ನಾಗ ಚೈತನ್ಯ (Naga Chaitanya) ಅವರ ಸಿನಿಮಾ (Cinema) ಕಸ್ಟಡಿ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರತಂಡ ಈಗಾಗ್ಲೇ ಚಿತ್ರದ ಭರ್ಜರಿ ಪ್ರಚಾರಕ್ಕೂಇಳಿದಿದೆ. ಮೇ 12ಕ್ಕೆ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ಟೀಸರ್ ಅನ್ನು ತೆಲಂಗಾಣದ ಪ್ರಸಿದ್ಧ ರಾಜಕಾರಣಿ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಿ. ಮಲ್ಲಾ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಈ ವೇಳೆ ಸಿ. ಮಲ್ಲಾ ರೆಡ್ಡಿ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಗೆ (College Students) ಭರ್ಜರಿ ಆಫರ್ ಕೊಟ್ಟಿದ್ದಾರೆ. ತೆಲಂಗಾಣದ ಪ್ರಸಿದ್ಧ ರಾಜಕಾರಣಿ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಿ. ಮಲ್ಲಾ ರೆಡ್ಡಿ ಅವರು ರಾಜ್ಯದ ಖ್ಯಾತ ಶಿಕ್ಷಣತಜ್ಞ ಮತ್ತು ಪ್ರಮುಖ ಉದ್ಯಮಿ.
ಹಾಗೆಯೇ ಹಲವಾರು ಎಂಜಿನಿಯರಿಂಗ್ ಕಾಲೇಜುಗಳ ಸಂಸ್ಥಾಪಕರಾಗಿರುವ ಇವರು ಹೈದರಾಬಾದ್‌ನ ಮಲ್ಲಾ ರೆಡ್ಡಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರು ಕೂಡ ಹೌದು. ಇವರ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 65 ಸಾವಿರ ವಿದ್ಯಾರ್ಥಿಗಳು ವಿವಿಧ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟ್ರೀಮ್‌ಗಳ ಅಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮಲ್ಲಾರೆಡ್ಡಿ ಸಂಸ್ಥೆಗಳ ಕಾರ್ಯಕ್ರಮದಲ್ಲಿ ʻಕಸ್ಟಡಿʼ ಟೀಸರ್ ರಿಲೀಸ್
ಇತ್ತಿಚೆಗೆ ಮಲ್ಲಾರೆಡ್ಡಿ ಸಂಸ್ಥೆಗಳ 2023 ರ ವಾರ್ಷಿಕ ಕಾಲೇಜು ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಮಾರಂಭಕ್ಕೆ ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.ನಾಗ ಚೈತನ್ಯ ಕೂಡ ತಮ್ಮ ಮುಂದಿನ ʻಕಸ್ಟಡಿʼ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದು, ಇದೇ ವೇಳೆ ವೇದಿಕೆಯಲ್ಲಿ ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಲಾಯಿತು.
ಇದನ್ನೂ ಓದಿ: Bengaluru Majestic: ಇಷ್ಟು ಮಳೆಯಾದ್ರೆ ಸಾಕು, ಮೆಜೆಸ್ಟಿಕ್ ಜಲಾವೃತಗೊಳ್ಳುತ್ತೆ!
ಈ ಸಂದರ್ಭದಲ್ಲಿ ಶಿಕ್ಷಣತಜ್ಞ ಮಲ್ಲಾ ರೆಡ್ಡಿ ಮಾತನಾಡಿ ಚೈತನ್ಯ ಅವರ ತಾತ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ನೆನಪಿಸಿಕೊಂಡರು. ಅವರೊಬ್ಬ ಹೆಸರಾಂತ ಕಲಾವಿದ, ತಾತನ ಪರಂಪರೆಯನ್ನು ಮೊಮ್ಮಗ ನಾಗ ಚೈತನ್ಯ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಅಕ್ಕಿನೇನಿ ಕುಟುಂಬವನ್ನು ಹಾಡಿ ಹೊಗಳಿದರು.
"ಕ್ಲಾಸ್‌ಗೆ ಬಂಕ್ ಮಾಡಿ ಕಸ್ಟಡಿ ಸಿನಿಮಾ ನೋಡಿ"
ಸಿನಿಮಾ ಟೀಸರ್ ಅನಾವರಣ ಮಾಡಲು ನಾಗ ಚೈತನ್ಯ ಅವರು ತಮ್ಮ ಕಾಲೇಜು ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡಿದ್ದು, ಇನ್ನೂ ಸಂತೋಷದ ವಿಚಾರ ಎಂದು ಮಾತು ಮುಂದುವರೆಸಿದ ಮಲ್ಲಾ ರೆಡ್ಡಿಯವರು ಈ ಸಂದರ್ಭದಲ್ಲಿ ಒಂದು ಘೋಷಣೆಯನ್ನು ಸಹ ಮಾಡಿದರು.
ಮೇ 12 ರಂದು ‘ಕಸ್ಟಡಿ’ ರಿಲೀಸ್ ಆಗುತ್ತಿರುವ ಕಾರಣ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುತ್ತಿದ್ದೇನೆ, ಆ ದಿನ ಪರೀಕ್ಷೆ ಇದ್ದರೆ ಅವುಗಳನ್ನು ಮುಂದೂಡುತ್ತೇನೆ.
ವಿಶೇಷ ತರಗತಿಗಳು ಇದ್ದರೆ ಕಾಲೇಜಿಗೆ ಬಂಕ್ ಮಾಡಿ ಮತ್ತು ನಾಗ ಚೈತನ್ಯ ಅವರ ಚಲನಚಿತ್ರವನ್ನು ವೀಕ್ಷಿಸಬೇಕೆಂದು ತಮ್ಮ ವಿದ್ಯಾರ್ಥಿಗಳಿಗೆ ನೇರವಾಗಿ ಹೇಳಿಕೊಂಡಿದ್ದಾರೆ.
ಸಿ. ಮಲ್ಲಾ ರೆಡ್ಡಿ ಬೇರೆ ರಾಜಕಾರಣಿ, ಉದ್ಯಮಿಗಳಿಗೆ ಹೋಲಿಸಿದರೆ ಕೊಂಚ ಭಿನ್ನವಾಗಿದ್ದು, ಹಾಸ್ಯ ಮತ್ತು ಶಾಂತ ಸ್ವಭಾವದವರು. ಹಿಂದೊಮ್ಮೆ ನಾನು ಇಷ್ಟೇಲ್ಲಾ ಸಕ್ರಿಯವಾಗಿರುವುದು ಯುವ ಸಮೂಹದ ಜೊತೆ ನನ್ನನ್ನು ನಾನು ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಅಂತಾನೂ ಹೇಳಿದ್ದರು.
ಒಟ್ಟಾರೆ ಈ ಆಫರ್ ಘೋಷಣೆ ಆಗುತ್ತಿದ್ದಂತೆಯೇ ಕಾಲೇಜಿನ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ಆದರೆ ಪೋಷಕರು ಸೇರಿ ಕೆಲವರು ಮಕ್ಕಳನ್ನು ಇದಕ್ಕೇನಾ ಕಾಲೇಜಿಗೆ ಕಳುಹಿಸುವುದು ಎಂದು ಗರಂ ಆಗಿದ್ದಾರೆ
ಮೇ 12ಕ್ಕೆ ಬಿಡುಗಡೆ
‘ಕಸ್ಟಡಿ’ 2023 ರ ತೆಲುಗು-ತಮಿಳು ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ನಾಗ ಚೈತನ್ಯ, ಕೃತಿ ಶೆಟ್ಟಿ, ಅರವಿಂದ್ ಸ್ವಾಮಿ, ಪ್ರಿಯಾಮಣಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಲೆಜೆಂಡರಿ ಇಳಯರಾಜ ಮತ್ತು ಅವರ ಮಗ ಯುವನ್, ಶಂಕರ್ ರಾಜಾ ಇಬ್ಬರೂ ಸಂಗೀತ ಸಂಯೋಜಿಸಿದ್ದಾರೆ ಮತ್ತು ಟಾಲಿವುಡ್ ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಅವರು ಬಂಡವಾಳ ಹೂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ