Drones in India- ಡ್ರೋನ್​ಗಳ ಅಭಿವೃದ್ಧಿಗೆ ಕೇಂದ್ರ ಒತ್ತು; 10 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ

Boost to Manufacturing- ಡ್ರೋನ್ ಹಾಗೂ ಆಟೊಮೊಬೈಲ್ ಕ್ಷೇತ್ರದ 13 ವಲಯಗಳಿಗೆ ಕೇಂದ್ರ ಸರ್ಕಾರ ಪಿಎಲ್ಐ ಸ್ಕೀಮ್ ಜಾರಿ ಮಾಡಿದೆ. ಇದರಿಂದ ಮುಂದಿನ ಐದು ವರ್ಷದಲ್ಲಿ 1 ಕೋಟಿ ಹೊಸ ಉದ್ಯೋಗ ಸೃಷ್ಟಿ ಹಾಗೂ 37 ಲಕ್ಷ ಕೋಟಿ ರೂ ಮೊತ್ತದ ಉತ್ಪಾದನೆ ಆಗುವ ನಿರೀಕ್ಷೆ ಇದೆ.

ಡ್ರೋನ್ ಸಾಂದರ್ಭಿಕ ಚಿತ್ರ

ಡ್ರೋನ್ ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ನವದೆಹಲಿ, ಸೆ. 15: ಮುಂದಿನ ದಿನಗಳಲ್ಲಿ ಭಾರೀ ಮಹತ್ವ ಪಡೆಯಲಿರುವ ಡ್ರೋನ್ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಡ್ರೋನ್ ತಯಾರಿಕೆಗೆ ಪುಷ್ಟಿ ನೀಡುವ ಉದ್ದೇಶದಿಂದ ಡ್ರೋನ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಪಿಎಲ್​ಐ ಯೋಜನೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (PLI – Product Specific Incentive) ಸ್ಕೀಮ್​ನ ಪರಿಣಾಮವಾಗಿ ಮುಂದಿನ ಮೂರು ವರ್ಷಗಳಲ್ಲಿ ಭಾರತದ ಡ್ರೋನ್ ಉದ್ಯಮಕ್ಕೆ (Indian Drone Industry) ಐದು ಸಾವಿರ ಕೋಟಿ ರೂ ಹೂಡಿಕೆ ಹರಿದುಬರುವ ಮತ್ತು ಹತ್ತು ಸಾವಿರ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಕೇಂದ್ರದ ಈ ಕ್ರಮವನ್ನು ಸ್ವಾಗತಿಸಿರುವ ಉದ್ಯಮ ತಜ್ಞರು, ಭಾರತದಲ್ಲಿ ಡ್ರೋನ್ ತಯಾರಿಕೆ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪಿ ಎಲ್ ಐ ಸ್ಕೀಮ್​ನಲ್ಲಿ ಡ್ರೋನ್ ಮತ್ತು ಡ್ರೋನ್ ಬಿಡಿಭಾಗಗಳ ತಯಾರಕರಿಗೆ ಶೇ. 20ರಷ್ಟು ಪ್ರೋತ್ಸಾಹಕವನ್ನು (Incentive) ಸರ್ಕಾರ ಒದಗಿಸುತ್ತದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಂಪುಟವು, ಡ್ರೋನ್​ನ ಉತ್ಪನ್ನ ನಿರ್ದಿಷ್ಟ ಪಿಎಲ್​ಐ ಸ್ಕೀಮ್​ನಲ್ಲಿ (Product specific PLI) ಸ್ಪಷ್ಟ ಆದಾಯದ (Clear Revenue Targets) ಗುರಿ ಹಾಗೂ ದೇಶೀಯ ಮೌಲ್ಯ ವರ್ದನೆಗೆ (Domestic Value Addition) ಒತ್ತು ಕೊಡಲಾಗಿದೆ. ಇದು ಡ್ರೋನ್ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಪ್ರಮುಖ ಅಂಶವಾಗಿರಲಿದೆ. ಭಾರತದ ಬೆಳವಣಿಗೆಗೆ ಇವು ಪೂರಕವಾಗಿ ಇರಲಿವೆ ಎಂದು ಹೇಳಲಾಗಿದೆ.

    ಡ್ರೋನ್ ಉದ್ಯಮದ ತಜ್ಞರು ಕೇಂದ್ರದ ಕ್ರಮವನ್ನು ಸ್ವಾಗತಿಸಿದ್ಧಾರೆ. ಭಾರತದ ಡ್ರೋನ್ ತಯಾರಿಕೆ ಹಾಗೂ ರಫ್ತು ಸಾಮರ್ಥ್ಯ ಹೆಚ್ಚಿಸುವ ಮತ್ತು ದೇಶೀಯವಾಗಿ ತಂತ್ರಜ್ಞಾನ ಅಭಿವೃದ್ಧಿಗೆ ಪುಷ್ಟಿ ಕೊಡುವ ಪ್ರಯತ್ನ ಆಗಿದೆ ಎಂದು ಇಂಡಸ್​ಲಾ ಸಂಸ್ಥೆಯ ಶ್ರೇಯಾ ಸೂರಿ ಹೇಳಿದ್ದಾರೆ.

    ಡ್ರೋನ್ ಉದ್ಯಮದ ವಿಚಾರದಲ್ಲಿ ಸರ್ಕಾರ ಈ ಮುಂಚಿನಿಂದಲೂ ಉದಾರ ನೀತಿ ಅನುಸರಿಸುತ್ತಿದೆ. ಅದು ಈಗ ಇನ್ನಷ್ಟು ಮುಂದುವರಿದಿದೆ. ನಿಯಮಗಳ ಸಡಿಲಿಕೆ ಜೊತೆಗೆ ಈಗ ನೀಡಲಾಗುತ್ತಿರುವ ಹಣಕಾಸು ಉತ್ತೇಜನವು ಡ್ರೋನ್ ಉದ್ಯಮಕ್ಕೆ ಸಕಾರಾತ್ಮಕ ಪರಿಣಾಮ ಬೀರಬಹದು. ಭಾರತದಲ್ಲಿ ಡ್ರೋನ್ ತಯಾರಿಕೆಗೆ ಹೊಸ ತಂತ್ರಜ್ಞಾನ ಮತ್ತು ಹೂಡಿಕೆಗಳು ಬರಲು ಅನುವು ಮಾಡಿಕೊಡಬಹುದು. ಡ್ರೋನ್ ಮತ್ತು ಡ್ರೋನ್ ಆಧಾರಿತ ತಂತ್ರಜ್ಞಾನಕ್ಕೆ ಭಾರತವೇ ರಫ್ತು ಕೇಂದ್ರವಾಗಲು ಅನುಕೂಲವಾಗಬಹುದು ಎಂದು ಶ್ರೇಯಾ ಸೂರಿ ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: Electric vehicle: ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ 26 ಸಾವಿರ ಕೋಟಿ ಪ್ರೋತ್ಸಾಹ ಯೋಜನೆ ಘೋಷಿಸಿದ ಕೇಂದ್ರ

    ನಿಯಮ ಸಡಿಲಿಕೆಗಳೇನು?

    ಈ ಮುಂಚೆ ಡ್ರೋನ್ ಲೈಸೆನ್ಸ್ ಪಡೆಯಲು 25 ಫಾರ್ಮ್​ಗಳನ್ನ ಭರ್ತಿ ಮಾಡುವುದು ಮತ್ತು ಅನುಮೋದನೆಗಳನ್ನ ಪಡೆಯುವುದು ಅಗತ್ಯ ಇತ್ತು. ಈಗ ಅದನ್ನ ಕೇವಲ ಐದಕ್ಕೆ ಇಳಿಸಿ ಸರಳಗೊಳಿಸಲಾಗಿದೆ. ಡ್ರೋನ್ ನೊಂದಣಿ ಹಾಗೂ ಡ್ರೋನ್ ಪೈಲಟ್ ಪರವಾನಿಗೆಗೆ ಮುನ್ನ ಪಡೆಯಬೇಕಿದ್ದ ಹೆಚ್ಚುವರಿ ಸೆಕ್ಯೂರಿಟಿ ಕ್ಲಿಯರೆನ್ಸ್ ಅನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ.

    13 ವಲಯಗಳಿಂದ 1 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯತೆ:

    ಕೇಂದ್ರ ಸರ್ಕಾರದ ಪಿಎಲ್​ಐ ಯೋಜನೆ ಆಟೊಮೊಬೈಲ್ ಮತ್ತು ಡ್ರೋನ್ ಉದ್ಯಮದ 13 ವಲಯಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಭಾರತದಲ್ಲಿ ತಯಾರಿಕಾ ಕ್ಷೇತ್ರಕ್ಕೆ ಗಮನಾರ್ಹ ರೀತಿಯಲ್ಲಿ ಪುಷ್ಟಿ ಸಿಗುವ ನಿರೀಕ್ಷೆ ಇದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ನಡೆಯುವ ಹೆಚ್ಚುವರಿ ಉತ್ಪಾದನೆ ಮೊತ್ತ 37 ಲಕ್ಷ ಕೋಟಿ ರೂ ಇರಬಹುದು, ಹಾಗೂ ಈ ಅವಧಿಯಲ್ಲಿ ಸೃಷ್ಟಿಯಾಗುವ ಹೊಸ ಉದ್ಯೋಗ ಬರೋಬ್ಬರಿ 1 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.
    Published by:Vijayasarthy SN
    First published: