Job Fair- ಬೆಂಗಳೂರಿನಲ್ಲಿ ಜಾಬ್ ಮೇಳ ಶುರು; 2000 ಉದ್ಯೋಗಗಳಿಗೆ ಅವಕಾಶ
Recruitment drive by 42 companies- ಬೆಂಗಳೂರಿನಲ್ಲಿ ಇಂದು ಚಾಲನೆಗೊಂಡಿರುವ ಉದ್ಯೋಗ ಮೇಳದಲ್ಲಿ (Job Fair) 42 ಕಂಪನಿಗಳು ಪಾಲ್ಗೊಂಡಿದ್ದು 2 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಒದಗಿಸಿವೆ.
ಬೆಂಗಳೂರು: ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಸರಕಾರವೇ ಕೌಶಲ್ಯ ತರಬೇತಿ (Skill Training) ನೀಡಿ ಉದ್ಯೋಗವೂ ಸಿಗುವ ಹಾಗೆ ಮಾಡುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. C N Ashwata Narayana) ಹೇಳಿದರು. ಮಲ್ಲೇಶ್ವದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಉದ್ಯೋಗ ಮೇಳಕ್ಕೆ (Bengaluru Job Fair) ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ವಿಪುಲ ಉದ್ಯೋಗಾವಕಾಶಗಳು (Job Opportunities) ಲಭ್ಯವಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಉದ್ಯೋಗಾಕಾಂಕ್ಷಿಗಳು ಬಂದರೂ ಸೂಕ್ತ ತರಬೇತಿ, ಭಾಷಾ ಜ್ಞಾನ, ಕೌಶಲ್ಯ ಕಲಿಸಿ ಕೆಲಸ ಕೊಡಿಸಲಾಗುವುದು. ಕುಶಲತೆಯನ್ನು ರೂಢಿಸಿಕೊಳ್ಳದ ಹೊರತು ಉದ್ಯೋಗದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದರು.
ವಿದೇಶಗಳಲ್ಲಿ ಕೆಲಸ ಮಾಡುತ್ತೇವೆ ಎಂದರೂ ಅದಕ್ಕೂ ನಮ್ಮಲ್ಲಿ ಅವಕಾಶವಿದೆ. ಸರಕಾರ ಅಂತರರಾಷ್ಟ್ರೀಯ ವಲಸೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅದರ ಮೂಲಕ ರಾಜ್ಯದ ಕುಶಲ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಅನೇಕರು ಉದ್ಯೋಗ ಪಡೆದುಕೊಂಡು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಸಚಿವ ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಬೃಹತ್ ಜಾಬ್ ಮೇಳ:
ಈ ಉದ್ಯೋಗ ಮೇಳದಲ್ಲಿ 2000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ ಇವೆ. ಆದರೆ ನೋಂದಣಿ ಮಾಡಿಕೊಂಡಿರುವುದು 1300 ಜನ. 30 ಕಂಪನಿಗಳು ನೇರವಾಗಿ, ಅಂದರೆ ಭೌತಿಕವಾಗಿ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನೂ 12 ಕಂಪನಿಗಳು ಆನ್ ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿವೆ. ಒಟ್ಟು 42 ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಿವೆ. ಇವೆಲ್ಲ ದೇಶದ ಪ್ರತಿಷ್ಠಿತ ಕಂಪನಿಗಳಾಗಿದ್ದು, ನಮ್ಮ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ಇಂಥ ಕಂಪನಿಗಳಲ್ಲಿ ಅವಕಾಶ ಸಿಕ್ಕಿದ ಮೇಲೆ ಉತ್ತಮವಾಗಿ ಕೆಲಸ ಮಾಡಿ ಹಾಗೂ ನೀವು ಬೆಳೆಯುವುದರ ಜತೆಗೆ ಕಂಪನಿಯನ್ನೂ ಬೆಳೆಸಿ ಆ ಮೂಲಕ ಆರ್ಥಿಕ ವೃದ್ಧಿಗೆ ಕಾಣಿಕೆ ನೀಡಿ ಎಂದು ಸಚಿವರು ಉದ್ಯೋಗಾಂಕ್ಷಿಗಳಿಗೆ ಕರೆ ನೀಡಿದರು.
ಮಳೆಯಿಂದ ನಗರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಬೆಂಗಳೂರು ಕಾಂಕ್ರಿಟ್ ಜಂಗಲ್ ಆಗಿ ರೂಪಾಂತರಗೊಂಡಿದ್ದು, ಮಳೆ ನೀರು ಸುನಾಯಾಸವಾಗಿ ಹರಿದು ಹೋಗುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ನಗರದ ಎಲ್ಲ ವಲಯಗಳ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ. ಎಲ್ಲ ಭಾಗಗಳಲ್ಲೂ ನೀರು ತಗ್ಗು ಪ್ರದೇಶಗಳಿಗೆ ನುಗ್ಗದೇ ಕೆರೆಗಳತ್ತ ಹರಿದು ಹೋಗಬೇಕು, ರಸ್ತೆಗಳ ಆಜುಬಾಜಿನಲ್ಲೇ ಇಂಗುಗುಂಡಿಗಳನ್ನು ಮಾಡಬೇಕು, ಪ್ರತಿ ಮನೆಯಲ್ಲೂ ಈಗಾಗಲೇ ಮಳೆಕುಯ್ಲು ವ್ಯವಸ್ಥೆ ಇದೆ. ಅದು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ರಾಜಕಾಲುವೆಗಳಲ್ಲಿ ಎಲ್ಲೂ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಸ ಸಂಗ್ರಹಣೆಯಾಗಿ ಹರಿಯುವ ನೀರಿಗೆ ಅಡ್ಡಿ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
ಮಲ್ಲೇಶ್ವರದಲ್ಲಿ 2000 ಇಂಗು ಗುಂಡಿ:
ಮಲ್ಲೇಶ್ವರದಲ್ಲೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಇದಕ್ಕೆ ನಾವು ಪರಿಹಾರ ಕಂಡುಕೊಂಡಿದ್ದೇವೆ, ಕ್ಷೇತ್ರದ ಉದ್ದಗಲಕ್ಕೂ 2000ಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ ಮಾಡಿದ್ದೇವೆ. ರಸ್ತೆಗಳಲ್ಲಿ ಹರಿದು ಪೋಲಾಗುತ್ತಿದ್ದ ಮಳೆ ನೀರು ಭೂಮಿಗೆ ಸೇರುತ್ತಿದೆ. ಕ್ಷೇತ್ರದ ಅತಿದೊಡ್ಡ ಕೆರೆಯಾದ ಸ್ಯಾಂಕಿ ಟ್ಯಾಂಕ್ಗೆ ಏಳು ಕಡೆಗಳಿಂದ ನೀರು ಹರಿದು ಬರುವ ವ್ಯವಸ್ಥೆ ಮಾಡಲಾಗಿದೆ. ಈಗ ಮಲ್ಲೇಶ್ವರದ ಯಾವುದೇ ಭಾಗದಲ್ಲೂ ಮಳೆನೀರು ಮನೆಗಳಿಗೆ ನುಗ್ಗುತ್ತಿಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳು ಸದಾ ಎಚ್ಚರಿಕೆ ವಹಿಸುತ್ತಿದ್ದಾರೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು, ವಿವಿಧ ಕಂಪನಿಗಳ ಅಧಿಕಾರಿಗಳು ಹಾಜರಿದ್ದರು.