ಬೆಂಗಳೂರು: ರಾಜ್ಯದ ಎಲ್ಲೆಡೆ ದ್ವಿತೀಯ ಪಿಯುಸಿ (PUC) ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಿದೆ. ಈ ಸಮಯದಲ್ಲಿ ಮೊದಲೇ ನೀಡಲಾಗಿದ್ದ ಸೂಚನೆಯಂತೆ ಹಲವಾರು ವಿದ್ಯಾರ್ಥಿಗಳು (Students) ಸಮವಸ್ತ್ರ ಧರಿಸಿ ಪರೀಕ್ಷೆಗೆ ಬಂದಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂದು ಈ ಹಿಂದೆ ಶಿಕ್ಷಣ (Education) ಸಚಿವರು ಆದೇಶ ಹೊರಡಿಸಿದ್ದರು ಅದರಂತೆ 99 ಪ್ರತಿಶತ ಎಲ್ಲರೂ ನಿಯಮ ಪಾಲಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಇದಕ್ಕೆ ವಿರುದ್ಧವಾಗಿ ಒಂದು ಘಟನೆ ಜರುಗಿದೆ ಈ ಬಗ್ಗೆ ಮಾಹಿತಿ ಇಲ್ಲಿದೆ ಗಮನಿಸಿ.
ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ಕಠಿಣ ನಿಯಮವನ್ನ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೂ ನಗರದ ಮಲ್ಲೇಶ್ವರಂನ ಕಾಲೇಜುವೊಂದರಲ್ಲಿ ದ್ವಿತೀಯ PUC ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿಕೊಂಡು ಪರೀಕ್ಷೆ ಬರೆಯಲು ಬಂದಿದ್ದಾಳೆ ಎಂದು ನ್ಯೂಸ್ ಫಸ್ಟ್ ವರದಿ ಮಾಡಿದೆ.
ಹಿಜಾಬ್ ಕುರಿತ ವಿಚಾರ ಇನ್ನೂ ಕೋರ್ಟ್ನಲ್ಲೇ ಇರುವ ಕಾರಣ ಯಾವ ವಿದ್ಯಾರ್ಥಿಗಳೂ ಸಹ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಆಗಮಿಸುವಂತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮವಸ್ತ್ರವನ್ನು ನೀಡಿರುತ್ತಾರೆ ಆದ್ದರಿಂದ ಅದನ್ನೇ ಧರಿಸಿ ಬರಬೇಕು ಎಂದು ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: PUC Exam: ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ: ಬಿ ಸಿ ನಾಗೇಶ್
ನೀಡಿರುವ ಸೂಚನೆಯನ್ನು ಗಮನಿಸಿದರೂ ಅದನ್ನು ವಿರೋಧಿಸಿ ಹಿಜಾಬ್ ಹಾಕಿ ಬಂದಿರುವ ಕಾರಣ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಅನುಮತಿ ನೀಡಿಲ್ಲ. ಆಕೆ ಹಿಜಾಬ್ ಧರಿಸಿ ಬಂದಿರುವುದನ್ನು ಗಮನಿಸಿದ ಪ್ರಾಂಶುಪಾಲರು ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ ಪರೀಕ್ಷೆ ಶುರುವಾಗಲು ಕೆಲವೇ ಸಮಯವಿದ್ದರೂ ಆ ವಿದ್ಯಾರ್ಥಿನಿ ಹಿಜಾಬ್ ತೆಗೆಯದೇ ಹಾಗೇ ಕುಳಿತ್ತಿದ್ದಳು ಎಂದು ತಿಳಿದು ಬಂದಿದೆ.
ಪರೀಕ್ಷೆ ಆರಂಭವಾಗಲು ಇನ್ನೇನು ಎರಡು ನಿಮಿಷ ಮಾತ್ರ ಬಾಕಿ ಉಳಿದಿದೆ ಎನ್ನುವಾಗ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಹೋಗಿದ್ದಾಳೆ ಹಿಜಾಬ್ ತೆಗೆದ ಕಾರಣ ಪರೀಕ್ಷೆ ಬರೆಯಲು ಅನುಮತಿ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ತಿಳಿಸಿದ್ದ ಮಾಹಿತಿ ವಿವರ
ಮಾ.9 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವಂತಿಲ್ಲ. ಪ್ರತಿಯೊಬ್ಬರು ಶಾಲಾ ಸಮವಸ್ತ್ರ ಧರಿಸಿ ಬರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.ಸದ್ಯದಲ್ಲೇ ಪಿಯುಸಿ ಪರೀಕ್ಷೆ ನಡೆಯಲಿದೆ ಈ ಪರೀಕ್ಷೆ ಸಂದರ್ಭದಲ್ಲಿ ಯಾರೂ ಕೂಡಾ ಹಿಜಾಬ್ ಧರಿಸಿ ಪರೀಕ್ಷೆ ಬರೆಯಬಾರದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದರು.
ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.‘ಹಿಜಾಬ್ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ, ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಅನುಮತಿಸುವ ಪ್ರಶ್ನೆಯೇ ಇಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.
ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯ ಭಾಗ ಅಲ್ಲ ಎಂದು ಈ ಹಿಂದೆ ಕೋರ್ಟ್ ತಿಳಿಸಿದೆ ಮತ್ತೆ ಈ ವಿಚಾರ ಬೇಡ ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ವಿದ್ಯಾರ್ಥಿಗಳೆಲ್ಲರೂ ನಿಗದಿ ಪಡಿಸಿರುವಂತ ಸಮವಸ್ತ್ರ ಧರಿಸಿಯೇ ಹಾಜರಾಗ ಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ