ಬೆಂಗಳೂರು: ‘ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು’ ಎಂಬ ರಾಷ್ಟ್ರಕವಿ ಕುವೆಂಪು (Kuvempu) ಅವರ ಈ ಕವಿತೆ ಎಷ್ಟು ಅರ್ಥಗರ್ಭಿತವಾಗಿದೆಯೋ, ಕನ್ನಡ (Kannada Language) ಎಂದರೆ ಕನ್ನಡಿಗರ ಮೈಮನ ಪುಳಕಗೊಳ್ಳುವುದು ಅಷ್ಟೇ ನಿಜ. ಅದಕ್ಕೆ ಕಾರಣ, ಕನ್ನಡ ಅನ್ನೋದು ಕನ್ನಡಿಗರ ಮಾತೃಭಾಷೆ (Mother Tongue) ಅನ್ನೋದು ಎಷ್ಟು ನಿಜವೋ, ಕನ್ನಡದ ಮೇಲಿನ ಪ್ರೀತಿ ಕೂಡ ಕಾರಣ. ಇದೀಗ ಕನ್ನಡದ ಮೇಲೆ ಅಭಿಮಾನಪಡುವಂತಹ ಘಟನೆ ನಡೆದಿದೆ.
ಕಲೆಗಾರ ಬಾದಲ್ ನಂಜುಂಡ ಸ್ವಾಮಿ (Badala Nanjundaswamy) ಅವರು ಕನ್ನಡ ಕಲಿಯುವ ಮಕ್ಕಳ ಅನುಕೂಲಕ್ಕಾಗಿ ಕನ್ನಡ ವರ್ಣಮಾಲೆಗಳ ಪ್ರತೀ ಅಕ್ಷರದ ಮೇಲೆ ಅದಕ್ಕೆ ಹೊಂದಾಣಿಕಾ ಆಗುವ ಚಿತ್ರಗಳನ್ನು ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಉದಾಹರಣೆಗೆ ಅ ಅಕ್ಷರದ ಅಳಿಲು ಚಿತ್ರ ಬಿಡಿಸಿದರೆ ಆ ಅಕ್ಷರದ ಮೇಲೆ ಆನೆ, ಇ ಮೇಲೆ ಇಲಿ, ಈ ಮೇಲೆ ಈರುಳ್ಳಿ ಹೀಗೆ ಅ ದಿಂದ ಳ ತನಕ ಪ್ರತಿಯೊಂದು ಅಕ್ಷರಕ್ಕೂ ಚಿತ್ರ ಬಿಡಿಸಿ ಪೋಸ್ಟ್ ಮಾಡಿದ್ದರು. ಇದು ನಿಜಕ್ಕೂ ಕನ್ನಡಾಸಕ್ತರಿಗೆ ಉಪಯೋಗ ಬರುವಂತಹ ಚಿತ್ರ ಆಗಿರೋದರಿಂದ ಅನೇಕರು ಕಲೆಗಾರ ಬಾದಲ್ ನಂಜುಂಡ ಸ್ವಾಮಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Budget 2023: ಆರ್ಥಿಕ ಅಸ್ಥಿರತೆಯ ಮಧ್ಯೆ ಜಗತ್ತು ಭಾರತದ ಬಜೆಟ್‌ನತ್ತ ನೋಡುತ್ತಿದೆ: ನರೇಂದ್ರ ಮೋದಿ
ಪ್ರಧಾನಿ ಮೋದಿಯಿಂದ ಶ್ಲಾಘನೆ
ಅಂದ ಹಾಗೆ ಟ್ವಿಟ್ಟರ್‌ನಲ್ಲಿ ಈ ಚಿತ್ರ ಸಾಕಷ್ಟು ವೈರಲ್ ಆದ ಬೆನ್ನಲ್ಲೇ ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಗಮನಕ್ಕೂ ಬಂದಿತ್ತು. ಹೀಗಾಗಿ ಈ ಚಿತ್ರವನ್ನು ರೀಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾಷೆ ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಲು ಒಂದು ಸೃಜನಶೀಲ ಮಾರ್ಗ, ಸುಂದರವಾದ ಕನ್ನಡ ಭಾಷೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕನ್ನಡ ಭಾಷೆಯ ಕುರಿತು ಪೋಸ್ಟ್ ಅನ್ನು ರೀಟ್ವೀಟ್ ಮಾಡುತ್ತಿದ್ದಂತೆ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಲಿಯನ್‌ಗಟ್ಟಲೆ ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Top-5 News: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ತೆಲಂಗಾಣದಲ್ಲಿ ಬೊಮ್ಮಾಯಿಗೆ ಅಪಮಾನ! ಇಂದಿನ ಟಾಪ್ ನ್ಯೂಸ್ ಇಲ್ಲಿವೆ ಓದಿ
ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಮೆಚ್ಚುಗೆ
ಕನ್ನಡ ವರ್ಣಮಾಲೆಗಳ ಪ್ರತಿ ಅಕ್ಷರಕ್ಕೆ ಹೊಂದಿಕೆ ಆಗುವ ಚಿತ್ರಗಳನ್ನು ಜೋಡಿಸಿ ರಚಿಸಿದ ವಿಶೇಷ ಕಲೆಯನ್ನು ಕಿರಣ್ ಕುಮಾರ್ ಎಸ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕನ್ನಡ ಕಲಿಯುವ ಮಕ್ಕಳ ಅನುಕೂಲಕ್ಕಾಗಿ ಕಲೆಗಾರ ಬಾದಲ್ ನಂಡಜುಂಡಸ್ವಾಮಿ ಈ ಚಿತ್ರವನ್ನು ರಚಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ರೀಟ್ವೀಟ್ ಮಾಡುತ್ತಿದ್ದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೊಂದಷ್ಟು ಜನ ಕರ್ನಾಟಕದಲ್ಲಿ ಚುನಾವಣೆ ಬರ್ತಿರೋದ್ರಿಂದ ಕನ್ನಡದ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಂತಸ ವ್ಯಕ್ತಪಡಿಸಿದ ನಂಜುಂಡ ಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ಅವರು ತಾವು ರಚಿಸಿದ ಕನ್ನಡ ವರ್ಣಮಾಲೆಯ ಚಿತ್ರವನ್ನು ಹಂಚಿಕೊಂಡಿರುವ ಬಗ್ಗೆ ಕಲೆಗಾರ ಬಾದಲ್ ನಂಜುಂಡ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಕ್ಕಳಿಗಾಗಿ ಕ್ಯಾಲಿಗ್ರಫಿ ಮೂಲಕ ಕನ್ನಡ ವರ್ಣಮಾಲೆಯನ್ನು ಸೃಜನಾತ್ಮಕವಾಗಿ ಕಲಿಸುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಶಿಕ್ಷಕಿ ಪುಷ್ಪಮ್ಮ ಎಂಬವರ ಮನವಿ ಮೇರೆಗೆ ಈ ಕಲೆ ರಚಿಸಿದ್ದೆ. ಇದೀಗ ನನ್ನ ಕಲೆಯನ್ನು ಪ್ರಧಾನಿಯವರು ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದೆ. ನನ್ನ ಕಲೆಯನ್ನು ಗುರುತಿಸಿರುವುದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ