ಊಟವಿಲ್ಲದೇ ವಿದ್ಯಾರ್ಥಿಗಳು ಹಸಿವಿನಿಂದ ಬಳಲಬಾರದು ಎಂದು ಕಾಲೇಜಿನ ಪ್ರಾಂಶುಪಾಲರೇ ತಮ್ಮ ಸಂಬಳದಲ್ಲಿ ಊಟ (Meal) ನೀಡಿದ ಘಟನೆ ಜರುಗಿದೆ. ಉತ್ತಮ ಉದ್ದೇಶಕ್ಕಾಗಿ ತಮ್ಮ ಹಣವನ್ನು (Money) ಬಳಸಿ ವಿದ್ಯಾರ್ಥಿನಿಯರಿಗೆ ಇವರು ಸಹಾಯ ಮಾಡಿದ್ದಾರೆ. ಅಧ್ಯಾಪಕರು ತಮ್ಮ ಸಂಬಳದ ಸ್ವಲ್ಪ ಭಾಗವನ್ನು ವಿನಿಯೋಗಿಸಿ ಉಚಿತ ದಾಸೋಹ ಮಾಡುತ್ತಿರುವ ಅಪರೂಪದ ಸಂಗತಿ ಮೈಸೂರಿನಲ್ಲಿ ನಡೆಯುತ್ತಿದೆ. ಈಗಿನ ಕಾಲದಲ್ಲಿ ಇಂತ ವಿಚಾರ ಮಾಡುವ ಜನರು (People) ವಿರಳ ಎಂದೇ ಹೇಳಬಹುದು. ನಗರದ ಮಹಾರಾಣಿ ವಿಜ್ಞಾನ (Maharani College) ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಕಾಲೇಜಿನ ಹೆಣ್ಣು ಮಕ್ಕಳು ಬೆಳಗ್ಗೆ ಲ್ಯಾಬ್ ಇರುವ ಕಾರಣದಿಂದ ಬಹಳ ಬೇಗ ಬರುತ್ತಾರೆ. 8 ಗಂಟೆಗೆಲ್ಲಾ ಅವರು ಹಾಜರಿರುತ್ತಾರೆ. ಹಾಗಾಗಿ ಹೆಚ್ಚಿನ ಮಂದಿ ತಿಂಡಿ ತಿನ್ನದೆ, ಮಧ್ಯಾಹ್ನಕ್ಕೆ ಊಟವನ್ನೂ ತರದೇ ಬರುತ್ತಾರೆ, ದಿನವಿಡೀ ಹಸಿವಿನಿಂದ ಪಾಠ ಕೇಳುವ ಪ್ರಮೇಯ ವಿದ್ಯಾರ್ಥಿನಿಯರಿಗೆ ಎದುರಾಗುತ್ತದೆ. ಆ ಕಾರಣದಿಂದ ವಿದ್ಯಾರ್ಥಿನಿಯರಿಗೆ ನೆರವಾಗಲಿ ಎಂದು ಈ ರೀತಿ ವ್ಯವಸ್ಥೆ ಮಾಡಲಾಗಿದೆ.
ಎಷ್ಟೋ ವಿದ್ಯಾರ್ಥಿನಿಯರು ಹಸಿವಿನಿಂದ ಪ್ರಯೋಗಾಲಯದಲ್ಲೇ ತಲೆ ಸುತ್ತಿ ಬಿದ್ದಿದ್ದಾರೆ. ತುಂಬಾ ಹೆಣ್ಣು ಮಕ್ಕಳಿಗೆ ಕ್ಯಾಂಟೀನ್ ದುಡ್ಡು ಕೊಟ್ಟು ಊಟ ಮಾಡದಷ್ಟು ಆರ್ಥಿಕ ಸಂಕಷ್ಟ ಇರುತ್ತದೆ ಹಾಗಾಗಿ ಹಸಿವಿನಿಂದಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎಷ್ಟೋ ಜನರಿಗೆ ಎದುರಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: NEP: ಅಂಗನವಾಡಿಗಳಿಗೂ ಹೊಸ ಶಿಕ್ಷಣದ ನೀತಿ ಜಾರಿ; ಸಚಿವ ಬಿ ಸಿ ನಾಗೇಶ್ ಘೋಷಣೆ
ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ ಅವರು ಈ ಕಷ್ಟವನ್ನು ಅರ್ಥಮಾಡಿಕೊಂಡು ಇದಕ್ಕೆಲ್ಲಾ ಒಂದು ಪರಿಹಾರವೆಂಬಂತೆ ತಾವೇ ಸ್ವತಃ ತಮ್ಮ ಸಂಬಳದಲ್ಲಿ ಊಟ ನೀಡುತ್ತಿದ್ದಾರೆ. ಅವರ ಶ್ರಮ ಫಲವಾಗಿ ಇಂದು 100ಕ್ಕೂ ಹೆಚ್ಚು ಮಕ್ಕಳು ಉಚಿತವಾಗಿ ಮಧ್ಯಾಹ್ನದ ಊಟ ಮಾಡುತ್ತಿದ್ದಾರೆ. ಇದರಿಂದ ಹಲವಾರು ಜನರಿಗೆ ಸಹಾಯವಾಗಿದೆ. ಈ ಯೋಜನೆಗೆ ಸಂತೃಪ್ತಿ ಎಂಬ ಹೆಸರಿಡಲಾಗಿದೆ.
ಸರಿಯಾದ ಸಮಯಕ್ಕೆ ಊಟ ಹಾಗೂ ತಿಂಡಿ ಸೌಕರ್ಯ
ಕಲಿಯೋಕೆ ಅಂತಲೇ ಮೈಸೂರಿಗೆ ಹಲವಾರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಹಲವು ಮಕ್ಕಳು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್, ಬಿಸಿಎಂ, ಸಮುದಾಯ ಅಥವಾ ಕಾಲೇಜು ಹಾಸ್ಟೆಲ್ಗಳಲ್ಲಿ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ ಅಂತವರಿಗೆ ಸರಿಯಾದ ಸಮಯಕ್ಕೆ ಊಟ ಹಾಗೂ ತಿಂಡಿ ಸೌಕರ್ಯ ಇರುತ್ತದೆ. ಆದರೆ ರೂಮ್ ಮತ್ತು ಪೇಯಿಂಗ್ ಗೆಸ್ಟ್ನಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಈ ಸೌಕರ್ಯಗಳು ಸ್ವಲ್ಪ ಕಡಿಮೆ. ಆದರೆ ಯಾವುದೇ ಹಾಸ್ಟೆಲ್ನಲ್ಲೂ ಉಳಿಯದೆ ನಿತ್ಯ 70-80 ಕಿ.ಮೀ. ದೂರದಿಂದ ಓಡಾಡುವ ವಿದ್ಯಾರ್ಥಿಗಳಿಗೆ ಸಹಜವಾಗಿ ಈ ಸಮಸ್ಯೆ ಉಂಟಾಗುತ್ತದೆ.
ಉಚಿತವಾಗಿ ಊಟ ಮಾಡಲು ಒಪ್ಪದ ವಿದ್ಯಾರ್ಥಿನಿಯರು
ಅದರಲ್ಲೂ ಹಸಿವು ಒಂದು ಸಾಮಾಜಿಕ ಸಮಸ್ಯೆ. ಇದನ್ನು ಸರಿಪಡಿಸುವುದು ತನ್ನ ಕರ್ತವ್ಯ ಎಂದು ಕೊಂಡ ರವಿ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಸಂಬಳದಲ್ಲಿ ಸ್ವಲ್ಪ ಹಣ ವಿನಿಯೋಗಿಸಿ ಇದೀಗ ಸಂತೃಪ್ತಿ ಎಂಬ ಹೆಸರಿನಲ್ಲಿ ಮಕ್ಕಳಿಗಾಗಿ ಉಚಿತ ಆಹಾರ ಪೂರೈಸುತ್ತಿದ್ದಾರೆ. ಮೊದಲು ವಿದ್ಯಾರ್ಥಿನಿಯರು ಉಚಿತವಾಗಿ ಊಟ ಮಾಡಲು ಒಪ್ಪಲಿಲ್ಲವಂತೆ ಆಗ ವಿದ್ಯಾಭ್ಯಾಸ ಅದರೊಟ್ಟಿಗೆ ಆರೋಗ್ಯ ಕೂಡಾ ತುಂಬಾ ಮುಖ್ಯ ನಾವೆಲ್ಲರೂ ಒಂದೇ ಕುಟುಂಬದವರು ಎಂದುಕೊಂಡು ಊಟ ಮಾಡಿ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಮನವೊಲಿಸಿದ ನಂತರ ವಿದ್ಯಾರ್ಥಿನಿಯರು ಊಟ ಮಾಡಿದ್ದಾರೆ.
ಮಕ್ಕಳಿಗೆ ಊಟ ವಿತರಣೆಗೆ ಪ್ರಾಂಶುಪಾಲರು ಸಮಿತಿ ರಚನೆ ಮಾಡಿದ್ದಾರೆ. ಮಧ್ಯಾಹ್ನದ ಊಟದ ಅಗತ್ಯವಿರುವ ವಿದ್ಯಾರ್ಥಿನಿಯರನ್ನು ಗುರುತಿಸಿ ಈಗ ಅವರಿಗೆ ಊಟ ನೀಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ