ಭಾರತ ಒಂದು ಸ್ವತಂತ್ರ ರಾಷ್ಟ್ರ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ, ಹದಿನೆಂಟನೇ ವಯಸ್ಸಿನಲ್ಲೇ (Age) ಎಲ್ಲ ರೀತಿಯ ಸ್ವಾತಂತ್ರ್ಯ ಹೊಂದಿರುವುದು ಸಮಾಜದಲ್ಲಿ ಸರಿಯಾದ ಹಾಗೂ ಉತ್ತಮ ಎನ್ನಬಹುದಾದ ಅಂಶವಲ್ಲ ಎಂದರೆ ಹೇಗಾಗಬಹುದು. ಆದರೆ, ಈ ರೀತಿಯ ಹೇಳಿಕೆಯನ್ನು ಯಾವ ವ್ಯಕ್ತಿಯಾಗಲಿ, ರಾಜಕಾರಿಣಿಯಾಗಲಿ ನೀಡಿಲ್ಲ. ಈ ಮೇಲಿನ ಹೇಳಿಕೆಯನ್ನು ಕೇರಳ ಯುನಿವರ್ಸಿಟಿ (Kerala University) ಆಫ್ ಹೆಲ್ತ್ ಸೈನ್ಸಸ್ (KUHS), ಕೇರಳದ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯೊಂದರ ಸಂಬಂಧದಲ್ಲಿ ಕೋರ್ಟಿಗೆ ಸಲ್ಲಿಸಿದ ಉಲ್ಲೇಖದಲ್ಲಿ ತಿಳಿಸಿದೆ.
ಅಷ್ಟಕ್ಕೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿರುವ ಮಹಿಳಾ ವಿದ್ಯಾರ್ಥಿಗಳು ರಾತ್ರಿ 9:30 ಗಂಟೆಯ ನಂತರ ಹೊರಗೆ ಸಂಚರಿಸುವುದಕ್ಕೆ ಪ್ರತಿಬಂಧವಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚಿಗಷ್ಟೇ ಕೇರಳ ಹೈಕೋರ್ಟ್, ವಿದ್ಯಾರ್ಥಿನಿಯರಿಗೆ ರಾತ್ರಿ 9:30 ಗಂಟೆಯ ನಂತರ ಹೊರಗೆ ಹೋಗುವುದನ್ನು ನಿಷೇಧಿಸಿದ ಅಧಿಸೂಚನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಅದು, ಇಂತಹ ನಿಷೇಧ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಏಕಿದೆ, ಪುರಿಷ ವಿದ್ಯಾರ್ಥಿಗಳಿಗೇಕಿಲ್ಲ ಎಂದು ಖಾರವಾಗಿ ಪ್ರಶ್ನಿಸಿತ್ತು.
ರಾತ್ರಿ ಹೊರ ಸಂಚಾರ ನಿಷೇಧ
ಇದಕ್ಕೂ ಮೊದಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಐದು ಮಹಿಳಾ ವಿದ್ಯಾರ್ಥಿಗಳು ಈ "ರಾತ್ರಿ ಹೊರ ಸಂಚಾರ ನಿಷೇಧ"ವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ವೈದ್ಯಕೀಯ ವಿವಿಯು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವಂತಹ ರೀತಿಯಲ್ಲಿ ತನ್ನ ಸ್ಪಷ್ಟೀಕರಣವನ್ನು ನೀಡಿದ್ದು ಅದರಲ್ಲಿ ವಿವಿಯು, ನಿದ್ದೆ ಗೆಡುವ ರಾತ್ರಿಗಳು ಹಾಗೂ ರಾತ್ರಿ ತಿರುಗಾಟ ವಿದ್ಯಾರ್ಥಿಗಳಿಗೆ ಸೂಕ್ತವಲ್ಲ ಎಂದು ಉತ್ತರಿಸಿತ್ತು.
ಹಾಸ್ಟೆಲ್ ಸಮಯಗಳಲ್ಲಿ ಮಹತ್ತರ ಸಡಿಲಿಕೆ
ಇನ್ನೊಂದೆಡೆ ಕೇರಳದಲ್ಲಿರುವ ಎಡ ಸರ್ಕಾರವು ನ್ಯಾಯಾಲಯದ ಮುಂದೆ, ಡಿಸೆಂಬರ್ 6 ರಂದೇ ಆದೇಶವನ್ನು ಹೊರಡಿಸಲಾಗಿದ್ದು ಆ ಪ್ರಕಾರ ಹಾಸ್ಟೆಲ್ ಸಮಯಗಳಲ್ಲಿ ಮಹತ್ತರ ಸಡಿಲಿಕೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ ಹಾಗೂ ನ್ಯಾ. ದೇವನ್ ರಾಮಚಂದ್ರನ್ ಅವರು ಸರ್ಕಾರಕ್ಕೆ ಈ ಆದೇಶವು ಸಮರ್ಪಕವಾಗಿ ಇನ್ನು ಮುಂದೆ ಜಾರಿಯಾಗುವೆಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಬ್ಯಾನ್ ಮಾಡಿದ ಸೌದಿ ಅರೇಬಿಯಾ! ವಿದ್ಯಾರ್ಥಿಗಳ ವಿರೋಧ
ಅಲ್ಲದೆ, ಕೋರ್ಟ್, "ಇನ್ನು ಮುಂದೆ ಹೊಸ ಆದೇಶದ ಅನ್ವಯ ಹಾಸ್ಟೆಲ್ ಮುಖ್ಯ ದ್ವಾರಗಳು ಎಂದಿನಂತೆ ಪ್ರತಿ ರಾತ್ರಿ 9:30 ಗಂಟೆಗೆ ಮುಚ್ಚಲ್ಪಡುತ್ತದೆ ಆದರೂ ಅದರ ನಂತರದಲ್ಲಿಯೂ ಸಹ ವಿದ್ಯಾರ್ಥಿಗಳು ಕೆಲ ಷರತ್ತುಗಳಿಗೆ ಒಳಪಟ್ಟಂತೆ ಹಾಸ್ಟೆಲ್ ಪ್ರವೇಶಿಸಬಹುದು. ಆದರೆ, ಇದು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ, ಏಕೆಂದರೆ ಅವರು ಹೊಸದಾಗಿ ಆಗಮಿಸಿರುತ್ತಾರೆ ಇಲ್ಲಿನ ಸ್ಥಳೀಯತೆಯ ಬಗ್ಗೆ ಅಷ್ಟೊಂದು ಅರಿವಿರುವುದಿಲ್ಲ" ಎಂದು ಕೋರ್ಟ್ ತಿಳಿಸಿದೆ.
ಪರಿಣಾಮಕಾರಿ ಅನುಷ್ಠಾನ
ಅಲ್ಲದೆ, ಈ ಪ್ರಸಂಗದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮ ಸ್ವಾಗತಾರ್ಹವಾಗಿದೆ ಎಂದ ನ್ಯಾ. ದೇವನ ರಾಮಚಂದ್ರನ್ ಅವರು, "ಈ ವಿಷಯದಲ್ಲಿ ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳು ಸರ್ಕಾರದ ಈ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕೆಂದು" ಕರೆ ನೀಡಿದರು.
ಇತ್ತ ಇನ್ನೊಂದೆಡೆ, ವಿಶ್ವವಿದ್ಯಾಲಯವು ತನ್ನ ಅಫಿಡವಿಟ್ ನಲ್ಲಿ ವಿದ್ಯಾರ್ಥಿಗಳ ವಯಸ್ಸಿನ ಪಕ್ವತೆ ಮತ್ತು ನಿಲುವನ್ನು ವೈಜ್ಞಾನಿಕ ಪುರಾವೆಗಳಿದ್ದು ಅದು ಬಾಹ್ಯ ವಾತಾವರಣ ಮತ್ತು ಒತ್ತಡಗಳಿಗೆ ಒಳಗಾಗುತ್ತದೆ. ಹೀಗಾದಾಗ ಅಪಾಯಕರ ನಡತೆ, ಅಸುರಕ್ಷಿತ ಲೈಂಗಿಕತೆಗೆ ಕಾರಣವಾಗಬಹುದಾಗಿದೆ" ಎಂಬುದಾಗಿ ಉಲ್ಲೇಖಿಸಿದೆ.
"ಮೆದುಳಿನಲ್ಲಿರುವ ಪ್ರಿಫ್ರಂಟಲ್ ಕಾರ್ಟೆಕ್ಸ್ ಒಂದು ಪ್ರಮುಖ ಭಾಗವಾಗಿದ್ದು ಮನುಷ್ಯನ ಸಂಕೀರ್ಣ ನಡವಳಿಕೆ, ವ್ಯಕ್ತಿತ್ವ ತೋರುವಿಕೆಗೆ ಬಾಧ್ಯಸ್ಥವಾಗಿರುತ್ತದೆ. ಹಾಗಾಗಿ ಅದು ಪೂರ್ಣವಾಗಿ ಅಭಿವೃದ್ಧಿ ಹೊಂದಬೇಕಾಗಿರುವುದು ಮುಖ್ಯವಾಗಿದ್ದು ಆ ಪ್ರಕ್ರಿಯೆ ಸಾಮಾನ್ಯವಾಗಿ ವ್ಯಕ್ತಿಗೆ 25 ವರ್ಷ ವಯಸ್ಸಾದಾಗ ಸಂಭವಿಸುತ್ತದೆ."
ವೈಜ್ಞಾನಿಕ ಸತ್ಯಾಂಶ ಪರಿಗಣಿಸಿ
ಈ ಮೇಲಿನ ವೈಜ್ಞಾನಿಕ ಸತ್ಯಾಂಶಗಳನ್ನು ಪರಿಗಣಿಸಿ ನೋಡಿದಾಗ ಹದಿನೆಂಟನೇ ವಯಸ್ಸಿನಲ್ಲಿ ಎಲ್ಲ ರೀತಿಯ ಸ್ವಾತಂತ್ರ್ಯ ಪಡೆಯಬೇಕೆಂಬುದು ಸರಿಯಾದ ಆಶಯವಲ್ಲ ಹಾಗೂ ಇದು ಸಮಾಜದ ದೃಷ್ಟಿಯಿಂದಲೂ ಒಪ್ಪಿಕೊಳ್ಳುವಂಥದ್ದಲ್ಲ ಎಂದು ವಿವಿಯು ತನ್ನ ಅಫಿಡವಿಟ್ ನಲ್ಲಿ ಕ್ಲೈಮ್ ಮಾಡಿದೆ. ಇದಲ್ಲದೆ, ವಿವಿಯು ತನ್ನ ಸಮರ್ಥನೆಯನ್ನು ಮುಂದುವರೆಸುತ್ತ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರ ಕಾಲೇಜು ಸಮಯ ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾಗುತ್ತದೆ ಹಾಗೂ ಅವರಿಗೆ ಸಮರ್ಪಕವಾಗಿ ನಿದ್ರೆ ಬೇಕಾಗಿರುವುದು ಅವರ ಆರೋಗ್ಯ ದೃಷ್ಟಿಯಿಂದ ಅವಶ್ಯಕವಾಗಿದೆ.
ರಾತ್ರಿ ಜೀವನ ಎಂಬುದು ವಿದ್ಯಾರ್ಥಿಗಳಿಗೆ ಉತ್ತಮವಲ್ಲ
ರಾತ್ರಿ ಜೀವನ ಎಂಬುದು ವಿದ್ಯಾರ್ಥಿಗಳಿಗೆ ಉತ್ತಮವಲ್ಲ ಹಾಗೂ ಕಾಲೇಜು ಪ್ರಾಧಿಕಾರಗಳು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಮಾಣದ ನಿದ್ರೆ ಅನುಮತಿಸಲು ಹಲವು ಕಠಿಣ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ಹಾಸ್ಟೆಲ್ ಗಳಲ್ಲಿ ಶಿಸ್ತು ಎಂಬುದು ಸಾಕಷ್ಟು ಮಹತ್ವವಾಗಿದ್ದು ಈ ಮೂಲಕ ಶಿಸ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನೂ ಸಹ ಖಾತರಿಪಡಿಸುತ್ತದೆ ಎಂದು ವಿವಿಯು ತನ್ನ ಅಫಿಡವಿಟ್ ನಲ್ಲಿ ವಿವರಿಸಿದೆ.
ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ನಿಯಮಗಳು ಸಮಾನವಾಗಿರಲಿ
ಅಷ್ಟಕ್ಕೂ ಈ ಅರ್ಜಿಯ ಪ್ರಕರಣದಾರರು 2019 ರಿಂದ ಜಾರಿಯಾಗಿದ್ದ ಈ ಆದೇಶದ ಮೂಲಕ ಈ ನಿಷೇಧ ಕ್ರಮವು ಕೇವಲ ತಮ್ಮ ಹಾಸ್ಟೆಲ್ ನಲ್ಲಿ ಮಾತ್ರ ಜಾರಿಯಾಗಿದ್ದು ಪುರುಷರ ಕಾಲೀಜಿಗೆ ಇದು ಅನ್ವಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದ್ದರು. ಇದನ್ನು ಗಮನಿಸಿದ ನ್ಯಾಯಾಲಯವು ಪುರುಷರಿಗಿರುವ ಸ್ವಾತಂತ್ರ್ಯ ಮಹಿಳೆಯರಿಗೇಕಿಲ್ಲ ಎಂದು ಪ್ರಶ್ನಿಸಿತು ಹಾಗೂ ತನ್ನ ಆದೇಶದಲ್ಲಿ "ಬನ್ನಿ ರಾತ್ರಿ ಎಂಬುದು ಭಯ ಪಡದಂತಾಗಲಿ, ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ನಿಯಮಗಳು ಸಮಾನವಾಗಿರಲಿ, ರಾಜ್ಯಾಡಳಿತ ಹಾಗೂ ಪ್ರಾಧಿಕಾರಗಳು ಎರಡೂ ಲಿಂಗಗಳನ್ನು ಸಮಾನ ಹಾಗೂ ಸಶಕ್ತಗೊಳಿಸುವಿಕೆಯತ್ತ ಕೆಲಸ ಮಾಡಬೇಕು" ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ