ಯುಪಿಎಸ್ಸಿ ಪರೀಕ್ಷೆ (UPSC Exam) ಕಬ್ಬಿಣದ ಕಡಲೆಯಾದರೂ ಸಹ ತಾಳ್ಮೆ, ಛಲ, ಶ್ರದ್ಧೆ, ಪರಿಶ್ರಮದಿಂದ ಸುಲಭವಾಗಿ ಜಯಿಸಬಹುದು. ಒಂದಿಷ್ಟು ಸಮಯವನ್ನು ಬೇರೆಯದ್ದಕ್ಕೆ ವ್ಯರ್ಥ ಮಾಡದೇ ಯುಪಿಎಸ್ಸಿ ಪರೀಕ್ಷೆಗೆ ಮೀಸಲಿಟ್ಟರೆ ಸರ್ಕಾರದ ( Indian Government) ಉನ್ನತ ಹುದ್ದೆಯನ್ನು ಏರಬಹುದು. ಕೇಂದ್ರ ಲೋಕಸೇವಾ ಆಯೋಗ ಪ್ರತಿವರ್ಷ ನಾಗರಿಕ ಸೇವೆಗಳಿಗೆ ಪರೀಕ್ಷೆ ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಗೆದ್ದವರು ಐಎಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ, ಐಎಫ್ಎಸ್ ಅಧಿಕಾರಿ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ, ಕಚೇರಿಗಳಲ್ಲಿ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳಾಗಿ (Group A and Group B civil services posts) ಸೇವೆ ಸಲ್ಲಿಸಬಹುದು. ಯುಪಿಎಸ್ಸಿ ಪರೀಕ್ಷೆಯಲ್ಲಿ (The Union Public Service Commission) ಪ್ರಿಲಿಮಿನರಿ ಪರೀಕ್ಷೆ, ಮೇನ್ಸ್, ಸಂದರ್ಶನ ಅಂತಾ ಮೂರು ಮುಖ್ಯ ಘಟ್ಟಗಳಿರುತ್ತವೆ. ಅವುಗಳಲ್ಲಿ ಮೇನ್ಸ್ ಪರೀಕ್ಷೆಯಲ್ಲಿ ಜನರಲ್ ಸ್ಟಡೀಸ್ ಪತ್ರಿಕೆಗೆ ಹೇಗೆ ಉತ್ತರ ಬರೆದು ಉತ್ತಮ ಅಂಕಗಳಿಸುವುದು ಅಂತಾ ನಾವಿಲ್ಲಿ ನೋಡೋಣ.
ಹೇಗಿರುತ್ತೆ ಮೇನ್ಸ್ ಪರೀಕ್ಷೆ?
ಪ್ರಿಲಿಮಿನರಿ ಪರೀಕ್ಷೆ ನಂತರ ಎರಡನೇ ಹಂತದ ಪರೀಕ್ಷೆಯೇ ಮುಖ್ಯ ಪರೀಕ್ಷೆ. ಮುಖ್ಯ ಪರೀಕ್ಷೆಯು 9 ವಿವರಣಾತ್ಮಕ ಮಾದರಿಯ ಪತ್ರಿಕೆಗಳನ್ನು ಒಳಗೊಂಡಿದೆ. 250 ಅಂಕಗಳ 1 ಪ್ರಬಂಧ, ತಲಾ 250 ಅಂಕಗಳ 4 ಸಾಮಾನ್ಯ ಅಧ್ಯಯನ ಪತ್ರಿಕೆಗಳು, ತಲಾ 250 ಅಂಕಗಳ 2 ಐಚ್ಛಿಕ ಪತ್ರಿಕೆಗಳು, ತಲಾ 300 ಅಂಕಗಳ 2 ಭಾಷಾ ಪತ್ರಿಕೆಗಳು ಇರುತ್ತವೆ.
ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಇಂಟರ್ ವ್ಯೂಗೆ ಹಾಜರಾಗುತ್ತಾರೆ. 2022 ರ ಫಲಿತಾಂಶಗಳ ಪ್ರಕಾರ, ಕೇವಲ 19.3 ಪ್ರತಿಶತದಷ್ಟು ಆಕಾಂಕ್ಷಿಗಳು ಎಲ್ಲಾ UPSC ಹಂತಗಳಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಇಂಟರ್ ವ್ಯೂಗಳಿಗೆ ಹಾಜರಾಗಿದ್ದಾರೆ. ಹಾಗಾದರೆ ಮೇನ್ಸ್ನಲ್ಲಿ ಸಾಮಾನ್ಯ ಅಧ್ಯಯನ ಪತ್ರಿಕೆಗೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ತಜ್ಞರು ನೀಡಿದ ಕೆಲ ಸಲಹೆಗಳು ಇಲ್ಲಿವೆ.
ಯುಪಿಎಸ್ಸಿ ಮೇನ್ಸ್ ಪರೀಕ್ಷೆ : ಜನರಲ್ ಸ್ಟಡೀಸ್ ಪೇಪರ್ಗಳಲ್ಲಿ ಉತ್ತಮ ಅಂಕ ಗಳಿಸಲು 7 ತಂತ್ರಗಳು
1. ವಿಷುಯಲ್ ಪ್ರಾತಿನಿಧ್ಯಕ್ಕೆ ಒತ್ತು ಕೊಡಿ
ಕೆಲ ಪ್ರಶ್ನೆಗೆ ತಕ್ಕಂತೆ ಉತ್ತರಗಳನ್ನು ರೇಖಾಚಿತ್ರಗಳು, ಚಾರ್ಟ್ಗಳು, ಗ್ರಾಫ್ಗಳು ಅಥವಾ ಫ್ಲೋಚಾರ್ಟ್ಗಳ ರೂಪದಲ್ಲಿ ನೀಡಿ. ಇದು ಪರೀಕ್ಷಕರಿಗೆ ನಿಮ್ಮ ವಿಷಯದ ಸ್ಪಷ್ಟತೆಯನ್ನು ತೋರಿಸುತ್ತದೆ.
2. PESTLE ವಿಧಾನ
PESTLE ವಿಧಾನವು 7-5-3 ವಿಧಾನಕ್ಕೆ ಸಂಬಂಧಿಸಿದ್ದು, ಪ್ರಶ್ನೆಯನ್ನು ಮುಗಿಸಲು 7 ನಿಮಿಷ, ಕನಿಷ್ಠ 5 ಮುಖ್ಯ ಅಂಶಗಳನ್ನು ಪಟ್ಟಿ ಮಾಡುವುದು ಮತ್ತು ರಾಜಕೀಯ, ಆರ್ಥಿಕ, ಸಾಮಾಜಿಕ, ತಾಂತ್ರಿಕ, ಕಾನೂನು ಮತ್ತು ಪರಿಸರ ಅಂಶಗಳಾದ PESTLE ನಿಂದ ಕನಿಷ್ಠ 3 ವೈವಿಧ್ಯಮಯ ದೃಷ್ಟಿಕೋನಗಳನ್ನು ಬಳಸಿಕೊಂಡು ಉತ್ತರಿಸುವುದು ಎಂದರ್ಥ. ಅಭ್ಯರ್ಥಿಗಳು ಈ ವಿಧಾನವನ್ನು ಉತ್ತರ ಪತ್ರಿಕೆಯಲ್ಲಿ ಅಳವಡಿಸಿಕೊಳ್ಳಬೇಕು.
3. ನಿಮ್ಮ ಅಭಿಪ್ರಾಯಗಳನ್ನು ಪೇಪರ್ನಲ್ಲಿ ಸರಿಯಾಗಿ ಬಿಂಬಿಸಿ
ಕೆಲವು ಪ್ರಶ್ನೆಗಳಿಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ನಿಮಗಿರುವ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಿಂಬಿಸಿ. ನಿಮ್ಮ ಉತ್ತರಗಳು ಯಾವುದೋ ಒಂದು ಪಕ್ಷಕ್ಕೆ, ಪ್ರದೇಶಕ್ಕೆ ಸೀಮಿತವಾಗಿರದಂತೆ ನೋಡಿಕೊಳ್ಳಿ.
4. ಎಲ್ಲಾ ಅಗತ್ಯ ಅಂಶಗಳನ್ನು ಕವರ್ ಮಾಡಿ
ಒಂದು ಪ್ರಶ್ನೆಗೆ ಉತ್ತರ ಬರೆಯುವಾಗ ಅಗತ್ಯ ಅಂಶಗಳನ್ನು ಮರೆಯದೇ ಉಲ್ಲೇಖಿಸಿ. ಅಂದರೆ ಒಂದು ವಿಷಯದ ವೈಶಿಷ್ಟ್ಯಗಳು, ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳನ್ನು ನಮೂದಿಸಬೇಕು.
5. ಸರಿಯಾದ ಫಾರ್ಮ್ಯಾಟ್
ನಿಮ್ಮ ಉತ್ತರವನ್ನು ಒಂದೊಳ್ಳೆಯ ರೀತಿಯಲ್ಲಿ ಚಿತ್ರಿಸಬೇಕು. ಅಂದರೆ ಮುಖ್ಯವಾದ ವಿಷಯಗಳನ್ನು ಹೈಲೈಟ್ ಮಾಡುವುದು ಅಥವಾ ಅದನ್ನು ಅಂಡರ್ಲೈನ್ ಮಾಡುವ ಮೂಲಕ ಹೈಲೈಟ್ ಮಾಡುವುದು, ಇಲ್ಲಾ ಉಪಶೀರ್ಷಿಕೆ ನೀಡುವುದು, ಪ್ಯಾರಾದ ರೂಪದಲ್ಲಿ ಬರೆಯುವುದು.
ಉತ್ತರಗಳನ್ನು ಪಾಯಿಂಟ್ ಮಾಡುವುದು ಹೀಗೆ ಅಚ್ಚುಕಟ್ಟಾಗಿ ಉತ್ತರ ಪತ್ರಿಕೆಯನ್ನು ನೀವು ಪರೀಕ್ಷಕರಿಗೆ ಪ್ರಸ್ತುತ ಪಡಿಸಬೇಕು. ಇದು ಅವರಿಗೆ ನಿಮ್ಮ ಉತ್ತರಗಳನ್ನು ಸುಲಭವಾಗಿ ಓದಲು ಮತ್ತು ಸ್ಪಷ್ಟತೆಯನ್ನು ಪಡೆಯಲು ಸಹಕಾರಿಯಾಗುತ್ತದೆ.
6. ಹಿಂದಿನ ಪೇಪರ್ಗಳು ಮತ್ತು ಮಾಕ್ ಪೇಪರ್ಗಳನ್ನು ಅನ್ವೇಷಿಸಿ
ಯುಪಿಎಸ್ಸಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಕಳೆದ ಐದು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಚೆನ್ನಾಗಿ ರೆಫರ್ ಮಾಡಬೇಕು. ಈ ಹಳೇ ಪೇಪರ್ಗಳು ಪ್ರಶ್ನೆಗಳು ಹೇಗೆ ಬರುತ್ತವೆ, ನಮ್ಮ ತಯಾರಿ ಹೇಗಿರಬೇಕು ಎಂಬುದರ ಬಗ್ಗೆ ಒಂದೊಳ್ಳೆ ದೃಷ್ಟಿಕೋನ ನೀಡುತ್ತದೆ.
ಪ್ರತಿ ವಾರಕ್ಕೆ ಒಮ್ಮೆ ಲಿಖಿತ ಬರವಣಿಗೆಯ ಅಣಕು ಪರೀಕ್ಷೆಗಳನ್ನು ಅಂಟೆಂಡ್ ಮಾಡುವುದು ಸಹ ಉತ್ತಮ ಅಂಕ ಗಳಿಕೆಗೆ ಅಹಕಾರಿಯಾಗಿದೆ. ಇದು ಅಭ್ಯರ್ಥಿಯನ್ನು ಪರೀಕ್ಷೆಗೆ ಸಿದ್ಧಪಡಿಸುತ್ತದೆ ಮತ್ತು ಪರೀಕ್ಷೆಯಲ್ಲಿ ಜಾಗರೂಕರಾಗಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: UPSC Cut Off: ಯುಪಿಎಸ್ಸಿ ಪರೀಕ್ಷೆಯಲ್ಲಿ ಕಟ್ ಆಫ್ ಅನ್ನು ಹೇಗೆ ನಿರ್ಧರಿಸಲಾಗುತ್ತದೆ, ನಿಖರ ಮಾಹಿತಿ ಇಲ್ಲಿದೆ
7. ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚೆಚ್ಚು ತಿಳಿಯಿರಿ
ಪ್ರಚಲಿತ ವಿದ್ಯಮಾನಗಳು UPSC ಪರೀಕ್ಷೆಯ ಅತ್ಯಂತ ನಿರ್ಣಾಯಕ ಭಾಗಗಳಲ್ಲಿ ಒಂದಾಗಿದೆ. ಪ್ರಸ್ತುತ ಟ್ರೆಂಡ್ಗಳೊಂದಿಗೆ ಅಪ್ಡೇಟ್ ಆಗಿರುವುದು ಅಭ್ಯರ್ಥಿಗೆ ಮೇನ್ಸ್ ಪರೀಕ್ಷೆಯಲ್ಲಿ ಉತ್ತರಗಳನ್ನು ಸುಲಭವಾಗಿ ಬರೆಯಲು ಸಹಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ