ಮಾಡುತ್ತಾರಾ ಕಾದು ನೋಡಬೇಕಿದೆ.
2019ರ ಲೋಕಸಭಾ ಚುನಾವಣೆ ವೇಳೆ ಸಮಾಜವಾದಿ ಪಕ್ಷದ ಜೊತೆ ಮಾಡಿಕೊಂಡಿದ್ದ ಮೈತ್ರಿ ಸಾಕಷ್ಟು ಫಲ ಕೊಟ್ಟಿತ್ತು. ನೆಲಕಚ್ಚಿದ್ದ ಬಿಎಸ್ಪಿ ಮತ್ತೆ 10 ಸ್ಥಾನಗಳನ್ನು ಗೆಲ್ಲುವ ಮೂಲಕ ನಾನಿನ್ನೂ ಇದ್ದೇನೆ ಎನ್ನುವ ಸಂದೇಶ ನೀಡಿತ್ತು. ಈ ಮೈತ್ರಿಕೂಟವು 80 ಸ್ಥಾನಗಳಲ್ಲಿ 15 ಸೀಟುಗಳನ್ನು ಗೆದ್ದುಕೊಂಡಿತ್ತು. ಇವರು ಪಡೆದ ಓಟಿನ ಸರಾಸರಿ ಶೇ 40. ಈ ಮೈತ್ರಿಯನ್ನು ಅನೇಕರು ವಿಫಲ ಎಂದು ಕರೆದರೂ ಬಿಜೆಪಿ ವಿರುದ್ದ ಮೈತ್ರಿ ಮಾಡಿಕೊಂಡು ಇಷ್ಟು ಪ್ರಮಾಣದ ಓಟುಗಳನ್ನು ಕಿತ್ತಿದ್ದು ಅತ್ಯುತ್ತಮ ಸಾಧನೆ ಎಂದೇ ಅನೇಕರು ಹೇಳುತ್ತಿದ್ದಾರೆ.
2022ರ ಉತ್ತರ ಪ್ರದೇಶ ಚುನಾವಣೆ ಅನೇಕ ಸಂಗತಿಗಳಿಗೆ ತಾರ್ಕಿಕವಾದ ಅಂತ್ಯ/ ಆರಂಭ ಏನು ಬೇಕಾದರೂ ನೀಡಬಹುದು. ಈ ವಿಧಾನಸಭಾ ಚುನಾವಣೆ ಅನೇಕ ಅಂಶಗಳಿಂದ ಮುಖ್ಯವಾದ ಚುನಾವಣೆಯಾಗಿದೆ. 2019ರ ಚುನಾವಣೆ ವೇಳೆ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಬಹುದೇ ಎನ್ನುವ ಗುಮಾನಿ ಹರಡಿತ್ತು. ಆ ವೇಳೆ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇಬ್ಬರೂ ಒಕ್ಕೊರಲಿನಿಂದ ಹೇಳುತ್ತಲೇ ಬರುತ್ತಿದ್ದರು. ಈ ನಮ್ಮ ಮೈತ್ರಿ ಈ ದೇಶಕ್ಕೆ ಹೊಸಾ ಪ್ರಧಾನಿಯನ್ನು ನೀಡಲಿದೆ ಎಂದು.
ಮಾಜಿ ಸಿಎಂಗಳಾದ ಅಖಿಲೇಶ್ ಮತ್ತು ಮಾಯಾವತಿ ಅವರ ಮೈತ್ರಿ 2022ರ ವಿಧಾನಸಭಾ ಚುನಾವಣೆಯಲ್ಲಿ ಹೊಸ ಮುಖ್ಯಮಂತ್ರಿಯನ್ನು ನೀಡುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನು ಹೇಗೆ ನಂಬುವುದು?. ಮಾಯವತಿಯವರು ತಮ್ಮ ಸಿಟ್ಟು ಸೆಡವುಗಳಿಗೆ ಮನೆಮಾತಾದವರು. ಲೋಕಸಭಾ ಚುನಾವಣೆಯ ನಂತರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಮೈತ್ರಿಯನ್ನು ಕಿತ್ತುಹಾಕಿದರು, ಆದರೆ ಇದಂತೂ ಸ್ಪಷ್ಟ ಸಮಾಜವಾದಿ ಪಕ್ಷವು ತನ್ನ ಮತಗಳನ್ನು ಬಿಎಸ್ಪಿ ಗೆಲ್ಲಲು ವರ್ಗಾಯಿಸಿ 10 ಸ್ಥಾನಗಳಲ್ಲಿ ಪುಟಿದೇಳುವಂತೆ ಮಾಡಿತು.
ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಬಿಎಸ್ಪಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಅಲ್ಲದೇ ತನ್ನ ಪಕ್ಷದ ಘಟಾನುಘಟಿಗಳಾದ ನಾಸಿಮುದ್ದೀನ್ ಸಿದ್ದಿಕಿ, ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರ ದೊಡ್ಡ ಮುಖಗಳನ್ನು ಕಳೆದುಕೊಂಡಿದೆ. ಸಂಸದ ರಿತೇಶ್ ಪಾಂಡೆ ಅವರನ್ನು ನಾಯಕನನ್ನಾಗಿಸಲು ಹೋಗಿ ಮೊದಲ ಸಂಸದ ಡ್ಯಾನಿಶ್ ಅಲಿಯನ್ನು ಲೋಕಸಭಾ ನಾಯಕ ಸ್ಥಾನದಿಂದ ತೆಗೆದುಹಾಕಲಾಯಿತು. ಈಗ ಮತ್ತೆ ಮರಳಿ ನೇಮಕ ಮಾಡುವ ಮೊದಲು ಅವರನ್ನು ಮರಳಿ ಕರೆತರಲು ಬಿಎಸ್ಪಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಭೀಮ್ ರಾಜ್ಭರ್ಗೆ ದಾರಿ ಮಾಡಿಕೊಡುವ ಸಲುವಾಗಿ ರಾಜ್ಯ ಘಟಕದ ಅಧ್ಯಕ್ಷ ಮುಕ್ವಾದ್ ಅಲಿಯನ್ನು ಇದೇ ರೀತಿ ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: ಬೂಟು ಒದ್ದೆಯಾಗುವುದನ್ನು ತಪ್ಪಿಸಲು ತಮಿಳುನಾಡು ಸಚಿವರನ್ನು ಹೊತ್ತು ಸಾಗಿದ ಬೆಸ್ತ; ವಿಡಿಯೋ ವೈರಲ್
ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗಾಗಿಸುವ ಶಕ್ತಿ ಬಿಎಸ್ಪಿ ಮತ್ತು ಎಸ್ ಮೈತ್ರಿಗೆ ಇದೆ. ಆದರೆ ಇದು ಸುಲಭ ಸಾಧ್ಯವೇ? ಜಾತಿ ರಾಜಕಾರಣದ ಸಮೀಕ್ಷೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಾಗ ಮಾತ್ರ 2022ರ ಚುನಾವಣೆಯಲ್ಲಿ ಏನಾದರೂ ಕಮಾಲ್ ಮಾಡಲು ಸಾಧ್ಯ. ಮಾಯಾವತಿ ಇಲ್ಲಿ ಗೇಮ್ ಚೇಂಜರ್ ಆಗಲಿದ್ದಾರೆಯೇ? ಸಿಎಂ ಕುರ್ಚಿಯ ರುಚಿ ಅನುಭವಿಸಿರುವ ಇಬ್ಬರು ತಮ್ಮನ್ನು ಹೊರತು ಪಡಿಸಿ ಬೇರೆಯವರನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತಾರೆಯೇ? ಇಬ್ಬರ ಸಂಬಂಧ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುತ್ತದೆಯೇ? 2022ರ ತನಕ ಕಾದು ನೋಡಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ