ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು (Second PUC Examinations) ಗುರುವಾರ ಆರಂಭಗೊಳ್ಳಲಿದ್ದು, ಸಕಲ ಸಿದ್ಧತೆ ನಡೆದಿದೆ. ಇಲಾಖೆಯು ಯಾವುದೇ ಲೋಪ ದೋಷ ಆಗದಂತೆ ಎಚ್ಚರಿಕೆ ವಹಿಸಿದೆ. ಯಾವುದೇ ಊಹಾಪೋಹ, ವದಂತಿಗಳಿಗೆ ಕಿವಿಗೊಡದಂತೆ ಶಿಕ್ಷಣ ಇಲಾಖೆ (Education Department) ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮನವಿ ಮಾಡಿದೆ. ಮಾ.29ರವರೆಗೆ ನಿತ್ಯ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿದ್ದು. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು, ಮೊಬೈಲ್ ನಿಷೇಧ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೇಸಿಕ್ ಹ್ಯಾಂಡ್ ಸೆಟ್ ಬಳಕೆ
ಪರೀಕ್ಷಾ ಮೇಲ್ವಿಚಾರಕರು ಮಾತ್ರ ಬೇಸಿಕ್ ಹ್ಯಾಂಡ್ ಸೆಟ್ ಬಳಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಸಂಬಂಧ ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆಯದಂತೆ ನಿಗಾ ವಹಿಸಲು ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.
7,26,195 ವಿದ್ಯಾರ್ಥಿಗಳಿಗೆ ಪರೀಕ್ಷೆ
ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (ಫ್ರೆಷರ್ಸ್) , 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಿಂದ 2,34,815, ವಾಣಿಜ್ಯ- 2,47,260 ಮತ್ತು ವಿಜ್ಞಾನದಿಂದ 2,44,120 ವಿದ್ಯಾರ್ಥಿಗಳಾಗಿದ್ದಾರೆ. ಪರೀಕ್ಷಾ ಕಾರ್ಯಕ್ಕೆ 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ ಮತ್ತು 2,373 ವಿಶೇಷ ಜಾಗೃತ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಇದನ್ನೂ ಓದಿ: PUC ವಿದ್ಯಾರ್ಥಿಗಳೇ ಗಮನಿಸಿ, ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆಯಾಗಿದೆ
ಹಿಜಾಬ್ ಧರಿಸಲು ಅವಕಾಶ ಇಲ್ಲ
ಇನ್ನು ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿಕೊಂಡು ಹೋಗುವ ವಿಚಾರವಾಗಿಯೂ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವರು ಕಳೆದ ವರ್ಷ ಜಾರಿ ಮಾಡಿರುವ ಸಮವಸ್ತ್ರ ನೀತಿಯ ಅನ್ವಯ ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಸಮವಸ್ತ್ರ ನಿಯಮ ಪಾಲನೆ ಕಡ್ಡಾಯವಾಗಿದ್ದು, ಈ ನಿಯಮ ಈಗಲೂ ಅನ್ವಯವಾಗಲಿದೆ. ಕಳೆದ ವರ್ಷದ ನಿಯಮವೇ ಈ ಬಾರಿ ಜಾರಿಯಲ್ಲಿರಲಿದೆ. ಯಾವುದೇ ಮಕ್ಕಳು ಪರೀಕ್ಷೆಯಿಂದ ವಂಚಿತಾಗುವುದು ಬೇಡ. ಕಳೆದ ವರ್ಷ ಆರು ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದಾಗಿ ಪರೀಕ್ಷೆ ಬರೆದಿಲ್ಲ. ಅವರು ಈ ಬಾರಿಯಾದರೂ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದರು.
ಪರೀಕ್ಷೆಗೆ ಭದ್ರತಾ ಕ್ರಮಗಳು
-ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
-ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್
-ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ
-ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗಳು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ
-ಶಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ
-ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ
-ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳ ನಿಷೇಧ
-ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಗೋಡೆ ಗಡಿಯಾರದ ವ್ಯವಸ್ಥೆ
-ವದಂತಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ಮೇಲೆ ಸೈಬರ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಇನ್ನಿತರ ತಂಡಗಳು ವಿಶೇಷ ನಿಗಾ.
ಇದನ್ನೂ ಓದಿ: Exam: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಹಾಲ್ ಟಿಕೆಟ್ ತೋರಿಸಿ ಉಚಿತ ಬಸ್ ಪ್ರಯಾಣ ಮಾಡಿ
-ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳಲ್ಲಿ 24/7 ಪೊಲೀಸ್ ಭದ್ರತೆ
-ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ಕಾರ್ಯ ಮತ್ತು ಪರೀಕ್ಷಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿಷೇಧ
-ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾತ್ರ ಕ್ಯಾಮೆರಾ ಸೌಲಭ್ಯ ಇಲ್ಲದ ಬೆಸಿಕ್ ಮೊಬೈಲ್‌ಫೋನ್ ಬಳಕೆಗೆ ಅನುಮತಿ.
ವಿದ್ಯಾರ್ಥಿಗಳೇ ಈ ವಿಚಾರ ಗಮದಲ್ಲಿಟ್ಟುಕೊಳ್ಳಿ
* ಮೊಬೈಲ್, ವಾಚ್, ಕ್ಯಾಲ್ಯುಲೇಟರ್ ಸೇರಿ ಎಲೆಕ್ಟ್ರಾನಿಕ್ಸ್ ಉಪಕರಣ ನಿಷೇಧಿಸಲಾಗಿದ್ದು, ಇವುಗಳನ್ನು ಕೊಂಡೊಯ್ಯದಿರಿ.
* ಕೊನೆಯ ಸಮಯದಲ್ಲಿ ಗೊಂದಲಕ್ಕೀಡಾಗುವ ಬದಲು ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ. ಕೇಂದ್ರಕ್ಕೆ ತೆರಳುವಾಗ ಹಾಲ್ ಟಿಕೆಟ್, ಪೆನ್ ಕೊಂಡೊಯ್ಯಲು ಮರೆಯದಿರಿ.
* ಪ್ರಶ್ನೆ ಪತ್ರಿಕೆ ಓದಲು ಹದಿನೈದು ನಿಮಿಷಗಳನ್ನು ನೀಡಲಾಗುತ್ತದೆ. ಇದನ್ನು ಸೂಕ್ತವಾಗಿ ಬಳಸಿಕೊಳ್ಳಿ.
* ಬಹು ಆಯ್ಕೆಯ ಪ್ರಶ್ನೆಗಳು ಹೆಚ್ಚಿರುವುದರಿಂದ ತಡವರಿಸದೇ ಯೋಚಿಸಿ ಉತ್ತರವನ್ನು ಟಿಕ್ ಮಾಡಿ. ಉಳಿದ ಪ್ರಶ್ನೆಗಳಲ್ಲಿ ಯೋಚಿಸಿ, ಸಮಯ ತೆಗೆದುಕೊಂಡು ಉತ್ತರ ಬರೆಯಿರಿ. ಆಲ್ ದಿ ಬೆಸ್ಟ್....
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ