ರ್‍ಯಾಗಿಂಗ್ (Ragging) ಎಂಬ ಪಿಡುಗು ಇಂದು ನಿನ್ನೆಯದಲ್ಲ, ಹಲವು ಸಮಯದಿಂದ ಇದು ಅಲ್ಲಲ್ಲಿ ವಿದ್ಯಾಸಂಸ್ಥೆಗಳಲ್ಲಿ (Education Institute) ರೂಢಿಯಲ್ಲಿದೆ ಎಂದರೆ ತಪ್ಪಾಗದು. ಇದು ನಿಜಕ್ಕೂ ಒಂದು ಅಮಾನವೀಯ ಹಾಗೂ ನಾಚಿಕೆಗೇಡಿನ ಕೃತ್ಯವಾಗಿದ್ದು ಹಲವು ಮುಗ್ಧ ಹುಡುಗರ (Students) ಪ್ರಾಣವನ್ನೇ ಬಲಿ ಪಡೆದಿದೆ. ರ್‍ಯಾಗಿಂಗ್ ಇಂದು ಶಿಕ್ಷಾರ್ಹ ಅಪರಾಧವಾಗಿದ್ದು ಎಲ್ಲೆಡೆ ಆ ಬಗ್ಗೆ ಸಾಕಷ್ಟು ಅರಿವನ್ನೂ ಸಹ ಮೂಡಿಸಲಾಗಿದೆ.
ಅದಾಗ್ಯೂ ಇಂದಿಗೂ ದೇಶದ ಕೆಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್ ಎಂಬ ಪೆಡಂಭೂತ ಆಗಾಗ ಕಾಣಿಸುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಉತ್ತರಾಖಂಡ್ ರಾಜ್ಯದ ಹೈಕೋರ್ಟ್ ರಾಜ್ಯಕ್ಕೆ ಹಾಗೂ ಅದರೊಳಗಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಮಹಾ ಪಿಡುಗನ್ನು ಬುಡ ಸಮೇತ ತೆಗೆದು ಹಾಕುವಂತೆ ಹಾಗೂ ಅದಕ್ಕಾಗಿ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದೆ.
ವಿಶೇಷ ತೀರ್ಪು ನೀಡಿದ ನ್ಯಾಯಾಲಯ
ರ್‍ಯಾಗಿಂಗ್ ಗಂಭೀರತೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಮು.ನ್ಯಾ. ವಿಪಿನ್ ಸಂಘಿ ಹಾಗೂ ನ್ಯಾ. ಅಲೋಕ್ ಕುಮಾರ್ ವರ್ಮಾ ಅವರಿದ್ದ ವಿಭಾಗೀಯ ಪೀಠವು, "ತಾವು ಹಿಂದೊಮ್ಮೆ ಅನುಭವಿಸಿದ್ದ ರ್‍ಯಾಗಿಂಗ್ ನ ಕಹಿ ಅನುಭವದ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಂತೆ ಪ್ರತಿ ಬ್ಯಾಚಿನ ಹುಡುಗರು ತಾವು ಮುಂದೆ ಹೋದಂತೆ ತಮ್ಮ ಕಿರಿಯರ ಮೇಲೆ ಈ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ ಎಂದೆನಿಸುವಂತಿದೆ" ಎಂಬ ಅಭಿಪ್ರಾಯ ಪಟ್ಟಿದೆ.
ಕಳೆದ ವರ್ಷ, 06.03.2022 ರಂದು ಹಾಲ್ದ್ವಾನಿಯ ಸುಶಿಲಾ ತಿವಾರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ, ಹಲವು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ರ್‍ಯಾಗ್ ಮಾಡಲಾಗಿತ್ತು ಹಾಗೂ ಈ ಬಗ್ಗೆ ಟೈಮ್ಸ್ ಮಾಧ್ಯಮದಲ್ಲಿ ವಿಸ್ತೃತವಾದ ವರದಿಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ನ್ಯಾಯಾಲಯದಲ್ಲಿ ಹಾಕಲಾಗಿತ್ತು.
ಅರ್ಜಿದಾರರು ಈ ಬಗ್ಗೆ ನ್ಯಾಯಾಲಯವನ್ನು ಕುರಿತು, ಈ ಪಿಡುಗನ್ನು ಶಾಶ್ವತವಾಗಿ ತೊಡೆಹಾಕುವಂತೆ ಹಾಗೂ ಮತ್ತೆ ಭವಿಷ್ಯದಲ್ಲಿ ಎಂದು ಪುನರಾವರ್ತಿತವಾಗದಂತೆ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ಸೂಚಿಸಬೇಕೆಂದು ಕೇಳಿಕೊಂಡಿದ್ದರು.
ಇದಕ್ಕೆ ಸಂಬಂಧಿಸಿದಂಯೆ ಉಚ್ಛ ನ್ಯಾಯಪೀಠವು, ಯುಜಿಸಿಯು ರ್‍ಯಾಗಿಂಗ್ ಸಂಬಂಧಿಸಿದಂತೆ ರೂಪಿಸಿದ ನಿಯಮಗಳನ್ನು ವಿಶ್ಲೇಷಿಸಿದ್ದಲ್ಲದೆ ಈ ಹಿಂದೆ, ಕೇರಳ ವಿವಿ ಹಾಗೂ ಕೇರಳ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಇತರರ ಕೌನ್ಸಿಲ್ ಮಧ್ಯದ ಹಾಗೂ ವಿಶ್ವ ಜಾಗೃತಿ ಮಿಷನ್ ಮತ್ತು ಕೇಂದ್ರ ಸರ್ಕಾರ ಹಾಗೂ ಇತರರು ಮಧ್ಯದ ಪ್ರಕರಣಗಳಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಗಮನಿಸಿದೆ.
ಈ ಎಲ್ಲ ಪ್ರಕರಣಗಳನ್ನು ಅವಲೋಕಿಸಿದ ನಂತರ ನ್ಯಾಯಪೀಠವು ರ್‍ಯಾಗಿಂಗ್ ಅನ್ನು ತೊಡೆದು ಹಾಕುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾದ ನಿಯಮ 3 ರ ಅನುಸಾರ ಇದಕ್ಕೆ ಬಾಧ್ಯಸ್ಥರು ಆಯಾ ಸಂಸ್ಥೆಗಳ ಮುಖ್ಯಸ್ಥರು ಎಂದು ಕಂಡುಕೊಂಡಿದೆ. ಹಾಗಾಗಿ ಈ ವಿಷಯಕ್ಕೆ ಪೀಠವು ಹೆಚ್ಚಿನ ಒತ್ತು ನೀಡಿದೆ.
ಈ ಬಗ್ಗೆ ನ್ಯಾಯಪೀಠವು ಪ್ರತಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ರ್‍ಯಾಗಿಂಗ್ ಸಮಿತಿಯನ್ನು ರಚಿಸುವುದು ಹಾಗೂ ಅದನ್ನು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದವರು ಮುನ್ನಡಸುವುದು ಎಂದಿದೆ.
ಸರ್ಕಾರಕ್ಕೆ ಆದೇಶ
ಅಲ್ಲದೆ ಆ ಸಮಿತಿಯೊಳಗೆ ನಾಗರಿಕ ಸಮಾಜ, ಪೊಲೀಸ್ ಆಡಳಿತ, ಸ್ಥಳೀಯ ಮಾಧ್ಯಮ, ಯುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆಗಳು, ಬೋಧನಾ ವಲಯ ಹಾಗೂ ಹೊಸ ವಿದ್ಯಾರ್ಥಿಗಳ ಪೋಷಕರ ವಲಯದಿಂದ ಒಬ್ಬೊಬ್ಬ ಪ್ರತಿನಿಧಿಗಳು ಇರಬೇಕೆಂದು ನ್ಯಾಯಪೀಠ ಹೇಳಿದೆ.
ಇದಿಷ್ಟಲ್ಲದೆ ಕೋರ್ಟ್, ಪ್ರತಿ ವಿವಿ ರ್‍ಯಾಗಿಂಗ್ ಅನ್ನು ಮಾನಿಟರ್ ಮಾಡುವ ಒಂದು ಘಟಕವನ್ನು ಹೊಂದಿರಬೇಕಾಗಿದ್ದು ಅದು ಆ ವಿವಿಯಡಿಯಲ್ಲಿ ಬರುವ ಎಲ್ಲ ಕಾಲೇಜುಗಳೊಂದಿಗೆ ಈ ಬಗ್ಗೆ ಸಂವಹನ ನಡೆಸುತ್ತಿರಬೇಕು ಹಾಗೂ ನಿಗಾವಹಿಸಬೇಕು ಎಂದು ಹೇಳಿದೆ.
ಇನ್ನು ರಾಜ್ಯಕ್ಕೂ ಸಹ ಈ ಬಗ್ಗೆ ಕೋರ್ಟ್ ನಿರ್ದೇಶನ ನೀಡಿದೆ. ಆ ಪ್ರಕಾರವಾಗಿ ರಾಜ್ಯವು ತನ್ನಲ್ಲಿರುವ ಪದವಿ ಹಾಗೂ ಸ್ನಾತಕೊತ್ತರ ಶಿಕ್ಷಣ ಒದಗಿಸುವ ಎಲ್ಲ ಶಿಕ್ಷಣ ಸಂಸ್ಥೆಗಳ ಆ್ಯಂಟಿ ರ್‍ಯಾಗಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಹೊಂದಿರುವ ಸಮಿತಿಗಳ ಹಾಗೂ ಆ ಕಾಲೇಜುಗಳ ಎಲ್ಲ ವಿವರಗಳನ್ನು ಅಫಿಡವಿಟ್ ನಲ್ಲಿ ದಾಖಲಿಸಿಡಬೇಕು ಎಂದಾಗಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟ; UGC ಮುಖ್ಯಸ್ಥ ಜಗದೇಶ್ ಕುಮಾರ್
ಅಲ್ಲದೆ, ರಾಜ್ಯವು ಆ್ಯಂಟಿ ರ್‍ಯಾಗಿಂಗ್ ಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಆಯೋಗ ಹೊಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸಬೇಕು ಹಾಗೂ ಅದಿಲ್ಲದೆ ಇದ್ದರೆ ಮುಂದಿನ ಎರಡು ವಾರಗಳಲ್ಲಿ ಅದನ್ನು ಸ್ಥಾಪಿಸಬೇಕೆಂದು ಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ