ಝೆರೋಧಾ ಸಿಇಒ ಹಾಗೂ ಸಹ ಸಂಸ್ಥಾಪಕ ನಿತಿನ್ ಕಾಮತ್ ಅವರು ಆರ್ಥಿಕ ಸಾಕ್ಷರತೆ ಕುರಿತಾದ ಸಂಸದ ತೇಜಸ್ವಿ ಸೂರ್ಯ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಅವರು, ಹಣಕಾಸಿನ ಪ್ರಯಾಣವನ್ನು ಬೇಗನೆ ಪ್ರಾರಂಭಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ಶಾಲೆಗಳು ವಿದ್ಯಾರ್ಥಿಗಳಿಗೆ ಹಣದ ಮೂಲಭೂತ ಅಂಶಗಳನ್ನು ಸಂಪೂರ್ಣವಾಗಿ ಕಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ (Tweet) ಮಾಡಿರುವ ನಿತಿನ್ ಕಾಮತ್ (Nithin Kamath) , ಅನೇಕ ಯುವ ಭಾರತೀಯರು ಹಣಕಾಸು ನಿರ್ವಹಣೆ ಕೌಶಲ್ಯಗಳನ್ನು ಹೊಂದಿಲ್ಲ ಎಂಬುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದ ಸಂಸದ ತೇಜಸ್ವಿ ಸೂರ್ಯ, ಔಪಚಾರಿಕ ಶಾಲಾ ಶಿಕ್ಷಣದಲ್ಲಿ ನಮಗೆ ಆರ್ಥಿಕ ಸಾಕ್ಷರತೆ ಇಲ್ಲ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಆರ್ಥಿಕ ಕೌಶಲ್ಯಗಳನ್ನು ಕಲಿಸಿದರೆ, ಅವರು ತಮ್ಮ ಜೀವನವನ್ನು (Life) ಉತ್ತಮವಾಗಿ ಯೋಜಿಸಲು ಸಾಧ್ಯವಾಗುತ್ತದೆ.
ಅಲ್ಲದೇ ಮೋಸದ ಯೋಜನೆಗಳಿಂದ ದೂರವಿರಲು ಸಹಾಯಕವಾಗುತ್ತದೆ ಎಂದು ಹೇಳಿದ್ದರು. ಅಲ್ಲದೇ ಹಣಕಾಸಿನ ನಿರ್ವಹಣೆಯನ್ನು ಶಾಲೆ ಮತ್ತು ಕಾಲೇಜು ಪಠ್ಯಕ್ರಮದ ಭಾಗವನ್ನಾಗಿ ಮಾಡಲು ಶಿಕ್ಷಣ ಸಚಿವಾಲಯವನ್ನು ಅವರು ಒತ್ತಾಯಿಸಿದ್ದರು.
ಕಾಮತ್ ತಮ್ಮ ಟ್ವೀಟ್ ಮೂಲಕ ತೇಜಸ್ವೀ ಸೂರ್ಯ ಅವರ ವಾದವನ್ನು ಬೆಂಬಲಿಸಿದ್ದಾರೆ. ಟ್ವೀಟ್ ನಲ್ಲಿ, "ನಾನು ಈಗಲೂ ಶಾಲೆಯಲ್ಲಿ ಕಲಿತ ವೃತ್ತದ ಸೂತ್ರವನ್ನು ನೆನಪಿಸಿಕೊಳ್ಳುತ್ತೇನೆ. ಅಥವಾ CH3OH ಬಗ್ಗೆ ಇನ್ನೂ ನೆನಪಿದೆ. "ಅಂತೆಯೇ, ನಾವು ಶಾಲೆಯಲ್ಲಿ ಹಣಕಾಸಿನ ಮೂಲಭೂತ ಅಂಶಗಳನ್ನು ಕಲಿಸಿದರೆ, ವಿಮೆ, ನಿವೃತ್ತಿ ಹೀಗೆ ಮುಂಚಿತವಾಗಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೇವೆ. ಈ ಪಾಠಗಳು ನಮಗೆ ಜೀವನದುದ್ದಕ್ಕೂ ಸಹಾಯಕವಾಗುತ್ತವೆ." ಎಂದು ಹೇಳಿದ್ದಾರೆ.
ಅನೇಕ ಟ್ವಿಟ್ಟರ್ ಬಳಕೆದಾರರು ನಿತಿನ್ ಕಾಮತ್ ಅವರ ಮಾತನ್ನು ಒಪ್ಪಿಕೊಳ್ಳುತ್ತಾರೆ. ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸಿನ ಜ್ಞಾನವು ಯುವಕರಲ್ಲಿ ಪೊಂಜಿ ಟೋಕನ್ಗಳು ಮತ್ತು ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ತಡೆಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, "ವ್ಯಕ್ತಿಗಳಿಗೆ ವೈಯಕ್ತಿಕ ಹಣಕಾಸಿನ ಬಗ್ಗೆ ಶಿಕ್ಷಣ ನೀಡುವುದು ಮುಖ್ಯವಾಗಿದೆ. ಆದರೆ ಈ ಪರಿಕಲ್ಪನೆಗಳನ್ನು ಔಪಚಾರಿಕವಾಗಿ ಶಾಲೆಗಳಲ್ಲಿ ಕಲಿಸಿದರೆ ಅದು ಇನ್ನೂ ಉತ್ತಮವಾಗಿರುತ್ತದೆ" ಎಂದಿದ್ದಾರೆ.
ಮತ್ತೊಬ್ಬರು, ಶಿಕ್ಷಣ ಸಚಿವಾಲಯವು 10ನೇ ತರಗತಿಯ ನಂತರ ವೈಯಕ್ತಿಕ ಹಣಕಾಸು ಪಠ್ಯಕ್ರಮವನ್ನು ಸೇರಿಸುವುದನ್ನು ಪರಿಗಣಿಸಬೇಕು. ಡಿಜಿಟಲ್ ಜಗತ್ತಿನಲ್ಲಿ ಇದು ಅನಿವಾರ್ಯವಾಗಿದೆ ಎಂದಿದ್ದಾರೆ.
ಇದಕ್ಕೂ ಮೊದಲು ನಿತಿನ್ ಕಾಮತ್ ಅವರು ಮೊದಲ ಬಾರಿಗೆ ಹೂಡಿಕೆ ಮಾಡುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ತಿಂಗಳಿಗೆ 40,000 ಸಂಬಳ-ಕೇಂದ್ರೀಯ ತನಿಖಾ ದಳದಲ್ಲಿ ಕೆಲಸ ಖಾಲಿ ಇದೆ
ಸ್ಥಿರ ಠೇವಣಿಗಳಂತಹ ಸುರಕ್ಷಿತ ಆಯ್ಕೆಗಳೊಂದಿಗೆ ಪ್ರಾರಂಭಿಸಲು ಅವರು ಸಲಹೆ ನೀಡಿದ್ದರು. ನೀವು ಚಿಕ್ಕವರಾಗಿದ್ದರೆ ಮತ್ತು ಷೇರು ಮಾರುಕಟ್ಟೆಗಳು, ಮ್ಯೂಚುವಲ್ ಫಂಡ್ಗಳು ಇತ್ಯಾದಿಗಳ ಬಗ್ಗೆ ತಿಳಿದಿಲ್ಲದಿದ್ದರೆ, ಬ್ಯಾಂಕ್ ಠೇವಣಿಯೊಂದಿಗೆ ಪ್ರಾರಂಭಿಸುವ ಆಲೋಚನೆ ಮಾಡಿ ಎಂದು ಕಾಮತ್ ಹೇಳಿದ್ದರು.
ಉಳಿತಾಯವು ಬೇಗನೆ ಪ್ರಾರಂಭವಾಗಬೇಕು ಎಂದು ಕಾಮತ್ ಅಭಿಪ್ರಾಯ ಪಡುತ್ತಾರೆ. ಆದ್ರೆ ಬೆಳೆಯುವುದಕ್ಕೋಸ್ಕರ ಹಾಗೂ ಕಲಿಯುವುದಕ್ಕೋಸ್ಕರ ಖರ್ಚು ಮಾಡಬಹುದು.
ಯಾರಾದರೂ ಸಂಗೀತವನ್ನು ಇಷ್ಟಪಟ್ಟರೆ, ಅವರು ಉತ್ತಮ ಶಿಕ್ಷಕರಿಗೆ ಖರ್ಚು ಮಾಡಬಹುದು. ಸಂಗೀತವನ್ನು ಕಲಿಯಬಹುದು. ಹಾಗೆಯೇ "ಯಾರಾದರೂ ಫಿಟ್ನೆಸ್ ಪಡೆಯಲು ಬಯಸಿದರೆ, ಉತ್ತಮ ತರಬೇತುದಾರರನ್ನು ಹುಡುಕಿ ಖರ್ಚು ಮಾಡಬಹುದು ಎಂಬುದಾಗಿ ಕಾಮತ್ ಅವರು ಹೇಳಿದ್ದರು.
ಒಟ್ಟಾರೆ, ಮಕ್ಕಳಿಗೆ ಹಣಕಾಸಿನ ಬಗ್ಗೆ ಅರಿವು ಮೂಡಿಸುವುದು, ಹಣವನ್ನು ಉಳಿಸುವ ಹಾಗೂ ಬೆಳೆಸುವ ಬಗ್ಗೆ ತಿಳಿಸಿಕೊಡುವುದು ಮುಖ್ಯ. ಹಣಕಾಸಿನ ನಿರ್ವಹಣೆಯ ಬಗ್ಗೆ ಚಿಕ್ಕಂದಿನಿಂದಲೇ ತಿಳಿಸಿಕೊಟ್ಟರೆ ಭವಿಷ್ಯದಲ್ಲಿ ಅದು ಬಹಳಷ್ಟು ಅನುಕೂಲವಾಗುವುದರಲ್ಲಿ ಸಂಶಯವೇ ಇಲ್ಲ.
ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರ ಅಭಿಪ್ರಾಯ ಸರಿಯಾಗಿಯೇ ಇದೆ ನಿತಿನ್ ಕಾಮತ್ ಸೇರಿದಂತೆ ಸಾಕಷ್ಟು ಜನರು ಒಪ್ಪಿಕೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ