ಸಾಮಾನ್ಯವಾಗಿ ರಾಜಕೀಯ ಪಕ್ಷಗಳು (political party) ಅಧಿಕಾರಕ್ಕೆ ಬರುವ ಮುಂಚೆ ಎಂದರೆ ಚುನಾವಣೆಗೂ ಮುಂಚೆ ಜನರ ಬಳಿ ಬಂದು ತಮ್ಮ ಪಕ್ಷಕ್ಕೆ ಮತ ಕೇಳಿ ಅನೇಕ ರೀತಿಯ ಅಭಿವೃದ್ದಿ ಕೆಲಸಗಳ (Work) ಭಾರಿ ಭರವಸೆಗಳನ್ನು ನೀಡುವುದನ್ನು ನಾವು ನೋಡಿರುತ್ತೇವೆ. ಒಮ್ಮೆ ಚುನಾವಣೆಯಲ್ಲಿ ಭಾರಿ ಜನ ಬೆಂಬಲದಿಂದ ಗೆದ್ದು ಬಂದು ಸರ್ಕಾರ (Government) ರಚಿಸಿದ ನಂತರ ತಾವು ಜನರಿಗೆ (People) ಚುನಾವಣೆಗೂ ಮುಂಚೆ ನೀಡಿದ ಭರವಸೆಗಳನ್ನು ಗಾಳಿಗೆ ತೂರುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಹೀಗೆ ಚುನಾವಣೆಗೂ ಮುಂಚೆ ಆಮ್ ಆದ್ಮಿ ಪಾರ್ಟಿ (ಆಪ್) ಸಹ ಪಂಜಾಬ್ ರಾಜ್ಯದಲ್ಲಿ ಅನೇಕ ರೀತಿಯ ಅಭಿವೃದ್ದಿ ಕೆಲಸಗಳನ್ನು ಮಾಡುವುದಾಗಿ ಭರವಸೆಯನ್ನು ನೀಡಿತ್ತು. ಹಾಗೆ ನೀಡಿದ ಅನೇಕ ರೀತಿಯ ಭರವಸೆಗಳಲ್ಲಿ ರಾಜ್ಯದಲ್ಲಿ ಇರುವ ಶಾಲೆಗಳ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸುವ ಭರವಸೆ ನೀಡಿತ್ತು. ಈಗ ಆ ಭರವಸೆಯನ್ನು ಈಡೇರಿಸಲು ಆಮ್ ಆದ್ಮಿ ಪಾರ್ಟಿ ಸಜ್ಜಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೇಗೆ ಅಂತೀರಾ? ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ, ನಿಮಗೆ ಅರ್ಥವಾಗುತ್ತದೆ.
ಚುನಾವಣೆಗೂ ಮುಂಚೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಾ ಆಪ್?
ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುರುವಾರ 36 ಶಾಲಾ ಪ್ರಾಂಶುಪಾಲರ ಮೊದಲ ಒಂದು ಬ್ಯಾಚ್ ಅನ್ನು ಸಿಂಗಾಪುರಕ್ಕೆ ಕಳುಹಿಸಲಿದ್ದು ಅವರ ವೃತ್ತಿಪರ ಕೌಶಲ್ಯಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಯೋಜನೆಗೆ ಮುಂದಾಗುವುದಾಗಿ ಘೋಷಿಸಿದರು. ಇದರೊಂದಿಗೆ ಆಪ್ ಪಕ್ಷದ ಸರ್ಕಾರವು ಪಂಜಾಬ್ ರಾಜ್ಯದ ಜನರಿಗೆ ನೀಡಿದ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುತ್ತಿದೆ ಎಂದು ಸಿಎಂ ಅವರು ಹೇಳಿದರು.
ಇದನ್ನೂ ಓದಿ: Preschool Education: ನಿಮ್ಮ ಮಕ್ಕಳ ಕಲಿಕೆಯ ಮೇಲೆ ನಿಂತಿದೆ ದೇಶದ ಭವಿಷ್ಯ
ಆನ್ಲೈನ್ ಸಂವಾದದ ಸಮಯದಲ್ಲಿ, ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ತಮ್ಮ ಪಕ್ಷವು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿತ್ತು ಎಂದು ಮಾನ್ ಹೇಳಿದರು. 36 ಸರ್ಕಾರಿ ಶಾಲಾ ಪ್ರಾಂಶುಪಾಲರ ಮೊದಲ ಬ್ಯಾಚ್ ವೃತ್ತಿಪರ ತರಬೇತಿಗಾಗಿ ಫೆಬ್ರವರಿ 4 ರಂದು ಎಂದರೆ ನಾಳೆ ಶನಿವಾರದಂದು ಸಿಂಗಾಪುರಕ್ಕೆ ತೆರಳಲಿದೆ ಎಂದು ಅವರು ಹೇಳಿದರು.
ಶಿಕ್ಷಕರ ತರಬೇತಿ ಸೆಮಿನಾರ್ ನಲ್ಲಿ ಭಾಗವಹಿಸಲಿರುವ ಪ್ರಾಂಶುಪಾಲರು
ಈ ಪ್ರಾಂಶುಪಾಲರು ಫೆಬ್ರವರಿ 6 ರಿಂದ 10 ರವರೆಗೆ ವೃತ್ತಿಪರ ಶಿಕ್ಷಕರ ತರಬೇತಿ ಸೆಮಿನಾರ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಅವರು ಹೇಳಿದರು. ಸೆಮಿನಾರ್ ಮುಗಿದ ನಂತರ ಈ ಮೊದಲ ಬ್ಯಾಚ್ ಫೆಬ್ರವರಿ 11 ರಂದು ದೇಶಕ್ಕೆ ಹಿಂತಿರುಗಲಿದೆ. ಸಿಂಗಾಪುರದ ಹೆಚ್ಚುವರಿ ಪರಿಣಿತಿಯೊಂದಿಗೆ ಈ ಪ್ರಾಂಶುಪಾಲರು ರಾಜ್ಯದಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಮಟ್ಟವನ್ನು ಮೇಲ್ದರ್ಜೆಗೇರಿಸುವ ನಂಬಿಕೆ ಇದೆ. ಈ ಕ್ರಾಂತಿಕಾರಿ ಹೆಜ್ಜೆಯಿಂದ ರಾಜ್ಯದಾದ್ಯಂತದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಮಾನ್ ಹೇಳಿದರು.
ಅವರು ನಮ್ಮ ದೇಶಕ್ಕೆ ಹಿಂದಿರುಗಿದ ನಂತರ, ಈ ಪ್ರಾಂಶುಪಾಲರು ತಮ್ಮ ಅನುಭವವನ್ನು ತಮ್ಮ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಮಾನ್ ಹೇಳಿದರು.
ಶಿಕ್ಷಕರ ಪರಿಣತಿ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಲಿದೆಯಂತೆ ಈ ಸೆಮಿನಾರ್
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಶಿಕ್ಷಕರ ಪರಿಣತಿ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ವಿಶೇಷ ತರಬೇತಿ ಪಡೆಯಲು ಶಾಲಾ ಪ್ರಾಂಶುಪಾಲರ ಒಂದು ಬ್ಯಾಚ್ ಅನ್ನು ಸಿಂಗಾಪುರದ ಪ್ರಾಂಶುಪಾಲರ ಅಕಾಡೆಮಿಗೆ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ ಕಳುಹಿಸುವುದಾಗಿ ಪಂಜಾಬ್ ಸರ್ಕಾರ ಕಳೆದ ವರ್ಷ ಘೋಷಿಸಿತ್ತು.
ಆಗ ನೀಡಿದ್ದ ಒಂದು ಭರವಸೆಯನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡು ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿವರ್ತಿಸುತ್ತಿರುವ ಆಪ್ ಪಕ್ಷದ ಈ ನಡೆ ಅನೇಕ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ