ವಿದ್ಯಾರ್ಥಿಗಳು (Students) ಮಧ್ಯಾಹ್ನ ಹಸಿವಿನಿಂದ ಬಳಲಬಾರದು ಮತ್ತು ಸದಾ ಪೌಷ್ಟಿಕಾಂಶಯುಕ್ತ ಆಹಾರ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ಕಾರಣಕ್ಕಾಗಿ ಪ್ರತಿ ಶಾಲೆಗಳಲ್ಲೂ ಸಹ ಮದ್ಯಾಹ್ನದ ಬಿಸಿ ಊಟ (Mid Day Meal) ವಿತರಣೆ ಮಾಡಲಾಗುತ್ತಿದೆ. ಆದರೊಟ್ಟಿಗೆ ಹಾಲು (Milk) ಹಾಗೂ ಮೊಟ್ಟೆ (Egg) ವಿತರಣೆಯನ್ನೂ ಸಹ ಮಾಡಲಾಗುತ್ತಿತ್ತು. ಆದರೆ ಈಗ ಹಾಲೂ ವಿತರಣೆ ಮಾಡುವಲ್ಲಿ ಸಮಸ್ಯೆ ಉಂಟಾಗಿದೆ. ಒಟ್ಟು 11 ಜಿಲ್ಲೆಗಳಲ್ಲಿ ಹಾಲು ವಿತರಣೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.
ಕ್ಷೀರಭಾಗ್ಯ ಯೋಜನೆಯಲ್ಲಿ ನೀಡುವ ಹಾಲು ರಾಜ್ಯದ 11 ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಜನವರಿಯಿಂದ ವಿತರಣೆಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಗದಗ, ಉತ್ತರ ಕನ್ನಡ, ಬೀದರ್, ಯಾದಗಿರಿ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಮಕ್ಕಳಿಗೆ ಹಾಲು ವಿತರಣೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಸರಿಯಾದ ರೀತಿಯಲ್ಲಿ ಹಾಲು ಸರಬರಾಜು ಆಗದೇ ಇರುವ ಕಾರಣ ಮಕ್ಕಳಿಗೆ ಹಾಲಿನ ವಿತರಣೆ ಮಾಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಪ್ರತಿ ಕೆ.ಜಿ. ಹಾಲಿನ ಪುಡಿಗೆ ಸರ್ಕಾರ ₹ 275 ನಿಗದಿ ಮಾಡಿತ್ತು. ನಂತರ ಈ ಹಾಲಿನ ಪುಡಿ ದರವನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಕೆಎಮ್ಎಫ್ ಸರ್ಕಾರದ ಮುಂದೆ ಇಟ್ಟಿತ್ತು.
ಇದನ್ನೂ ಓದಿ: Mid Day Meal: ಇನ್ಮೇಲೆ ಶಾಲಾ ಮಕ್ಕಳಿಗೆ ಮಧ್ಯಾಹ್ನ ರಾಗಿ ಗಂಜಿ ಸಿಗುತ್ತೆ!
ಬೆಲೆ ಹೆಚ್ಚಿಸಬೇಕು ಎಂಬ ಕೆಎಂಎಫ್‌ನ ಬೇಡಿಕೆಗೆ ಸ್ಪಂದಿಸಿದ್ದ ಸರ್ಕಾರ ₹ 25 ಹೆಚ್ಚಳ ಮಾಡಿತ್ತು. ಆದರೂ ಶಾಲೆಗಳಿಗೆ ಸರಿಯಾದ ಸಮರ್ಪಕ ರೀತಿಯಲ್ಲಿ ಹಾಲು ವಿತರಣೆಯಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಶಾಲೆಗಳಿಗೆ ವಿತರಿಸಬೇಕಿದ್ದ ಹಾಲಿನ ಪುಡಿಯನ್ನು ಸಿಹಿತಿಂಡಿಗಳು, ಐಸ್‌ಕ್ರೀಂ ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಬಳಕೆ ಮಾಡಿಕೊಂಡಿದೆ ಎಂಬ ದೂರುಗಳೂ ಕೇಳಿ ಬರುತ್ತಿದೆ.
ಹಾಲಿನ ಇತರೆ ಉತ್ಪನ್ನಗಳನ್ನು ತಯಾರಿ ಮಾಡಿ ಮಾರಾಟ ಮಾಡಲು ಬಳಸಿಕೊಂಡಿದೆ ಎಂಬ ದೂರಿಗೆ ಪ್ರತಿಯಾಗಿ ಇನ್ನೊಂದು ಮಾಹಿತಿ ಹೊರಬಿದ್ದಿದೆ. ಸಿಹಿ ಪದಾರ್ಥಗಳ ತಯಾರಿಕೆಗೆ ಬಳಸಿಕೊಂಡಿಲ್ಲ. ಸ್ಥಳೀಯ ಮಟ್ಟದಲ್ಲಿ ಹಾಲು ಸಂಗ್ರಹಣೆಯ ಕೊರತೆಯಿದೆ ಎಂದು ಹೇಳಲಾಗಿದೆ. ದಿನಕ್ಕೆ ಸುಮಾರು 18 ಲಕ್ಷ ಲೀಟರ್‌ಗೆ ಬೇಡಿಕೆ ಇದೆ. 14 ಲಕ್ಷ ಲೀಟರ್ ಪೂರೈಸಲು ಸಾಧ್ಯವಾಗುತ್ತಿದೆ’ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬೆಲೆ ಏರಿಕೆಯ ನಂತರವೂ ನಿರೀಕ್ಷೆಗೆ ತಕ್ಕಂತೆ ಹಾಲು ಪೂರೈಕೆ ಯಾಗುತ್ತಿಲ್ಲ ಎಂಬುದು ಸರ್ಕಾರದ ದೂರಾಗಿದೆ. ತಕ್ಷಣ ಪೂರೈಸುವಂತೆ ಸೂಚನೆ ನೀಡಲಾಗಿದೆ.
‘ಫೆಬ್ರುವರಿವರೆಗೆ ಶೇ 70ರಷ್ಟು ಬೇಡಿಕೆಯನ್ನು ಪೂರೈಸಿದ್ದೇವೆ ಎಂದು ಕೆಎಮ್ಎಪ್ ಮಾಹಿತಿ ನೀಡಿದೆ. ಅದೇನೇ ಆದರೂ ವಿದ್ಯಾರ್ಥಿಗಳಿಗೆ ಕ್ಷೀರ ಭಾಗ್ಯ ಕೈತಪ್ಪಿದೆ. 11 ಜಿಲ್ಲೆಯ ಮಕ್ಕಳು ಸದ್ಯ ಇದರಿಂದ ವಂಚಿತರಾಗಿದ್ದಾರೆ. ಯೋಜನೆ ಆರಂಭ ಮಾಡುವುದಲ್ಲಾ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲೂ ಸಹ ತಿಳಿದಿರಬೇಕು ಎಂದು ಸ್ಥಳೀಯರು ಹೇಳಿದ್ದಾರೆ. ಪಾಲಕರು ವಿದ್ಯಾರ್ಥಿಗಳು ಈ ಪರಿಸ್ಥಿತಿಗೆ ಸಾಕ್ಷಿಯಾಗಿದ್ದಾರೆ.
ಆಂದ್ರದಲ್ಲಿ ಹೀಗಿದೆ
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಆಂದ್ರದಲ್ಲಿ ಒಂದು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಬಿಸಿ ಊಟದಲ್ಲಿ ರಾಗಿ ಗಂಜಿ ನೀಡಲಾಗುತ್ತದೆ.ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಮಧ್ಯಾಹ್ನದ ಊಟದ ಯೋಜನೆಯಲ್ಲಿ ಮುದ್ದೆಯನ್ನು ನೀಡಲು ಆಂದ್ರಪ್ರದೇಶ ಸಿದ್ಧವಾಗಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ರಾಗಿ ಮಾಲ್ಟ್ ಪಾನೀಯವನ್ನು ಬಿಸಿ ಊಟದಲ್ಲಿ ಸೇರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ