ವಿಜಯಪುರ: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು (PUC Exam) ನಡೆಯುತ್ತಿವೆ. ವಿದ್ಯಾರ್ಥಿಗಳು ಯಾವುದೇ ಗೊಂದಲ ಇಲ್ಲದೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುತ್ತಿದ್ದಾರೆ. ಆದರೆ ಜಿಲ್ಲೆಯ ಸಿಂದಗಿ (Sindagi) ತಾಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಮೇಲ್ವಿಚಾರಕರೇ (Special Observer) ಎಡವಟ್ಟು ಮಾಡಿದ್ದಾರೆ. ಪಿಯು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಸ್ಪೆಷಲ್ ಅಬ್ಸರ್ವರ್ ತಮ್ಮ ಮೊಬೈಲ್ ಮೂಲಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಜೊತೆ ಸೆಲ್ಫಿ (Selfie) ಕ್ಲಿಕ್ಕಿಸಿದ್ದಾರೆ. ಸಿಂದಗಿ ತಾಲೂಕಿನ ದೇವಣಗಾಂವ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಭಾಷೆ ಕನ್ನಡ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ.
ಯಡವಟ್ಟು ಅಧಿಕಾರಿಗೆ ನೋಟಿಸ್
ಸಿಂದಗಿಯ ಸಮಾಜ ಕಲ್ಯಾಣ ಇಲಾಖೆ ಎಡಿ ನಿರ್ಮಲಾ ಭೂಸಗೊಂಡ ಪರೀಕ್ಷಾ ನಿಯಮ ಉಲ್ಲಂಘಿಸಿದ್ದಾರೆ. ನಿರ್ಮಲಾ ಅವರು ದೇವಣಗಾಂವ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಮೇಲ್ವಿಚಾರಕಿ ಆಗಿ ಆಗಮಿಸಿದ್ದರು. ಈ ವೇಳೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಜೊತೆ ಸ್ಮಾರ್ಟ್ ಫೋನ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಗ್ರೂಪ್ನಲ್ಲಿ ಫೋಟೋಗಳನ್ನು ಶೇರ್ ಮಾಡಿರುವುದು ತಿಳಿದು ಬಂದಿದೆ. ಪರೀಕ್ಷಾ ನಿಯಮಗಳ ಪ್ರಕಾರ ಈ ರೀತಿ ನಡೆದುಕೊಳ್ಳುವಂತಿಲ್ಲ. ಹಾಗಾಗಿ ನಿಯಮ ಉಲ್ಲಂಘಿಸಿದ ನಿರ್ಮಲಾ ಅವರಿಗೆ ನೋಟಿಸ್ ನೀಡಲು ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಸುಸೂತ್ರವಾಗಿ ನಡೆಯುತ್ತಿರುವ ಪಿಯು ಪರೀಕ್ಷೆ
ಇನ್ನು ಮಾರ್ಚ್ 9 ರಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ. ಯಾವುದೇ ಲೋಪದೋಷ ಆಗದಂತೆ ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಲಾಗಿದೆ. ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಡದಂತೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನವಿ ಮಾಡಿದೆ. ಈ ವರ್ಷ ಒಟ್ಟು 7.27 ಲಕ್ಷ ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. 5,716 ಕಾಲೇಜುಗಳಿಂದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 1,109 ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಮ್ ನಡೆಯುತ್ತಿದೆ.
ಈ ಬಾರಿಯ ಹೈಲೈಟ್ಸ್
ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಕಠಿಣ ನಿಯಮಗಳು
ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್ ಮಾಡಲಾಗಿದೆ. ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Exam Rules: ಹತ್ತನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ಈ ಬಾರಿ ಪರೀಕ್ಷಾ ನಿಯಮದಲ್ಲಿ ಏನೇನಿದೆ ನೋಡಿ
ಮೇನಲ್ಲಿ ಫಲಿತಾಂಶ ಸಾಧ್ಯತೆ
2023ರ ದ್ವಿತೀಯ ಪಿಯುಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇನ್ನು ಕೆಲವು ಮಾಹಿತಿ ಪ್ರಕಾರ ಜೂನ್ ತಿಂಗಳು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆದಷ್ಟು ಬೇಗ ಫಲಿತಾಂಶ ಪ್ರಕಟವಾಗುತ್ತದೆ. ಯಾಕೆಂದರೆ ಪದವಿ ಕಾಲೇಜುಗಳಿಗೆ ದಾಖಲಾತಿ ಪಡೆದುಕೊಳ್ಳಬೇಕಾದರೆ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ತುಂಬಾ ಮುಖ್ಯವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ