ನೀವು ನಿಮ್ಮ ಮಗುವನ್ನು ಮೊದಲ ಬಾರಿಗೆ ಶಾಲೆಗೆ (School) ಸೇರಿಸಲು ಕರೆದುಕೊಂಡು ಹೋದಾಗ, ಅಲ್ಲಿ ಶಾಲೆಯವರು ಮೊದಲು ನಿಮ್ಮ ಮಗುವಿನ (Child) ವಯಸ್ಸು ಎಷ್ಟು ಅಂತ ಕೇಳುತ್ತಾರೆ. ಅದು ಏಕೆಂದರೆ ಮಕ್ಕಳು 1ನೇ ತರಗತಿ ಬಂದಾಗ ಅವರಿಗೆ 6 ವರ್ಷ ವಯಸ್ಸು (Age) ಆಗಿರಬೇಕು ಅನ್ನೋ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಕೇಳಿರುತ್ತಾರೆ. ಈಗೆಲ್ಲಾ ಶಾಲೆಗಳ ಮುಂದೆ ಒಂದು ದೊಡ್ಡ ಬೋರ್ಡ್ ಅನ್ನು ನೇತು ಹಾಕಿರುತ್ತಾರೆ, ಅದರಲ್ಲಿ 2-3 ವರ್ಷ ವಯಸ್ಸಿನ ಮಕ್ಕಳಿಗೆ ಪ್ಲೇ ಹೋಂ, 3-4 ವರ್ಷ ವಯಸ್ಸಿನ ಮಕ್ಕಳಿಗೆ ನರ್ಸರಿ, 4-5 ವರ್ಷ ವಯಸ್ಸಿನ ಮಕ್ಕಳಿಗೆ ಎಲ್‌ಕೆಜಿ (LKG) ಮತ್ತು 5-6 ವರ್ಷ ವಯಸ್ಸಿನ ಮಕ್ಕಳಿಗೆ ಯುಕೆಜಿ (UKG) ತರಗತಿಯಲ್ಲಿ ಅಡ್ಮಿಷನ್ ತೆಗೆದುಕೊಳ್ಳಲಾಗುವುದು ಅಂತ. ಎಂದರೆ ಇದರರ್ಥ 6 ವರ್ಷ ತುಂಬಿದಾಗ ಮಗು 1ನೇ ತರಗತಿಗೆ ಬರುತ್ತದೆ ಅಂತ.
1ನೇ ತರಗತಿಗೆ ಪ್ರವೇಶ ಪಡೆಯಬೇಕಾದರೆ ಮಗುವಿನ ವಯಸ್ಸು 6 ವರ್ಷ ಆಗಿರಬೇಕಂತೆ..
ಇದೆಲ್ಲದರ ಬಗ್ಗೆ ನಾವು ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಂದು ಸುದ್ದಿ ಇದೆ ನೋಡಿ. ಅದೇನೆಂದರೆ 1ನೇ ತರಗತಿಗೆ ಪ್ರವೇಶ ಪಡೆಯಲು ಮಗುವಿನ ಕನಿಷ್ಠ ವಯಸ್ಸನ್ನು ಆರು ವರ್ಷಗಳೆಂದು ನಿಗದಿಪಡಿಸುವಂತೆ ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಪ್ರಕಾರ, ಅಡಿಪಾಯ ಹಂತವು ಎಲ್ಲಾ ಮಕ್ಕಳಿಗೆ 3 ರಿಂದ 8 ವರ್ಷಗಳ ನಡುವೆ ಇರುತ್ತದೆ ಮತ್ತು ಐದು ವರ್ಷಗಳ ಕಲಿಕೆಯ ಅವಕಾಶಗಳನ್ನು ಒಳಗೊಂಡಿದೆ, ಇದರಲ್ಲಿ ಮೂರು ವರ್ಷಗಳ ಪ್ರಿಸ್ಕೂಲ್ ಶಿಕ್ಷಣ ಮತ್ತು ನಂತರ 1 ಮತ್ತು 2ನೇ ತರಗತಿಗಳು ಸೇರಿವೆ.
ಇದನ್ನೂ ಓದಿ: School Garden: ಕಿಚನ್ ಗಾರ್ಡನ್ ಶುರು ಮಾಡಿದ ಶಾಲೆಗಳು, ಮಧ್ಯಾಹ್ನದ ಊಟಕ್ಕೆ ತರಕಾರಿಗೆ ಕೊರತೆ ಇಲ್ಲ
ಈ ಹೊಸ ನೀತಿಯ ಬಗ್ಗೆ ಅಧಿಕಾರಿಗಳು ಹೇಳುವುದೇನು?
"ಈ ನೀತಿಯು ಪೂರ್ವ ಶಾಲೆಯಿಂದ 2ನೇ ತರಗತಿಯವರೆಗಿನ ಮಕ್ಕಳ ತಡೆರಹಿತ ಕಲಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅಂಗನವಾಡಿಗಳು ಅಥವಾ ಸರ್ಕಾರಿ, ಸರ್ಕಾರಿ ಅನುದಾನಿತ, ಖಾಸಗಿ ಮತ್ತು ಎನ್‌ಜಿಒ ನಡೆಸುವ ಪ್ರಿಸ್ಕೂಲ್ ಕೇಂದ್ರಗಳಲ್ಲಿ ಅಧ್ಯಯನ ಮಾಡುವ ಎಲ್ಲಾ ಮಕ್ಕಳಿಗೆ ಮೂರು ವರ್ಷಗಳ ಗುಣಮಟ್ಟದ ಪ್ರಿಸ್ಕೂಲ್ ಶಿಕ್ಷಣಕ್ಕೆ ಪ್ರವೇಶವನ್ನು ಖಾತ್ರಿಪಡಿಸುವ ಮೂಲಕ ಮಾತ್ರ ಇದನ್ನು ಮಾಡಬಹುದು" ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಮಕ್ಕಳ ವಯಸ್ಸನ್ನು ಈ ನೀತಿಯೊಂದಿಗೆ ಪ್ರವೇಶಕ್ಕೆ ಸರಿಹೊಂದಿಸಲು ಮತ್ತು ಆರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ 1ನೇ ತರಗತಿಗೆ ಪ್ರವೇಶವನ್ನು ನೀಡುವಂತೆ ನಿರ್ದೇಶಿಸಿದೆ" ಎಂದು ಅಧಿಕಾರಿ ಹೇಳಿದರು.
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಶಾಲೆಗಳಿಗೆ ಕಳುಹಿಸಬಾರದು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಹೇಳಿತ್ತು.
ಇದನ್ನೂ ಓದಿ: Rohini Sindhuri: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್; ಡಿ ರೂಪಾ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ
ಡಿಪಿಎಸ್ಇ ಕೋರ್ಸ್ ಅನ್ನು ಶುರು ಮಾಡಿ ಅಂತ ಹೇಳಿದ ಸಚಿವಾಲಯ
ಅಡಿಪಾಯ ಹಂತದಲ್ಲಿ ಅತ್ಯಂತ ಪ್ರಮುಖ ಅಂಶವೆಂದರೆ ವಯಸ್ಸು ಮತ್ತು ಅಭಿವೃದ್ಧಿಗೆ ಸೂಕ್ತವಾದ ಪಠ್ಯಕ್ರಮ ಮತ್ತು ಬೋಧನಾಶಾಸ್ತ್ರದಲ್ಲಿ ವಿಶೇಷವಾಗಿ ತರಬೇತಿ ಪಡೆದ ಅರ್ಹ ಶಿಕ್ಷಕರ ಲಭ್ಯತೆ ಎಂದು ಎಂಒಇ ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಡಿಪ್ಲೊಮಾ ಇನ್ ಪ್ರಿಸ್ಕೂಲ್ ಎಜುಕೇಶನ್ (ಡಿಪಿಎಸ್ಇ) ಕೋರ್ಸ್ ಅನ್ನು ವಿನ್ಯಾಸಗೊಳಿಸುವ ಮತ್ತು ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.
ಈ ಕೋರ್ಸ್ ಅನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ವಿನ್ಯಾಸಗೊಳಿಸುವ ನಿರೀಕ್ಷೆಯಿದೆ ಮತ್ತು ಎಸ್‌ಸಿಇಆರ್‌ಟಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಿಐಇಟಿ) ಮೂಲಕ ನಡೆಸಲಾಗುತ್ತದೆ ಅಥವಾ ಕಾರ್ಯಗತಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ