ಎನ್ಇಪಿ (National Education Policy) ಜಾರಿಗೊಳಿಸಿ ಈಗಾಗ್ಲೇ ಎರಡು ವಸಂತಗಳು ಕಳೆದಿವೆ. ಕೇಂದ್ರ ಸರ್ಕಾರವು (Central Government) ದಶಕಗಳ ನಂತರ 2020 ರಲ್ಲಿ 'ನೂತನ ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು ಜಾರಿಗೆ ತಂದಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತದೆ. ಇದು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ರಾಷ್ಟ್ರವನ್ನು ಸುಸ್ಥಿರ ಮತ್ತು ಶೈಕ್ಷಣಿಕವಾಗಿ ಮುನ್ನೆಡೆಸುವ ಗುರಿ ಹೊಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಂತಸ ವ್ಯಕ್ತಪಡಿಸಿದ ಯುಜಿಸಿ ಮುಖ್ಯಸ್ಥ
ಹೀಗೆ ಹಲವಾರು ಮೂಲಭೂತ ತತ್ವಗಳೊಂದಿಗೆ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬಗ್ಗೆ ಯುಜಿಸಿ (UGC) ಮುಖ್ಯಸ್ಥ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್, ವಿಶ್ವವಿದ್ಯಾನಿಲಯಗಳು ಅದನ್ನು ಅನುಷ್ಠಾನಗೊಳಿಸುವಲ್ಲಿ ಆ ವೇಗವನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ.
"ವಿದ್ಯಾರ್ಥಿ ಕೇಂದ್ರಿತ ಮತ್ತು ಸಮಗ್ರ ಶಿಕ್ಷಣವನ್ನು ಬಯಸುತ್ತೇವೆ"
ಬೆಂಗಳೂರು ವಿಶ್ವವಿದ್ಯಾನಿಲಯದ 57ನೇ ಘಟಿಕೋತ್ಸವದಲ್ಲಿ ಮಾತನಾಡಿದ ಕುಮಾರ್, “ಕರ್ನಾಟಕ ರಾಜ್ಯ ಎನ್ಇಪಿ ಅನುಷ್ಠಾನದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಇದು ಯುವ ಪೀಳಿಗೆಯ ಆಕಾಂಕ್ಷೆಗಳನ್ನು ಪೂರೈಸುವ ಏಕೈಕ ಮಾರ್ಗವಾಗಿದೆ. ಸ್ವಯಂ-ಶೋಧನೆಯು ರಾಷ್ಟ್ರೀಯ ಶಿಕ್ಷಣ ನೀತಿಯ ತಿರುಳು" ಎಂದಿದ್ದಾರೆ.
ಶಿಕ್ಷಣದಲ್ಲಿ ಎಲ್ಲಾ ಜ್ಞಾನಗಳ ಏಕತೆಯನ್ನು ಮತ್ತು ಸಮಗ್ರತೆಯನ್ನು ತರಲು ಬಹುಶಿಸ್ತೀಯ ಕಲಿಕೆಗೆ ಪ್ರೋತ್ಸಾಹ ನೀಡುವ ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಬಹಳ ಸಮಯದವರೆಗೆ ಕಠಿಣ ಮತ್ತು ಶಿಕ್ಷಕರ ಕೇಂದ್ರಿತವಾಗಿತ್ತು. ಆದರೆ ಈಗ ವಿದ್ಯಾಮಾನ ಬದಲಾಗಿದೆ. ನಾವು ಕೂಡ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತವಾಗಬೇಕೆಂದು ಬಯಸುತ್ತೇವೆ ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: CBSE Announcement: ಇನ್ಮುಂದೆ 10+2 ಶಿಕ್ಷಣ ಬದಲು 5+3+3+4 ಕಲಿಕಾ ಮಾದರಿ: ಪೂರ್ತಿ ಮಾಹಿತಿ ಇಲ್ಲಿದೆ
ಶಿಕ್ಷಣದ ನಾಲ್ಕನೇ ಒಂದು ಭಾಗವು ಶಿಕ್ಷಕರಿಂದ ಬರಬೇಕು ಮತ್ತು ಉಳಿದವು ವಿಮರ್ಶಾತ್ಮಕ ಚಿಂತನೆ, ಸಹವರ್ತಿ ಕಲಿಕೆ ಮತ್ತು ಅನುಭವದಿಂದ ಬರಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಕುಮಾರು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ ನಿಮ್ಮನ್ನು ರೂಪಿಸುವುದರ ಜೊತೆ ಸ್ವಯಂ ಅನ್ವೇಷಣೆಗೆ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಇನ್ನೂ ಘಟಿಕೋತ್ಸವದಲ್ಲಿ ಸುಮಾರು 37,000 ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಯಿತು ಮತ್ತು 167 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು. ಗವರ್ನರ್ ಮತ್ತು ವಿಶ್ವವಿದ್ಯಾನಿಲಯದ ಕುಲಪತಿ ತಾವರಚಂದ್ ಗೆಹ್ಲೋಟ್ ಅವರು ಭಾಗಿಯಾಗಿದ್ದರಾದರೂ, ಸಮಾರಂಭದ ಮಧ್ಯೆ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ನಂತರ ಸಮಾರಂಭದಿಂದ ಮಧ್ಯದಲ್ಲಿಯೇ ನಿರ್ಗಮಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಉದ್ದೇಶ
2019 ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕರಡು ಹೊಸ ಶಿಕ್ಷಣ ನೀತಿ 2019 ಅನ್ನು ಬಿಡುಗಡೆ ಮಾಡಿತು, ಅದರ ನಂತರ ಹಲವಾರು ಸಾರ್ವಜನಿಕ ಸಮಾಲೋಚನೆಗಳು ನಡೆದವು.
ಕರಡು ಎನ್ಇಪಿ ( NEP- National Education Policy) ಯೋಜನೆಯು ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಹೆಚ್ಚು ಸಮಗ್ರ ಅನುಭವ, ಚರ್ಚಾ-ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಯೋಜನೆಯನ್ನು ಒಳಗೊಂಡಿದೆ.
ಮಕ್ಕಳ ಅರಿವಿನ ಬೆಳವಣಿಗೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ರಚನೆಯನ್ನು 10 + 2 ವ್ಯವಸ್ಥೆಯಿಂದ 5 + 3 + 3 + 4 ವ್ಯವಸ್ಥೆಯ ವಿನ್ಯಾಸಕ್ಕೆ ಪರಿಷ್ಕರಿಸುವ ಬಗ್ಗೆಯೂ ಇದು ಒತ್ತಿ ಹೇಳುತ್ತದೆ.
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿತರುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ