ಮೊದಲೆಲ್ಲಾ ಈ ಸೆಂಟ್ರಲ್ ಯುನಿವರ್ಸಿಟಿ (University) ಅಂದರೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಡಾಕ್ಟರ್ ಆಫ್ ಫಿಲಾಸಫಿ ಎಂದರೆ ಪಿಎಚ್‌ಡಿ (PGD) ಮಾಡಲೇಬೇಕು ಅನ್ನೋ ಒಂದು ನಿಯಮವಿತ್ತು. ಇದು ಬಹುತೇಕರಿಗೆ ಗೊತ್ತಿದ್ದಂತಹ ವಿಚಾರವೇ ಆಗಿದೆ. ಆದರೆ ಈಗ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ (Assistant Proffesor) ಹುದ್ದೆಗಳಿಗೆ ಸೇರಿಕೊಳ್ಳಲು ಪಿಎಚ್‌ಡಿ ಮಾಡಲು ಕಾದು ಕುಳಿತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ ನೋಡಿ.
ಏನಪ್ಪಾ ಅದು ಸಿಹಿ ಸುದ್ದಿ ಅಂತೀರಾ? ಈಗ ಹೀಗೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಪಿಎಚ್‌ಡಿ ಮಾಡುವುದು ಕಡ್ಡಾಯವಲ್ಲವಂತೆ. ಹೌದು ನೀವು ಓದಿದ್ದು ಸರಿಯಾಗಿಯೇ ಇದೆ, ಈ ಮಾತನ್ನು ಹೇಳಿದ್ದು ಖುದ್ದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಎಂ ಜಗದೀಶ್ ಕುಮಾರ್ ಅವರು.
ವಿಶ್ವವಿದ್ಯಾಲಯಗಳಲ್ಲಿ ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗೋದಕ್ಕೆ ಪಿಎಚ್‌ಡಿ ಕಡ್ಡಾಯವಲ್ಲವಂತೆ..
ಉಸ್ಮಾನಿಯಾ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಹೊಸದಾಗಿ ನಿರ್ಮಿಸಲಾದ ಯುಜಿಸಿ-ಎಚ್ಆರ್‌ಡಿಸಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಜಗದೀಶ್ ಕುಮಾರ್ ಅವರು ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಎಂದರೆ ಎನ್ಇಟಿ ಯಲ್ಲಿ ಅರ್ಹತೆ ಹೊಂದಿದ್ದರೆ ಸಾಕು ಎಂದು ಹೇಳಿದ್ದಾರೆ.
ಪಿಎಚ್‌ಡಿ ಹೊಂದಿರದ ವೃತ್ತಿಪರರನ್ನು ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ, ಈ ಕ್ರಮವು ವಿಶ್ವವಿದ್ಯಾಲಯಗಳಲ್ಲಿ ಕಲಿಸಲು ಬಯಸುವ ಆದರೆ ಪಿಎಚ್‌ಡಿ ಪದವಿಯನ್ನು ಹೊಂದಿರದ ಕಾರಣ ಸಾಧ್ಯವಾಗದ ತಜ್ಞರಿಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಅಂತ ಹೇಳಲಾಗುತ್ತಿದೆ.
ಒನ್ ನೇಶನ್ ಒನ್ ಡೇಟಾ ಪೋರ್ಟಲ್ ಅಭಿವೃದ್ಧಿ
ಒನ್ ನೇಶನ್ ಒನ್ ಡೇಟಾ ಪೋರ್ಟಲ್ ಎಂದರೆ ಒಂದು ರಾಷ್ಟ್ರ-ಒಂದು ಡೇಟಾ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಅಭ್ಯರ್ಥಿಗಳಿಗೆ ಎಲ್ಲಾ ಯುಜಿಸಿ ಮಾರ್ಗಸೂಚಿಗಳು ಮತ್ತು ಇತರ ಪ್ರಮುಖ ವಿವರಗಳನ್ನು ನೀಡುತ್ತದೆ ಎಂದು ಎಂ ಜಗದೀಶ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಗುಣಮಟ್ಟದ ಶಿಕ್ಷಣವನ್ನು ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾಲಯದ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ವಿಸ್ತರಿಸಲಾಗುವುದು ಎಂದು ಕುಮಾರ್ ಹೇಳಿದ್ದಾರೆ.
ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ಪಿಎಚ್‌ಡಿಯನ್ನು ಕನಿಷ್ಠ ಅರ್ಹತಾ ಮಾನದಂಡವನ್ನಾಗಿ ಮಾಡುವ ಆಯೋಗದ ನಿಬಂಧನೆಗಳನ್ನು ಕೇಂದ್ರ ಸರ್ಕಾರ ಈ ಹಿಂದೆ ತಿದ್ದುಪಡಿ ಮಾಡಿತ್ತು. ಹೊಸ ಮಾರ್ಗಸೂಚಿಗಳು 2021 ರಲ್ಲಿ ಜಾರಿಗೆ ಬರಬೇಕಾಗಿತ್ತು, ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಯಿತು. ನಂತರ ಇದನ್ನು ಜುಲೈ 2023 ರವರೆಗೆ ವಿಸ್ತರಿಸಲಾಯಿತು ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಆದರೆ ಈ ಮಧ್ಯೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್) ಸ್ಕೋರ್ ಆಧಾರದ ಮೇಲೆ ನೇಮಕಾತಿ ಮುಂದುವರಿಯಿತು.
ನೆಟ್ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಎನ್‌ಟಿಎ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಡಿಸೆಂಬರ್-2022 ಮತ್ತು ಜೂನ್-2023 ರಲ್ಲಿ ಜಂಟಿ ಸಿಎಸ್ಐಆರ್-ಯುಜಿಸಿ ನೆಟ್ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಭ್ಯರ್ಥಿಗಳು csirnet.nta.nic.in ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ವೇಳಾಪಟ್ಟಿಯ ಪ್ರಕಾರ, ಅರ್ಜಿ ಪ್ರಕ್ರಿಯೆಯು ಏಪ್ರಿಲ್ 10 ರ ಸಂಜೆ 5 ಗಂಟೆಯವರೆಗೆ ಸಕ್ರಿಯವಾಗಿರುತ್ತದೆ. ವಿಳಂಬ ಶುಲ್ಕದೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ ಏಪ್ರಿಲ್ 10 ರಂದು ರಾತ್ರಿ 11:50 ಆಗಿದ್ದು, ಜೂನ್ 6, 7 ಮತ್ತು 8 ರಂದು ಈ ಪರೀಕ್ಷೆ ನಡೆಯಲಿದೆ.
ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್), ಲೆಕ್ಚರ್‌ಶಿಪ್ (ಎಲ್ಎಸ್) ಮತ್ತು ಭಾರತದ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯ ಮಾಧ್ಯಮ ಇಂಗ್ಲಿಷ್ ಮತ್ತು ಹಿಂದಿ ಆಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ