ಹೆಚ್ಚಿನ NEET ಪರೀಕ್ಷಾರ್ಥಿಗಳು ವೈದ್ಯಕೀಯ ಪರೀಕ್ಷೆಯನ್ನು (Medical Exam) ಮುಂದೂಡುವಂತೆ ಸಾಮಾಜಿಕ ತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಇನ್ನೂ NEET 2023 ಎಕ್ಸಾಮ್ ಸಿಟಿ ಸ್ಲಿಪ್ ಮತ್ತು ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡದ ಕಾರಣ ವೈದ್ಯಕೀಯ ಪರೀಕ್ಷಾರ್ಥಿಗಳಲ್ಲಿ ಹೆಚ್ಚಿನವರು ನೀಟ್ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಯಾವುದೇ ಅಧಿಕೃತ ಸೂಚನೆ ಹೊರಬಿದ್ದಿಲ್ಲ ಮತ್ತು ಪರೀಕ್ಷೆಯನ್ನು (Exam) ನಿಗದಿತ ರೀತಿಯಲ್ಲಿ ನಡೆಸಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.
ನೀಟ್ ಪರೀಕ್ಷೆ ಮುಂದೂಡುವಂತೆ ಆಗ್ರಹಿಸುತ್ತಿರುವ ಪರೀಕ್ಷಾರ್ಥಿಗಳು
ಸಾಮಾಜಿಕ ತಾಣಗಳಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಹಾಗೆಯೇ ಪರೀಕ್ಷಾ ಕೇಂದ್ರಗಳನ್ನು ಯಾವಾಗ ತಿಳಿಸಲಾಗುತ್ತದೆ ಎಂಬಂತಹ ಮೆಸೇಜ್‌ಗಳು ತುಂಬಿ ತುಳುಕುತ್ತಿದ್ದು ಒಟ್ಟಾರೆ ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ನೀಟ್ ಯುಜಿ ಪರೀಕ್ಷೆಗಳ ಕೇಂದ್ರ ನಗರದ ಮಾಹಿತಿಯನ್ನು ಯಾವಾಗ ನೀಡಲಾಗುತ್ತದೆ ಎಂಬುದಾಗಿ ಕೆಲವೊಂದಿಷ್ಟು ವಿದ್ಯಾರ್ಥಿಗಳು ಸಂಬಂಧಿತ ಇಲಾಖೆಗೆ ಟ್ಯಾಗ್ ಮಾಡಿ ಕೇಳಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಹಾಗೂ ವಸತಿ ಸೌಕರ್ಯಗಳನ್ನು ನಿಯೋಜಿಸುವ ತರಾತುರಿಯಲ್ಲಿದ್ದಾರೆ.
ಮಂಡಳಿ ಇನ್ನೂ ಅಡ್ಮಿಟ್ ಕಾರ್ಡ್‌ಗಳನ್ನು ನೀಡದೇ ಇರುವುದರಿಂದ ವಿದ್ಯಾರ್ಥಿಗಳು ತಮಗೆ ಪ್ರಯಾಣ ಹಾಗೂ ವಸತಿ ಸೌಕರ್ಯಗಳನ್ನು ಏರ್ಪಡಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Academic Calendar | ಹೊಸ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ- ವಿದ್ಯಾರ್ಥಿಗಳಿಗೆ ಸಿಗುವ ರಜೆಗಳೆಷ್ಟು? ಇಲ್ಲಿದೆ ಮಾಹಿತಿ
ಸಾಮಾಜಿಕ ತಾಣಗಳಲ್ಲಿ ಹ್ಯಾಶ್ ಟ್ಯಾಗ್ ಹವಾ
ಇನ್ನು ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಮಂಡಳಿಗೆ ಖಡಕ್ ಆಗಿರುವ ಸೂಚನೆಗಳನ್ನು ನೀಡಿದ್ದು ಒಂದಾ ಪರೀಕ್ಷಾ ಕೇಂದ್ರವನ್ನು ತಿಳಿಸಿ ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿ ಇಲ್ಲವೇ ಪರೀಕ್ಷಾ ದಿನಾಂಕವನ್ನು ಮುಂದೂಡಿ ಎಂದು ತಿಳಿಸುತ್ತಿದ್ದಾರೆ. ಪರೀಕ್ಷಾ ಕಾರ್ಡ್‌ಗಳನ್ನು ಪರೀಕ್ಷೆಗೆ ನಾಲ್ಕು ದಿನಗಳಿರುವಾಗ ಮಂಡಳಿ ಬಿಡುಗಡೆ ಮಾಡುತ್ತದೆ.
ಮೇ 7 ಕ್ಕೆ ನೀಟ್ ಪರೀಕ್ಷೆ ನಡೆಯಲಿದೆ
ವಿದ್ಯಾರ್ಥಿಗಳು, #NEETUG23 ಮತ್ತು #neetugpostpone ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು, ತಮ್ಮ ಪೋಸ್ಟ್‌ಗಳನ್ನು ಬಿಡುಗಡೆ ಮಾಡುತ್ತಿದ್ದು ಸಂದೇಹಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಕಾಯುತ್ತಿದ್ದಾರೆ. NEET 2023 ಪರೀಕ್ಷೆಯನ್ನು ಮೇ 7, 2023 ರಂದು ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5:20 ರವರೆಗೆ ಒಂದೇ ಪಾಳಿಯಲ್ಲಿ ನಡೆಸಲಾಗುತ್ತದೆ. NTA NEET ಪ್ರವೇಶ ಪತ್ರದ ಮೂಲಕ ಅಭ್ಯರ್ಥಿಗಳಿಗೆ ವರದಿ ಮಾಡುವ ಸಮಯ ಮತ್ತು ಇತರ ಪರೀಕ್ಷೆಯ ವಿವರಗಳ ಬಗ್ಗೆ ತಿಳಿಸಲಾಗುತ್ತದೆ.
ಪರೀಕ್ಷಾ ಮಂಡಳಿಯನ್ನು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳು
ಈಗಲಾದರೂ ಪರೀಕ್ಷಾ ಅಡ್ಮಿಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿ ಯಾವಾಗ ನೀಡುತ್ತೀರಿ? ಪರೀಕ್ಷೆಯ ದಿನ ಬೆಳಗ್ಗೆ ನೀಡುತ್ತೀರಾ ಎಂದು ವಿದ್ಯಾರ್ಥಿಗಳು ಪರಿಪರಿಯಾಗಿ ಕೇಳುತ್ತಿರುವ ಪೋಸ್ಟ್‌ಗಳು ತಾಣಗಳಲ್ಲಿ ವೈರಲ್ ಆಗಿವೆ.
ನೋಂದಣಿ ವಿಸ್ತರಣೆ ಮಾಡಿದ ನೀಟ್ ಮಂಡಳಿ
NEET UG 2023 ನೋಂದಣಿ ವಿಸ್ತರಣೆಯ ನಂತರ ಏಪ್ರಿಲ್ 15 ರಂದು ಮುಚ್ಚಲಾಗಿದೆ. ನೋಂದಣಿಯನ್ನು ಈ ಹಿಂದೆ ಏಪ್ರಿಲ್ 6 ರಂದು ಕೊನೆಗೊಳಿಸಲಾಗಿತ್ತು ಆದರೆ ಹೆಚ್ಚಿನ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲು ವಿಸ್ತರಿಸಲಾಯಿತು.
NEET UG 2023 ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲವೆಂದು ಹಲವಾರು ವಿದ್ಯಾರ್ಥಿಗಳು ದೂರಿದ್ದು, ಪಾವತಿ ವೈಫಲ್ಯಗಳು, ದಾಖಲೆಗಳನ್ನು ಅಪ್‌ಲೋಡ್ ಮಾಡುವಲ್ಲಿನ ದೋಷಗಳು ಮತ್ತು ಸರ್ವರ್ ಡೌನ್ ಸಮಸ್ಯೆಗಳು ಕಾರಣವೆಂದು ತಿಳಿಸಿ 240 ವಿದ್ಯಾರ್ಥಿಗಳು ನೋಂದಣಿ ವಿಸ್ತರಣೆಗೆ ಒತ್ತಾಯಿಸಿ NTA ಅನ್ನು ಸಂಪರ್ಕಿಸಿದ್ದರು.
ಈ ವರ್ಷ, ಒಟ್ಟು 20.8 ಲಕ್ಷ ಅಭ್ಯರ್ಥಿಗಳು NEET UG 2023 ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ನೋಂದಣಿಗಳ ಪೈಕಿ 11.8 ಲಕ್ಷ ಮಹಿಳಾ ಅಭ್ಯರ್ಥಿಗಳು ಮತ್ತು 9 ಲಕ್ಷ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ