ಶಿಕ್ಷಣ(Education) ಎಂಬುದು ನಿಸ್ಸಂಶಯವಾಗಿ ಮಕ್ಕಳ ಭವಿಷ್ಯವನ್ನು(Children Future) ಉಜ್ವಲಗೊಳಿಸುವ ಕ್ರಮ. ಭಾರತದಲ್ಲಿ ಪ್ರತಿ ಮಕ್ಕಳಿಗೂ ಶಿಕ್ಷಣದ ಹಕ್ಕಿದೆ. ಅಲ್ಲದೆ ಆಯಾ ರಾಜ್ಯಗಳ ಸರ್ಕಾರಗಳೂ ಸಹ ಎಲ್ಲ ಮಕ್ಕಳಿಗೂ ಶಿಕ್ಷಣ ಒದಗಿಸುವ ಉದ್ದೇಶದಿಂದ ಸಾವಿರಾರು ಶಾಲೆಗಳನ್ನು ತೆರೆದಿವೆ. ಈ ಸಲ ಮಂಡಿಸಲಾಗಿರುವ ಕೇಂದ್ರ ಬಜೆಟ್ ನಲ್ಲಿ(Union Budget) ಕೇಂದ್ರವು ಶಿಕ್ಷಣ ಕ್ಷೇತ್ರಕ್ಕಾಗಿ 1.13 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು ಇದೊಂದು ಉತ್ತಮ ನಡೆಯಾಗಿದೆ ಅಂತಾನೇ ಹೇಳಬಹುದು. ಕಳೆದ ಬಾರಿಗೆ ಹೋಲಿಸಿದರೆ ಇದು ಸಾಕಷ್ಟು ಏರಿಕೆಯಾಗಿದೆ ಅಂತ ಹೇಳಬಹುದು.
ಆದರೆ ಇತ್ತೀಚೆಗೆ ಪಾರ್ಲಿಯಾಮೆಂಟಿನಲ್ಲಿ ನಡೆದ ಪ್ರಶ್ನೋತ್ತರಗಳನ್ನು ಗಮನಿಸಿದಾಗ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ಹಾಗೂ ಗುಣಮಟ್ಟದ ಅಂಶಗಳನ್ನು ಅನುಷ್ಠಾನಗೊಳಿಸಬೇಕಾದ ಅವಶ್ಯಕತೆ ಎದ್ದು ಕಾಣಿಸುತ್ತದೆ. ವಿದ್ಯಾರ್ಥಿಗಳು:ಶಿಕ್ಷಕ ಅನುಪಾತ ದರ, ಒಬ್ಬರೇ ಶಿಕ್ಷಕರಿರುವ ಶಾಲೆಗಳು ಇತ್ಯಾದಿ ಗಮನಿಸಿದಾಗ ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಆಗಬೇಕಾಗಿರುವುದು ಅನಿವಾರ್ಯವಾಗಿದೆ.
ಒಂದೆಡೆ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದರೆ ಇನ್ನೊಂದೆಡೆ ದೇಶದ ಹಲವು ಶಾಲೆಗಳಲ್ಲಿ ಇಂದಿಗೂ ಇಂಟರ್ನೆಟ್ ಸಂಪರ್ಕವೇ ದುರ್ಲಭವಾಗಿರುವಂತಹ ಪರಿಸ್ಥಿತಿಯಿದೆ. ಇನ್ನೂ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವಂತಹ ರಾಜ್ಯಗಳು ಅಥವಾ ಹೆಚ್ಚಿನ ಜನಸಾಂದ್ರತೆಯಿರುವಂತಹ ರಾಜ್ಯಗಳಲ್ಲೇ ಶಿಕ್ಷಕ-ವಿದ್ಯಾರ್ಥಿ ಅನುಪಾತದ ದರ ಬಲು ಕಳಪೆ ಮಟ್ಟದಲ್ಲಿರುವುದನ್ನು ಕಾಣಬಹುದಾಗಿದೆ.
ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ಭಾರತದಲ್ಲಿರುವ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಒಂದಾಗಿರುವುದಲ್ಲದೆ ಶಿಕ್ಷಕ-ವಿದ್ಯಾರ್ಥಿ ಅನುಪಾತದ ದರ ಕುಸಿದಿರುವ ಹಾಗೂ ಬಡತನದ ಕಾವು ಆವರಿಸಿರುವ ರಾಜ್ಯಗಳೂ ಆಗಿವೆ. ಇದಕ್ಕೆ ವಿರುದ್ಧ ಎಂಬಂತೆ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತದ ದರವು ಉತ್ತಮವಾಗಿರುವುದನ್ನು ಗಮನಿಸಬಹುದಾಗಿದೆ.
ಇದನ್ನೂ ಓದಿ: Expensive Schools in India: ದೇಶದ ಅತ್ಯಂತ ದುಬಾರಿ ಶಾಲೆಗಳಿವು; ಇಲ್ಲಿನ ಫೀಸ್ ಕೇಳಿದ್ರೆ ಹುಬ್ಬೇರಿಸೋದು ಪಕ್ಕಾ
ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ಕಳಪೆ ವಿದ್ಯಾರ್ಥಿ-ಶಿಕ್ಷಕ ಅನುಪಾತ ದರ ಹೊಂದಿರುವಂತಹ ಹರಿಯಾಣ, ಕೇಂದ್ರಾಡಳಿತ ಪ್ರದೇಶ, ಪ.ಬಂಗಾಳ ಹಾಗೂ ದೆಹಲಿಯಂತಹ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಾಗಿದೆ.
ಒಬ್ಬರೇ ಶಿಕ್ಷಕರಿರುವ ಶಾಲೆಗಳ ಪ್ರಮಾಣ
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಒಟ್ಟು 8 ಪ್ರತಿಶತದಷ್ಟು ಶಾಲೆಗಳು ಒಬ್ಬರೇ ಶಿಕ್ಷಕರನ್ನು ಹೊಂದಿರುವುದಾಗಿ ಅಂಕಿಅಂಶಗಳು ಹೇಳುತ್ತವೆ. ಮಧ್ಯಪ್ರದೇಶ ರಾಜ್ಯವೊಂದರಲ್ಲೇ 16000 ಕ್ಕಿಂತಲೂ ಹೆಚ್ಚಿನ ಶಾಲೆಗಳು ಒಬ್ಬ ಶಿಕ್ಷಕರನ್ನಷ್ಟೇ ಹೊಂದಿವೆ ಎನ್ನಲಾಗಿದೆ. ಆದಾಗ್ಯೂ ಇಲ್ಲಿನ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕ ಅನುಪಾತದ ದರ 25 ಎಂದಾಗಿದ್ದು ಇದು RTE Act ನಲ್ಲಿ ನಿಗದಿಪಡಿಸಲಾಗಿರುವ ಅನುಪಾತದ ದರಕ್ಕಿಂತಲೂ ಉತ್ತಮ ಎನ್ನಬಹುದಾಗಿದೆ.
ಇನ್ನು ಇತರೆ ರಾಜ್ಯವಾರು ಲೆಕ್ಕ ಹಾಕಿದಾಗ ಕೇರಳ ರಾಜ್ಯವು ಅತಿ ಕಡಿಮೆ ಸಂಖ್ಯೆಯ ಒಬ್ಬರೆ ಶಿಕ್ಷಕರಿರುವ ಶಾಲೆಗಳನ್ನು ಹೊಂದಿದ್ದು ಆ ಶಾಲೆಗಳ ಸಂಖ್ಯೆ 310 ಆಗಿದೆ.
ಶಾಲೆಗಳು ಹಾಗೂ ಇಂಟರ್ನೆಟ್ ಸಂಪರ್ಕ
ಈಗ ಇಂಟರ್ನೆಟ್ ಎನ್ನುವುದು ಕಲಿಕೆಯನ್ನು ಸುಧಾರಿಸುವ ಹಾಗೂ ಕೌಶಲ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದ್ದು ಪ್ರತಿ ಶಾಲೆಗಳಿಗೂ ಇಂಟರ್ನೆಟ್ ಸಂಪರ್ಕ ಇರಬೇಕೆಂದು ಅಪೇಕ್ಷಿಸಲಾಗಿದೆ. ಆದಾಗ್ಯೂ 1/4 ಕ್ಕಿಂತಲೂ ಕಡಿಮೆ ಪ್ರಮಾಣದ ಶಾಲೆಗಳಷ್ಟೇ ಇಂಟರ್ನೆಟ್ ಸಂಪರ್ಕ ಹೊಂದಿವೆ.
ಈ ಬಾರಿಯ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಕಾರ್ಯಕ್ರಮವನ್ನು ಘೋಷಿಸಿದ್ದಲ್ಲದೆ ಈ ಕಾರ್ಯಕ್ರಮ ಹಾಗೂ ಕಳೆದ ಬಾರಿ ಹೊರ ತರಲಾಗಿದ್ದ ನ್ಯಾಷನಲ್ ಡಿಜಿಟಲ್ ಯುನಿವರ್ಸಿಟಿ ಕಾರ್ಯಕ್ರಮಗಳು ಒಟ್ಟಾಗಿ ಪ್ಯಾಂಡೆಮಿಕ್ ಸಮಯದಲ್ಲಾದ ಕಲಿಕೆಯ ನಷ್ಟವನ್ನು ಭರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: School Holiday: ಶಾಂತಿ ಕಾಪಾಡಲು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಆದರೆ, ಪ್ರಸ್ತುತ 29 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಸಂಖ್ಯೆಯ ಶಾಲೆಗಳು ಮಾತ್ರವೇ ಇಂಟರ್ನೆಟ್ ಸಶಕ್ತವಾಗಿರುವುದು ದುರದೃಷ್ಟಕರ. ಪರಿಸ್ಥಿತಿ ಹೀಗಿರುವಾಗ ಸರ್ಕಾರದಿಂದ ಘೋಷಿಸಲಾಗಿರುವ ಡಿಜಿಟಲ್ ಶಿಕ್ಷಣ ಯೋಜನೆಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುತ್ತದೆ ಎಂದು ಹೇಳಲು ಸಾಧ್ಯವಾದಿತೇ?
ಹಾಗಾಗಿ, ಮೊದಲಿಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು, ವಿದ್ಯಾರ್ಥಿ-ಶಿಕ್ಷಕ ಅನುಪಾತ ದರ ಸುಧಾರಿಸುವುದು ಹಾಗೂ ಪ್ರತಿಯೊಂದು ಶಾಲೆಗಳಿಗೂ ಇಂಟರ್ನೆಟ್ ಲಭಿಸುವಂತೆ ಮಾಡುವ ಕೆಲಸಗಳನ್ನು ಮೊದಲು ಮಾಡಬೇಕಾಗಿದ್ದು ಅದೊಮ್ಮೆ ಅನುಷ್ಠಾನಗೊಂಡರೆ ಡಿಜಿಟಲ್ ಶಿಕ್ಷಣದ ಯೋಜನೆಗಳು ಪ್ರತಿ ವಿದ್ಯಾರ್ಥಿಗೂ ತುಂಬ ಅನುಕೂಲಕರವಾಗುವುದರಲ್ಲಿ ಯಾವ ಸಂಶಯವೂ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ