ಹತ್ತನೇ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ (Result) ಪ್ರಕಟವಾಗುತ್ತಿದೆಯೆಂದರೆ, ವಿದ್ಯಾರ್ಥಿಗಳು ಹಾಗೂ ಪೋಷಕರ ಎದೆಯಲ್ಲಿ ಢವಢವ ಶುರುವಾಗುತ್ತದೆ. ಇನ್ನುಳಿದವರಿಗೆ ಅದೇನೋ ಒಂದು ಬಗೆಯ ಕುತೂಹಲ. ವೃತ್ತಿಜೀವನದ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳು (Exam) ಎಂದೇ ಪರಿಗಣಿತವಾಗಿರುವ ಈ ಫಲಿತಾಂಶಕ್ಕೆ ಎಲ್ಲರೂ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಮೊನ್ನೆ ಮೊನ್ನೆಯಷ್ಟೇ ನಮ್ಮ ರಾಜ್ಯ ಸರ್ಕಾರವು ಸಹ ಹತ್ತನೇ ಹಾಗೂ ಹನ್ನೆರಡೆಯ ತರಗತಿಯ ಫಲಿತಾಂಶವನ್ನು ಪ್ರಕಟಿಸಿತ್ತು. ಈಗ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನ ಸರದಿ.
ಹೌದು, ಸಿಬಿಎಸ್ಇ ಕಳೆದ ಶುಕ್ರವಾರ ತನ್ನ XII ಮತ್ತು Xನೇ ತರಗತಿಯ ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಬಗ್ಗೆ ಮಾತನಾಡಿದ ಸಿಬಿಎಸ್ಇ ಯ ಪರೀಕ್ಷಾ ನಿಯಂತ್ರಕ ಡಾ.ಸನ್ಯಮ್ ಭಾರದ್ವಾಜ್, “ಈ ವರ್ಷ ಯಾವುದೇ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ಪರಿಪೂರ್ಣ ಅಂಕ ಗಳಿಸಿಲ್ಲ ಎಂದು ಹೇಳಿದ್ದಾರೆ.
ಹತ್ತನೇ ತರಗತಿ ಮತ್ತು XII ತರಗತಿಯ ಯಾವುದೇ ವಿದ್ಯಾರ್ಥಿ ಸಂಪೂರ್ಣ ಶೇಕಡಾವಾರು ಅಂದರೆ, ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದುಕೊಂಡಿಲ್ಲ. ಆದರೆ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ತೃಪ್ತಿದಾಯಕವಾಗಿದೆ ಎಂದು ಡಾ ಭಾರದ್ವಾಜ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶದ ಶ್ರೇಯಸ್ಸು ಶಿಕ್ಷಕರಿಗೆ
ಹಿಂದಿನ ತರಗತಿಗಳಲ್ಲಿ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ಸಾಧ್ಯವಾಗದಿದ್ದರೂ, ನಂತರದಲ್ಲಿ ಪರೀಕ್ಷೆಗೆ ಉತ್ತಮವಾಗಿ ತಯಾರಿ ನಡೆಸಿ ಒಳ್ಳೆಯ ಅಂಕಗಳನ್ನು ಗಳಿಸಿದ್ದಾರೆ, ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಆದರೆ, ಅವರ ಫಲಿತಾಂಶದ ಬಹುಭಾಗದಷ್ಟು ಶ್ರೇಯಸ್ಸು ಶಾಲೆಗಳು ಮತ್ತು ಶಿಕ್ಷಕರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಕಾರ್ಯಕ್ಷಮತೆ ಉತ್ತಮವಾಗಿದೆ. ಅದರ ಬಗ್ಗೆ ನಮಗೆ ತುಂಬಾ ತೃಪ್ತಿ ಇದೆ. ಕಳೆದ ಮೂರು ವರ್ಷಗಳಲ್ಲಿ ನಾವು ಕೋವಿಡ್ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದರೆ, ಈ ವರ್ಷದ ಫಲಿತಾಂಶಗಳು ನಾವು ಸಹಜ ಸ್ಥಿತಿಗೆ ಮರಳುತ್ತಿದ್ದೇವೆ ಎಂದು ತೋರಿಸುತ್ತವೆ. ಜೊತೆಗೆ, ಈಗ ಮೊದಲಿನ ಹಾಗೆಯೇ ಒಳ್ಳೆಯ ಸೌಲಭ್ಯಗಳು ಮತ್ತು ಉತ್ತಮ ವಾತಾವರಣವನ್ನು ಸೃಷ್ಟಿಸಲಾಗಿದೆ.ಇದರಿಂದ ವಿದ್ಯಾರ್ಥಿಯು ಶಾಲೆಯಲ್ಲಿ ಹೆಚ್ಚಿನ ವಿಷಯವನ್ನು ಕಲಿಯಲು ಸಾಧ್ಯವಾಗಿದೆ ಎಂಬುದು ಅವರ ಅನಿಸಿಕೆ.
ಫಲಿತಾಂಶದ ಬಗ್ಗೆ ಮತ್ತಷ್ಟು ಮಾತನಾಡಿದ ಡಾ. ಭಾರದ್ವಾಜ್, "ಇಂದು ನಮಗೆ ನಿಜಕ್ಕೂ ತುಂಬಾ ತೃಪ್ತಿಕರ ದಿನ. ಸಾಧ್ಯವಾದಷ್ಟು ಬೇಗ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಸಿಬಿಎಸ್ಇ ಯೋಜಿಸಿತ್ತು. ಅಂತೆಯೇ ನಾವು ಇಂದು ಹತ್ತನೇ ಹಾಗೂ ಹನ್ನೆರೆಡನೇ ತರಗತಿ – ಈ ಎರಡೂ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದ್ದೇವೆ. ಈ ವರ್ಷ ಹತ್ತನೇ ತರಗತಿಯ ಪರೀಕ್ಷೆಗಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು . ಬಹುತೇಕರು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಉತ್ತೀರ್ಣರ ಪ್ರಮಾಣ ಶೇಕಡಾ 93 ಕ್ಕಿಂತ ಹೆಚ್ಚಿದೆ. ನಾವು ಇದನ್ನು 2019 ರ ಪರೀಕ್ಷೆಯೊಂದಿಗೆ ಹೋಲಿಸಿದರೆ, ಈಗ ಹತ್ತನೇ ತರಗತಿಯ ಫಲಿತಾಂಶದಲ್ಲಿ ಸುಮಾರು ಶೇಕಡಾ 2 ರಷ್ಟು ಸುಧಾರಣೆಯಾಗಿದೆ ಎಂದಿದ್ದಾರೆ.
ಪೂರಕ ಪರೀಕ್ಷೆಯ ಅವಕಾಶ
ಯಾವುದೇ ವಿದ್ಯಾರ್ಥಿಯು ಹತ್ತನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು, ಎರಡು ವಿಷಯಗಳಲ್ಲಿ ನಪಾಸಾಗಿದ್ದರೆ, ಅವರು ಪೂರಕ ಪರೀಕ್ಷೆಯಲ್ಲಿ ಕುಳಿತುಕೊಳ್ಳಬಹುದು ಎಂದು ಸಿಬಿಎಸ್‌ಇ ಅಧಿಕಾರಿ ತಿಳಿಸಿದ್ದಾರೆ.
"ಕೆಲವು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದಿರಬಹುದು. ಹಾಗಾಗಿ, ಅವರು ಯಾವುದೇ ಎರಡು ವಿಷಯಗಳಲ್ಲಿ ಶೇಕಡಾ 33 ಅಂಕಗಳನ್ನು ಪಡೆಯಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಈ ವರ್ಷದ ಜುಲೈನಲ್ಲಿ ನಡೆಸಲಾಗುವ ಪೂರಕ ಪರೀಕ್ಷೆಗೆ ಹಾಜರಾಗಬಹುದು" ಎಂದು ಹೇಳಿದ್ದಾರೆ.
ಇದರ ಜೊತೆಗೆ, ವಿದ್ಯಾರ್ಥಿಗಳಿಗೆ ಅಂಕಗಳ ಪರಿಶೀಲನೆ ಮತ್ತು ಮರು ಮೌಲ್ಯಮಾಪನದ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆಯಂತೆ, ಈ ಪ್ರಕ್ರಿಯೆಯು ಮುಂಬರುವ ಮಂಗಳವಾರದಿಂದ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ ಎಂದಿದ್ದಾರೆ ಅಧಿಕಾರಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ