ಕಳೆದ ಕೆಲ ವರ್ಷಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ (Higher Education) ಪಡೆಯುವ ಸಲುವಾಗಿ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಎಂದರೆ ಸಹಜವಾಗಿಯೇ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಹಣದ ಕೊರತೆಯಿಂದಾಗಿಯೇ ಹಲವು ವಿದ್ಯಾರ್ಥಿಗಳು (Students) ವಿದೇಶದಲ್ಲಿ ವ್ಯಾಸಾಂಗ ಮಾಡುವ ತಮ್ಮ ಆಸೆಯನ್ನು ಕೈಬಿಡುತ್ತಾರೆ. ಆದರೆ ಇನ್ನು ಮುಂದೆ ಭಾರತೀಯ ವಿದ್ಯಾರ್ಥಿಗಳು (Indian Students) ಚಿಂತಿಸಬೇಕಿಲ್ಲ. ಏಕೆಂದರೆ ವಿದೇಶದ ವಿಶ್ವವಿದ್ಯಾಲಯಗಳು (Foreign University) ಭಾರತದಲ್ಲಿಯೇ ಆರಂಭವಾಗಲಿದೆ.
ಹೌದು, ಈ ಉಪಕ್ರಮ ಹಲವು ವರ್ಷಗಳಿಂದಲೂ ಹೆಚ್ಚು ಚರ್ಚೆಯಲ್ಲಿರುವ ವಿಷಯ. ಇದನ್ನು ಈ ಹಿಂದೆಯೂ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗಿತ್ತಾದರೂ ಅದು ಯಶಸ್ಸನ್ನು ಕಂಡಿರಲಿಲ್ಲ. ಆದರೆ ಯುಜಿಸಿ ಮತ್ತು ಕೇಂದ್ರ ಈ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡು, ಜಾರಿಗೆ ತರಲು ಸಹ ನಿರ್ಧರಿಸಿದೆ ಮತ್ತು ಅದೇ ನಿಟ್ಟಿನಲ್ಲಿ ಕೆಲಸಗಳು ಕೂಡ ಪ್ರಾರಂಭವಾಗಿವೆ.
ಅನಾವರಣಗೊಂಡ ಕರಡು ಮಾನದಂಡ
ಯೋಜನೆಯ ಭಾಗವಾಗಿ ಜನವರಿ 5 ರಂದು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) "ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ" ಅನುಕೂಲವಾಗುವಂತೆ ಕರಡು ಮಾನದಂಡಗಳನ್ನು ಅನಾವರಣಗೊಳಿಸಿದೆ.
ಇನ್ನು ಭಾರತದಲ್ಲಿ ವಿದೇಶಿ ಕ್ಯಾಂಪಸ್ ಆರಂಭದ ಯೋಜನೆ ಬಗ್ಗೆ ಮಾತನಾಡಿದ ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್, “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), 2020, ವಿಶ್ವದ ಉನ್ನತ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಕಲ್ಪಿಸಲಾಗಿದೆ. ಇದಕ್ಕಾಗಿ ಪ್ರವೇಶವನ್ನು ಸುಗಮಗೊಳಿಸುವ ಶಾಸಕಾಂಗ ಚೌಕಟ್ಟನ್ನು ಜಾರಿಗೆ ತರಲಾಗುವುದು ಮತ್ತು ಅಂತಹ ವಿಶ್ವವಿದ್ಯಾನಿಲಯಗಳಿಗೆ ಭಾರತದ ಇತರ ಸ್ವಾಯತ್ತ ಸಂಸ್ಥೆಗಳಿಗೆ ಸಮಾನವಾಗಿ ನಿಯಂತ್ರಕ, ಆಡಳಿತ ಮತ್ತು ವಿಷಯ ಮಾನದಂಡಗಳ ಬಗ್ಗೆ ವಿಶೇಷ ವಿತರಣೆಯನ್ನು ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.
ಪ್ರವೇಶ ಪ್ರಕ್ರಿಯೆ ಹೇಗೆ?
ಈ ಕ್ಯಾಂಪಸ್‌ಗಳು ತಮ್ಮದೇ ಆದ ಪ್ರವೇಶ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತವೆ. ದೇಶೀಯ, ವಿದೇಶಿ ವಿದ್ಯಾರ್ಥಿಗಳನ್ನು ಆಹ್ವಾನಿಸುವ ಮಾನದಂಡಗಳನ್ನು ಹೊಂದಿರುತ್ತವೆ.
ಶುಲ್ಕ ನಿಯಮ ಏನು?
ಶುಲ್ಕದ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತಟಸ್ಥ ನಿಲುವು ಹೊಂದಿದೆ. ಭಾರತದಲ್ಲಿ ವಿದೇಶಿ ವಿವಿಗಳು ಭಾರತೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರವಾಗಿವೆ. ಆದರೆ ಶುಲ್ಕಗಳು "ಸಮಂಜಸ ಮತ್ತು ಪಾರದರ್ಶಕ" ಆಗಿರಬೇಕು ಎಂದು ತಿಳಿಸಲಾಗಿದೆ.
ಸಿಬ್ಬಂದಿ ನೇಮಕ ಹೇಗೆ?
ವಿದೇಶಿ ವಿವಿಗಳು ಭಾರತದಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ತಮ್ಮದೇ ಆದ ನೀತಿ ನಿಯಮಗಳ ಮೂಲಕ ಭಾರತದ ಅಥವಾ ವಿದೇಶಿ ಮಾನವ ಸಂಪನ್ಮೂಲವನ್ನು ಹೊಂದಬಹುದಾಗಿದೆ. ಇನ್ನೂ ಈ ಕ್ಯಾಂಪಸ್‌ಗಳು ಆನ್‌ಲೈನ್ ಅಥವಾ ದೂರಶಿಕ್ಷಣ ಕೋರ್ಸ್‌ಗಳನ್ನು ನೀಡಲು ಅನುಮತಿಸಿಲ್ಲ.
ಅರ್ಹತೆಗಳಿವು
ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಹತೆಗಳು ತಮ್ಮ ದೇಶದ ಹೆಸರಾಂತ ವಿದೇಶಿ ಸಂಸ್ಥೆಗಳು ನೀಡುವ ಅರ್ಹತೆಗಳಿಗೆ ಸಮನಾಗಿರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ.
ಅನುಮೋದನೆ
ಈ ಕ್ಯಾಂಪಸ್‌ಗಳಿಗೆ ಆರಂಭಿಕ ಅನುಮೋದನೆಯು 10 ವರ್ಷಗಳವರೆಗೆ ಇರುತ್ತದೆ ಮತ್ತು ಒಂಬತ್ತನೇ ವರ್ಷದಲ್ಲಿ ನವೀಕರಿಸಲಾಗುತ್ತದೆ. ಇದಲ್ಲದೇ, ಈ ವಿಶ್ವವಿದ್ಯಾನಿಲಯಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಾಯವನ್ನುಂಟುಮಾಡುವ ಕೋರ್ಸ್‌ಗಳನ್ನು ನೀಡುವಂತಿಲ್ಲ.
ಭಾರತದ ವಿದ್ಯಾರ್ಥಿಗಳಿಗೆ ಇದು ಹೇಗೆ ಲಾಭದಾಯಕ?
ಭಾರತ ಸರ್ಕಾರದ ಈ ಯೋಜನೆಯು ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ನೆರವಾಗಲಿದೆ. ಮೊದಲಿಗೆ ವಿದೇಶಕ್ಕೆ ಹೋಗಿ ಅಲ್ಲಿ ವಿದ್ಯಾಭ್ಯಾಸ ಮಾಡಲು ಹಣದ ಕೊರತೆ ಇರುವವರಿಗೆ ಇದು ಮುಖ್ಯವಾಗಿ ಲಾಭದಾಯಕ.
ಕುಟುಂಬಕ್ಕೆ, ಶಿಕ್ಷಣಕ್ಕೆ ವೆಚ್ಚ ಮಾಡುವ ಹಣದ ಹೊರೆಯೂ ಕಡಿಮೆಯಾಗುತ್ತದೆ. ಕಡಿಮೆ ಖರ್ಚಿನೊಂದಿಗೆ ವಿದೇಶ ವಿದ್ಯಾಭ್ಯಾಸ ದೊರೆಯಲಿದೆ. ಅಂದರೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ತಾಂತ್ರಿಕವಾಗಿ ಸುಧಾರಿತ ಕಲಿಕಾ ಸಾಧನಗಳನ್ನು ಕಡಿಮೆ ವೆಚ್ಚದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಈ ವಿದೇಶಿ ಕ್ಯಾಂಪಸ್‌ಗಳಲ್ಲಿ ಪದವಿಯನ್ನು ಗಳಿಸುವುದು, ವಿನಿಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಹೆಸರಾಂತ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಉತ್ತಮ ಕೌಶಲ್ಯ ಮತ್ತು ಜ್ಞಾನವನ್ನು ಪಡೆಯುವುದು ಯುವ ಭಾರತೀಯರಿಗೆ ಭವಿಷ್ಯದಲ್ಲಿ ಹಲವು ಅವಕಾಶಗಳನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: Education and Career: ಈ ಮೂರು ವಲಯದಲ್ಲಿ ನೀವು ಶಿಕ್ಷಣ ಪೂರೈಸಿದರೆ ಉತ್ತಮ ಉದ್ಯೋಗಕ್ಕೆ ಆತಂಕ ಪಡಬೇಕಾಗಿಲ್ಲ!
ಇಷ್ಟೇ ಅಲ್ಲದೇ ಯುಜಿಸಿ ತಂದಿರುವ ಕರಡು ನಿಯಮಗಳು ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಕ್ರಮ ತೆಗೆದುಕೊಂಡಿದೆ. ಪ್ರಾಧಿಕಾರವು ಯಾವುದೇ ಸಮಯದಲ್ಲಿ ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಹಾಗೆಯೇ ಆಂಟಿ ರ್‍ಯಾಗಿಂಗ್ ಹಾಗು ಇತರೆ ಅಪರಾಧಗಳಿಗೆ ಸಂಭಂಧಿಸಿದಂತೆ ಎಲ್ಲ ನಿಯಮಗಳನ್ನು ಜಾರಿ ಮಾಡಲಿವೆ.
ಗುಜರಾತ್‌ನಲ್ಲಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು
ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕರುಡು ಬಿಡುಗಡೆಯಾದ ಕೇವಲ ಒಂದು ತಿಂಗಳಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎರಡು ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಬಯಸುತ್ತಿರುವ ಬಗ್ಗೆ ಹೇಳಿದ್ದರು. ನಾವು ಪ್ರವೇಶ ಸಾಧ್ಯತೆ, ಕೈಗೆಟುಕುವಿಕೆ ಮತ್ತು ಯುವಜನರಿಗೆ ಶಿಕ್ಷಣದ ಗುಣಮಟ್ಟದೊಂದಿಗೆ ಆಸ್ಟ್ರೇಲಿಯಾದೊಂದಿಗೆ ಪಾಲುದಾರರಾಗಲು ಬಯಸುತ್ತೇವೆ ಎಂದಿದ್ದರು.
ಇದನ್ನೂ ಓದಿ: Karnataka: ಮೆಡಿಕಲ್ ಕೋರ್ಸ್ ಮಾಡ್ಬೇಕು ಅಂದುಕೊಂಡಿರುವವರಿಗೆ ಗುಡ್ ನ್ಯೂಸ್!
ಆಸ್ಟ್ರೇಲಿಯಾದ ಡೀಕಿನ್ ಮತ್ತು ವೊಲೊಂಗೊಂಗ್ ಎರಡು ವಿಶ್ವವಿದ್ಯಾನಿಲಯಗಳು, ಭಾರತದ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್ (ಗಿಫ್ಟ್) ಸಿಟಿಯಲ್ಲಿ ತಮ್ಮ ಕಡಲಾಚೆಯ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮುಂದಾಗಿವೆ.
ಡೀಕಿನ್ ವಿಶ್ವವಿದ್ಯಾಲಯ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ 266 ನೇ ಸ್ಥಾನದಲ್ಲಿದೆ ಮತ್ತು ವಿಶ್ವದ ಅಗ್ರ 50 ಯುವ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಅಲ್ಲದೇ, ಪ್ರಪಂಚದಲ್ಲಿ ತನ್ನ ಮೊದಲ ಕಡಲಾಚೆಯ ಕ್ಯಾಂಪಸ್ ಅನ್ನು ತೆರೆಯಲು ಡೀಕಿನ್ ಭಾರತವನ್ನು ಆರಿಸಿಕೊಂಡಿರುವುದು ಮತ್ತೊಂದು ಹೆಮ್ಮೆಯ ಸಂಗತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ