ಬ್ರಿಟನ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು (Students) 18 ವರ್ಷ ವಯಸ್ಸಿನವರೆಗೆ, ಗಣಿತ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಬೇಕು ಎಂಬ ಹೊಸ ಆದೇಶವನ್ನು ರಿಷಿ ಸುನಕ್ ಸರ್ಕಾರ ಹೊರಡಿಸಲು ಮುಂದಾಗಿದೆ. "ಗಣಿತ ವಿರೋಧಿ ಮನಸ್ಥಿತಿ" ದೇಶದ ಆರ್ಥಿಕತೆಯನ್ನು ಹಿಮ್ಮೆಟ್ಟಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಯುಕೆ ಪ್ರಧಾನಿ ರಿಷಿ ಸುನಕ್ 18 ವರ್ಷ ವಯಸ್ಸಿನವರೆಗೆ ಎಲ್ಲಾ ವಿದ್ಯಾರ್ಥಿಗಳು ಗಣಿತವನ್ನು ಕಡ್ಡಾಯವಾಗಿ (Compulsory Maths) ಅಧ್ಯಯನ (Study) ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ.
18 ವರ್ಷ ವಯಸ್ಸಿನವರೆಗೆ ಗಣಿತ ಕಡ್ಡಾಯ
ಪ್ರಸ್ತುತ, UK ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 16 ನೇ ವಯಸ್ಸಿನಲ್ಲಿ ಗಣಿತ ವಿಷಯವನ್ನು ಬಿಡುವ ಆಯ್ಕೆಯನ್ನು ಹೊಂದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯ ಆಸಕ್ತಿ ಮೂಡಿಸುವ ಸಲುವಾಗಿ 2023 ರ ತಮ್ಮ ಮೊದಲ ನೀತಿ ಭಾಷಣದಲ್ಲಿ, ಸುನಕ್ ಅವರು 18 ವರ್ಷದವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಗಣಿತದ ಅಧ್ಯಯನವನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದರು.
"ಗಣಿತ ಕೌಶಲ್ಯ ಅತ್ಯಗತ್ಯ"
"18 ವರ್ಷ ವಯಸ್ಸಿನವರೆಗೆ ಕೆಲವು ರೀತಿಯ ಗಣಿತವನ್ನು ಅಧ್ಯಯನ ಮಾಡದಿರುವ ಕೆಲವೇ ದೇಶಗಳಲ್ಲಿ ನಮ್ಮ ದೇಶವೂ ಒಂದು. ಪ್ರಸ್ತುತ ಇಂಗ್ಲೆಂಡ್‌ನಲ್ಲಿ 16-19 ವರ್ಷ ವಯಸ್ಸಿನ ಅರ್ಧದಷ್ಟು ವಿದ್ಯಾರ್ಥಿಗಳು ಮಾತ್ರ ಗಣಿತವನ್ನು ಅಧ್ಯಯನ ಮಾಡುತ್ತಾರೆ. ಈ ಕ್ರಮ ಬದಲಾಗಬೇಕು. ಮಕ್ಕಳು ಕಡ್ಡಾಯವಾಗಿ ಗಣಿತ ಜ್ಞಾನವನ್ನು ಹೊಂದಬೇಕು. ಎಲ್ಲಾ ವಿದ್ಯಾರ್ಥಿಗಳು ಒಂದು ಹಂತದವೆರೆಗೆ ಗಣಿತ ವಿಷಯವನ್ನು ಅಭ್ಯಾಸ ಮಾಡಬೇಕು. ಕೆಲವು ಮೂಲಭೂತ ಕೌಶಲ್ಯಗಳು ಗಣಿತವನ್ನು ಒಳಗೊಂಡಿವೆ ಎಂದು ನಾನು ಭಾವಿಸುತ್ತೇನೆ. ಬೇರೆ ಯಾವುದೇ ಪದವಿ, ಕ್ಷೇತ್ರ ಆಯ್ಕೆ ಮಾಡಿದರೂ ಪ್ರತಿಯೊಬ್ಬರಿಗೂ ಈ ಗಣಿತ ಕೌಶಲ್ಯ ಇರಬೇಕು" ಎಂದು ಸುನಕ್ ತಿಳಿಸಿದ್ದಾರೆ.
ಇದನ್ನೂ ಓದಿ: Paper Evaluation: SSLC ಮೌಲ್ಯಮಾಪನ ಏಪ್ರಿಲ್ 21ರಿಂದ ಆರಂಭ
2023ರ ಹೊಸ ವರ್ಷದಲ್ಲಿ ತಮ್ಮ ಮೊದಲ ಭಾಷಣದಲ್ಲೂ ರಿಷಿ ಸುನಕ್ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆ ಕಡ್ಡಾಯ ಕೂಡ ಸರ್ಕಾರದ ಆದ್ಯತೆಗಳಲ್ಲಿ ಒಂದು ಎಂದು ಹೇಳಿದ್ದರು. "ದತ್ತಾಂಶಗಳು ಎಲ್ಲೆಡೆ ಇರುವ ಮತ್ತು ಅಂಕಿಅಂಶಗಳು ಪ್ರತಿ ಕೆಲಸಕ್ಕೂ ಆಧಾರವಾಗಿರುವ ಜಗತ್ತಿನಲ್ಲಿ, ಗಣಿತದ ಕೌಶಲ್ಯಗಳಿಲ್ಲದೆ ನಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಬಿಡುವುದು ತಪ್ಪಾಗುತ್ತದೆ. ಹೀಗಾಗಿ ವಿವಿಧ ಪ್ರಕಾರದ ಗಣಿತ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು" ಎಂದು ಹೇಳಿದ್ದರು.
ಗಣಿತ ಕೌಶಲ್ಯದ ಕೊರತೆ.. ಯುಕೆಗೆ ವರ್ಷಕ್ಕೆ £20 ಶತಕೋಟಿ ವೆಚ್ಚ
ಇಂಗ್ಲೆಂಡ್‌ನಲ್ಲಿ ಸುಮಾರು 8 ಮಿಲಿಯನ್ ವಯಸ್ಕರು, ಪ್ರಾಥಮಿಕ ಶಾಲಾ ಮಕ್ಕಳು ಹೊಂದಿರುವಷ್ಟೇ ಸಂಖ್ಯಾಶಾಸ್ತ್ರದ ಕೌಶಲ್ಯವನ್ನು ಹೊಂದಿದ್ದಾರೆ. ಅನೇಕ ಯುವಕರು ಗಣಿತದ ಬಗ್ಗೆ ಹೆಚ್ಚಿನ ಆತಂಕವನ್ನು ಹೊಂದಿದ್ದು, ಗಣಿತ ಎಂದರೆ ಭಯ ಪಡುತ್ತಾರೆ. ಈ ಗಣಿತ ಕೌಶಲ್ಯದ ಕೊರತೆಯು ಯುಕೆಗೆ ವರ್ಷಕ್ಕೆ £20 ಶತಕೋಟಿ ವೆಚ್ಚವಾಗಲಿದೆ ಎಂದು ಕೆಲ ವರದಿಗಳು ತಿಳಿಸಿವೆ.
ಈ ಎಲ್ಲಾ ವಿದ್ಯಾಮಾನಗಳಿಂದ ಹೀಗಾಗಿ ಗಣಿತ ಕಲಿಕೆ ಪ್ರಮಾಣದಲ್ಲಿ ಸುಧಾರಣೆಯನ್ನು ಸಾಧಿಸುವುದು ತಮ್ಮ ಸರ್ಕಾರದ ಪ್ರಥಮ ಆದ್ಯತೆ ಎಂದು ರಿಷಿ ಸುನಕ್ ಸ್ಪಷ್ಟಪಡಿಸಿದ್ದಾರೆ.
ಭಾರತದಿಂದ ಪ್ರೇರಿತರಾದರಾ ರಿಷಿ ಸುನಕ್?
ಗಮನಾರ್ಹವಾಗಿ, ಬ್ರಿಟನ್‌ನಲ್ಲಿ ಗಣಿತಶಾಸ್ತ್ರದ ಅಧ್ಯಯನಕ್ಕೆ ಒತ್ತು ನೀಡುವ ಸುನಕ್ ಅವರ ಪ್ರಯತ್ನವು ಅವರ ಭಾರತೀಯ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ ಎನ್ನಬಹುದು. ಭಾರತದಲ್ಲಿ ಗಣಿತಕ್ಕೆ ಹೆಚ್ಚು ಒತ್ತು ನೋಡಲಾಗುತ್ತದೆ. ಬ್ರಿಟಿಷ್ ಪ್ರಧಾನಿ ಭಾರತೀಯ ಮೂಲದವರಾಗಿದ್ದು, ಭಾರತದ ಪಠ್ಯವಿಷಯದಿಂದ ಪ್ರೇರೆಪಿತರಾದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ.
ಭಾರತವು ಗಣಿತ ಕ್ಷೇತ್ರಕ್ಕೆ ಅಪಾರ ಜ್ಞಾನ ಮತ್ತು ಕೊಡುಗೆಯನ್ನು ಹೊಂದಿರುವ ಅಸಾಧಾರಣ ಗಣಿತಜ್ಞರು ಮತ್ತು ವಿದ್ವಾಂಸರ ಪರಂಪರೆಯನ್ನು ಹೊಂದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಭಾರತೀಯ ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತಮರಾಗಿದ್ದಾರೆ ಎಂದು ಹಲವು ಬಾರಿ ಸಾಬೀತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ