ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆಗಳಿಗೆ (Marriage) ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಮದುವೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಮದುವೆಗೆ ಬೇಕಾದ ಸೀರೆಗಳನ್ನು ಮತ್ತು ಅನೇಕ ರೀತಿಯ ಡಿಸೈನ್ (Design) ಡಿಸೈನ್ ಆಗಿರುವ ಬಟ್ಟೆಗಳನ್ನು ಖರೀದಿಸುತ್ತಾರೆ. ಅದ್ದೂರಿಯಾಗಿ ಮದುವೆ ಹಿಂದಿನ ದಿನ ದೊಡ್ಡ ಮಟ್ಟದಲ್ಲಿ ಹಣವನ್ನು (Money) ಖರ್ಚು ಮಾಡಿ ಮನೆಗೆ ಲೈಟಿಂಗ್ ಹಾಕಿಸುತ್ತಾರೆ ಮತ್ತು ಮದುವೆ ದಿನ ವರನನ್ನು ಬರಮಾಡಿಕೊಳ್ಳಲು ಅದ್ದೂರಿಯಾಗಿ ಎಲ್ಲಾ ಸಿದ್ದತೆಗಳನ್ನು (Preparation) ಮಾಡಿಸಿಕೊಂಡಿರುತ್ತಾರೆ.
ಒಟ್ಟಿನಲ್ಲಿ ತಮ್ಮ ಬಾಳಿನಲ್ಲಿ ನಡೆಯುವ ಆ ಮದುವೆ ಎಂಬ ಅದ್ದೂರಿ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸಲು ಹಣವನ್ನು ನೀರು ಹರಿದಂತೆ ಖರ್ಚು ಮಾಡುವವರನ್ನು ನಾವು ನೋಡಿರುತ್ತೇವೆ. ಆದರೆ ಕೆಲವರು ಮಾತ್ರ ಮದುವೆಗೆ ದುಂದು ವೆಚ್ಚ ಮಾಡದೆ ಸಿಂಪಲ್ ಆಗಿ ಮದುವೆ ಆಗಬೇಕು ಅಂತ ಹೇಳಿ ಹಾಗೆಯೇ ತುಂಬಾನೇ ಸರಳವಾಗಿ ಮದುವೆ ಆಗಿರುತ್ತಾರೆ. ಇಲ್ಲಿಯೂ ಸಹ ಅಧಿಕಾರಿ ದಂಪತಿಗಳು ಸರಳವಾಗಿ ಮದುವೆಯಾಗಿದ್ದಾರೆ ನೋಡಿ.
ತುಂಬಾನೇ ಸಿಂಪಲ್ ಆಗಿ ಮದುವೆಯಾದ ದಂಪತಿಗಳು
ನಾಗರಿಕ ಸೇವೆಯ ಅಧಿಕಾರಿ ದಂಪತಿಗಳು ಕೇರಳದಲ್ಲಿ ತುಂಬಾನೇ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಶಿವಂ ತ್ಯಾಗಿ ಮತ್ತು ಆರ್ಯ ಆರ್ ನಾಯರ್ ಎಂಬ ದಂಪತಿಗಳು ದುಂದು ವೆಚ್ಚ ಮಾಡದೆ ತಮ್ಮ ಮದುವೆಯನ್ನು ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿಯೇ ಮಾಡಿಕೊಳ್ಳಲು ನಿರ್ಧರಿಸಿದರು. ತಾವು ನಿರ್ಧರಿಸಿದಂತೆಯೇ ಈ ಸುಂದರ ದಂಪತಿಗಳು ತಮ್ಮ ಜೀವನದ ಅತಿ ದೊಡ್ಡ ಸಂಭ್ರಮದ ದಿನದಂದು ಉದಾತ್ತವಾದ ಕೆಲಸ ಮಾಡಲು ನಿರ್ಧರಿಸಿದರು.
ಮದುವೆಯ ದಿನ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಿರ್ಧರಿಸಿದ ದಂಪತಿಗಳು
ತಮ್ಮ ಮದುವೆಯ ದಿನದಂದು ಈ ದಂಪತಿಗಳು ಲಕ್ಷಾಂತರ ಹಣ ಮದುವೆಗೆ ಖರ್ಚು ಮಾಡುವ ಬದಲು 20 ಅನಾಥ ಮಕ್ಕಳ ಶಿಕ್ಷಣವನ್ನು ನೀಡಲು ನಿರ್ಧರಿಸಿದರು. ದಂಪತಿಗಳು ತಮ್ಮ ಮದುವೆಯ ದಿನದಂದು ಇದಕ್ಕಿಂತ ಸಂತೋಷ ತರುವ ಕೆಲಸ ಮಾಡಲು ಸಾಧ್ಯವಿಲ್ಲ ಬಿಡಿ.
ಇದನ್ನೂ ಓದಿ: Exam Tips: ಪೋಷಕರೇ ಕಾಳಜಿವಹಿಸಿ; ಪರೀಕ್ಷಾ ಸಮಯದಲ್ಲಿ ಮಕ್ಕಳ ಊಟ-ತಿಂಡಿ ಈ ರೀತಿ ಇರಲಿ
ಉನ್ನತ ದರ್ಜೆಯ ಅಧಿಕಾರಿಗಳಾಗಿದ್ದರೂ, ದಂಪತಿಯ ಉದಾತ್ತ ನಡೆ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಎಲ್ಲಾ ಭಾಗಗಳಿಂದ ಪ್ರಶಂಸೆಗಳು ಈ ದಂಪತಿಗಳಿಗಾಗಿ ಹರಿದು ಬರುತ್ತಿವೆ ಅಂತ ಹೇಳಬಹುದು. ಅವರು ತಮ್ಮ ಮದುವೆಗೆ ಅದ್ದೂರಿ ವ್ಯವಸ್ಥೆಗಳನ್ನು ಮಾಡಲು ಲಕ್ಷಾಂತರ ಹಣ ಖರ್ಚು ಮಾಡಬಹುದಿತ್ತು, ಆದರೆ ಈ ದಂಪತಿಗಳು 20 ಅನಾಥ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸಲು ನಿರ್ಧರಿಸಿದರು.
ಆರ್ಯ ಅವರ ಹುಟ್ಟೂರಿನಲ್ಲಿದೆಯಂತೆ ಈ ಅನಾಥ ಮಕ್ಕಳ ಮನೆ ‘ಪುಣ್ಯಂ’
ಆರ್ಯ ಅವರ ಹುಟ್ಟೂರಾದ ಕೊಟ್ಟಾಯಂನ ವಾಜೂರ್ ನಲ್ಲಿರುವ ಈ ಅನಾಥ ಮಕ್ಕಳ ಮನೆ 'ಪುಣ್ಯಂ' ನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿ ಹೇಳಿದ್ದಾರೆ. ಅವರ ವಿವಾಹವು ವಿಶೇಷ ವಿವಾಹ ಕಾಯ್ದೆಯ ಪ್ರಕಾರ ಪಂಪಾಡಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯಿತು. ಆದಾಗ್ಯೂ, ಭವ್ಯವಾದ ಮದುವೆಯನ್ನು ಬಯಸಿದ ಅವರ ಕುಟುಂಬಗಳಿಗೆ ಅದನ್ನು ಒಪ್ಪಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ.
ಸಂಬಂಧಿಕರು ಮತ್ತು ಸಾಮಾಜಿಕ ಮಾಧ್ಯಮಗಳು ಅವರ ಬಗ್ಗೆ ವಿಸ್ಮಯಗೊಂಡಿದ್ದರೂ, ಅವರ ಹೆತ್ತವರನ್ನು ಮನವೊಲಿಸುವುದು ನಿಜವಾಗಿಯೂ ಒಂದು ಕಠಿಣವಾದ ಕೆಲಸವಾಗಿತ್ತು. ಅವರು ಅಂತಿಮವಾಗಿ ಆ ದಂಪತಿಗಳ ನಿರ್ಧಾರವನ್ನು ಒಪ್ಪಿಕೊಂಡರು.
ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಬಗ್ಗೆ ಏನ್ ಹೇಳಿದ್ರು ಶಿವಂ
ಶಿವಂ ಅವರು "ಮುಂಬರುವ ವರ್ಷಗಳಲ್ಲಿಯೂ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ವೆಚ್ಚವನ್ನು ಭರಿಸಲು ನಾವು ಸಹಾಯ ಮಾಡುತ್ತೇವೆ. ಈ ಕಾರ್ಯ ಮದುವೆಯ ಸಂದರ್ಭಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ" ಎಂದು ಹೇಳಿದರು. ಮದುವೆಯ ನಂತರ ದಂಪತಿಗಳು ಶೀಘ್ರದಲ್ಲಿಯೇ ತಮ್ಮ ತಮ್ಮ ಕೆಲಸಕ್ಕೆ ಮರಳಿದರು. ಆರ್ಯ ಪ್ರಸ್ತುತ ನಾಗ್ಪುರದಲ್ಲಿ ಭಾರತೀಯ ಕಂದಾಯ ಸೇವೆಗಾಗಿ ತರಬೇತಿ ಪಡೆಯುತ್ತಿದ್ದಾರೆ.
ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ 2020 ರಲ್ಲಿ 113ನೇ ರ್‍ಯಾಂಕ್ ಗಳಿಸುವ ಮೂಲಕ ಅವರು ಸುದ್ದಿಯಲ್ಲಿದ್ದರು. ಮತ್ತೊಂದೆಡೆ, ದೆಹಲಿ ಮೂಲದ ಶಿವಂ ತ್ಯಾಗಿ ಅವರನ್ನು ಭಾರತೀಯ ಅಂಚೆ ಸೇವೆಯ ಅಧೀಕ್ಷಕರಾಗಿ ನೇಮಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ