ಈ ಇಂಟರ್ನ್ಶಿಪ್ (Internship) ಎನ್ನುವುದು ನಾವು ಯಾವುದೇ ವೃತ್ತಿಪರ ಕೋರ್ಸ್ ಗಳನ್ನು ಓದುವಾಗ ಅಥವಾ ಓದಿ ಮುಗಿಸಿದ ನಂತರ ತುಂಬಾನೇ ಅವಶ್ಯಕವಾಗಿರುತ್ತವೆ. ಭವಿಷ್ಯದಲ್ಲಿ (Future) ಒಳ್ಳೆಯ ಕೆಲಸ ಗಿಟ್ಟಿಸಲು ಈ ಇಂಟರ್ನ್ಶಿಪ್ ಗಳೆಲ್ಲವೂ ಸಹಾಯಕ್ಕೆ ಬರುತ್ತವೆ ಅಂತ ಹೇಳಬಹುದು. ಇಂಟರ್ನ್ಶಿಪ್ ಎಂದರೆ ನಾವು ಓದುತ್ತಿರುವ ಕೋರ್ಸ್ ಮುಗಿಸಿದ ನಂತರ ನಮಗೆ ಸಿಗುವ ಮತ್ತು ಲಭ್ಯವಿರುವ ಉದ್ಯೋಗವಕಾಶದ (Job Opportunity) ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಅಂತ ಹೇಳಬಹುದು.
ಇಷ್ಟೊಂದು ಪ್ರಾಮುಖ್ಯತೆ ಇರುವಂತಹ ಇಂಟರ್ನ್ಶಿಪ್ ಯಾವ ಕಾಲೇಜಿನಲ್ಲಿ ಮತ್ತು ಕಂಪನಿಗಳಲ್ಲಿ ನಮಗೆ ಮಾಡಲು ಅವಕಾಶ ಸಿಗುತ್ತದೆ ಅಂತ ನೋಡುವುದು ತುಂಬಾನೇ ಮುಖ್ಯವಾಗಿರುತ್ತದೆ. ಈಗ ಪ್ರತಿಷ್ಠಿತ ಐಐಟಿ ಹೈದರಾಬಾದ್ (ಐಐಟಿಎಚ್) ಹೊಸದಾಗಿ ಪ್ರಾರಂಭಿಸಿದ ಸಮ್ಮರ್ ಅಂಡರ್ ಗ್ರ್ಯಾಜುವೇಟ್ ರಿಸರ್ಚ್ ಎಕ್ಸ್ಪೋಷರ್ (ಎಸ್‌ಯುಆರ್‌ಇ) ಯೋಜನೆಯಡಿ ಈ ವರ್ಷ ಪದವಿಪೂರ್ವ ವಿದ್ಯಾರ್ಥಿಗಳಿಗೆ (ಐಐಟಿಎಚ್ ಅಲ್ಲದ) 150 ಇಂಟರ್ನ್ಶಿಪ್ ಗಳನ್ನು ನೀಡಲಿದೆ.
ಎಲ್ಲಾ 18 ಇಲಾಖೆಗಳಲ್ಲಿ ಅರ್ಜಿ ಪ್ರಕ್ರಿಯೆಯು ಐಐಟಿಎಚ್ ವೆಬ್ಸೈಟ್ iith.ac.in/research/SURE/ ನಲ್ಲಿ ಈಗಾಗಲೇ ಪ್ರಾರಂಭವಾಗಿದೆ.
ಐಐಟಿಎಚ್ ನ ಇಂಟರ್ನ್ಶಿಪ್ ಗೆ ಅರ್ಜಿಗಳನ್ನು ಸಲ್ಲಿಸಬಹುದಂತೆ..
ಐಐಟಿಎಚ್ ನಲ್ಲಿ ಈ ಇಂಟರ್ನ್ಶಿಪ್ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಲು ಫೆಬ್ರವರಿ 22 ಕೊನೆಯ ದಿನವಾಗಿದೆ. ಇಂಟರ್ನ್ಶಿಪ್ ಅವಧಿ ಮೇ 15 ರಿಂದ ಪ್ರಾರಂಭವಾಗುತ್ತದೆ ಮತ್ತು ಇದು ಎರಡು ತಿಂಗಳವರೆಗೆ ಎಂದರೆ ಜುಲೈ 14 ರವರೆಗೆ ಇರುತ್ತದೆ.
ಈ ಇಂಟರ್ನ್ಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಎರಡು ತಿಂಗಳಿಗೆ 15,000 ರೂಪಾಯಿಗಳ ಏಕೀಕೃತ ಗೌರವಧನವನ್ನು ನೀಡಲಾಗುವುದು. ಇಂಟರ್ನ್ಶಿಪ್ ಗೆ ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ಕ್ಷೇತ್ರದಲ್ಲಿನ ವ್ಯಕ್ತಿಗಳ ಶೈಕ್ಷಣಿಕ ಸಾಧನೆಗಳು ಮತ್ತು ಸಂಶೋಧನಾ ಒಲವಿನ ಆಧಾರದ ಮೇಲೆ ಇಲಾಖಾವಾರು ಮಾಡಲಾಗುತ್ತದೆ.
ಇದನ್ನೂ ಓದಿ: IGNOU: ಅಡ್ಮಿಷನ್ ದಿನಾಂಕ ಮುಂದೂಡಿಕೆ, ಅವಧಿ ವಿಸ್ತರಣೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಈ ಇಂಟರ್ನ್ಶಿಪ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಎರಡನೇ ಮತ್ತು ಮೂರನೇ ವರ್ಷದ ಬಿಟೆಕ್ ಮತ್ತು ಬಿಡಿಇ ವಿದ್ಯಾರ್ಥಿಗಳು ಮತ್ತು ಮೂರನೇ ಮತ್ತು ನಾಲ್ಕನೇ ವರ್ಷದ ಇಂಟಿಗ್ರೇಟೆಡ್ ಎಂಎಸ್‌ಸಿ ಅಥವಾ ಮೊದಲ ವರ್ಷದ ಎಂಎಸ್‌ಸಿ ಮತ್ತು ಎಂಎ ವಿದ್ಯಾರ್ಥಿಗಳು ಮಾತ್ರ ಇಂಟರ್ನ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಇಂಟರ್ನ್ಶಿಪ್ ಅವಕಾಶದ ಬಗ್ಗೆ ಏನ್ ಹೇಳ್ತಾರೆ ನಿರ್ದೇಶಕರು?
ಎಸ್‌ಯುಆರ್‌ಇ ಯೋಜನೆಯ ಮಹತ್ವವನ್ನು ವಿವರಿಸಿದ ಐಐಟಿಎಚ್ ನಿರ್ದೇಶಕ ಪ್ರೊ.ಬಿ.ಎಸ್.ಮೂರ್ತಿ ಅವರು "ಐಐಟಿಎಚ್ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಆವಿಷ್ಕಾರ ಮತ್ತು ನಾವೀನ್ಯತೆಯ ಮನೋಭಾವವನ್ನು ಉತ್ತೇಜಿಸುತ್ತದೆ.
ಈ ಯೋಜನೆಯು ನಮ್ಮ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉದ್ದೇಶವಾಗಿದೆ. ಐಐಟಿಎಚ್ ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಒಡ್ಡಿಕೊಳ್ಳುವುದು ದೇಶದ ಉದ್ಯಮಶೀಲತಾ ಸೂಚ್ಯಂಕಕ್ಕೆ ಉತ್ತೇಜನ ನೀಡುತ್ತದೆ ಮತ್ತು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಹೇಳಿದರು.
ಯುಜಿ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆಯನ್ನು ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದರ ಜೊತೆಗೆ ಪಿಎಚ್‌ಡಿ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಪ್ರಾಯೋಜಿತ ಸಂಶೋಧನೆ ಮತ್ತು ಸಲಹಾ - ಎಸ್ಆರ್‌ಸಿ ವಿಭಾಗದ ಡೀನ್ ಪ್ರೊ.ಚಂದ್ರ ಎಸ್ ಶರ್ಮಾ ಹೇಳಿದರು.
ಇಂಟರ್ನ್ಶಿಪ್ ನೀಡುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯ
ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಉತ್ಕೃಷ್ಟತೆಯ ವಿಭಾಗ ಸಹ ಬಿಇ ಮತ್ತು ಎಂಇ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು.
ಬಿಇ ಮತ್ತು ಎಂಇ ಕೋರ್ಸ್ ಗಳ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುತ್ತಿದೆ. ವೇಳಾಪಟ್ಟಿ ಇತ್ಯಾದಿಗಳ ಬಗ್ಗೆ ವಿವರಗಳಿಗಾಗಿ https://coe-aiml.netlify.app/ ವೆಬ್ಸೈಟ್ ಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ