ವರ್ಕ್ ಫ್ರಮ್ ಹೋಮ್ (Work From Home) ಕೆಲವರಿಗೆ ವರದಾನ, ಇನ್ನೂ ಕೆಲವರಿಗೆ ಯಾವಾಗ ಆಫೀಸ್ಗೆ (Work From Office) ಕರಿತಾರಪ್ಪಾ ಅನ್ನೋ ಭಾವನೆ. ಕೊರೊನಾ ವೈರಸ್ ಕಾಲಿಟ್ಟಿದ್ದೇ ಇಟ್ಟಿದ್ದು ಕೆಲಸ ಮಾಡುವ ದಿಕ್ಕೇ ಬದಲಾಯಿತು. ಅದೆಷ್ಟೋ ಕಂಪನಿಗಳು ತನ್ನ ಸಿಬ್ಬಂದಿಗೆ ಇನ್ನೂ ಸಹ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ತಾಯಂದಿರಿಗೆ, ಕೆಲ ಮಹಿಳೆಯರಿಗೆ ಈ ವಿಧಾನ ನಿಜಕ್ಕೂ ಸಾಕಷ್ಟು ಪ್ರಯೋಜನ ಕೊಟ್ಟಿದೆ ಎಂದರೂ ತಪ್ಪಿಲ್ಲ.
ಹೆಚ್ಚಾದ ಮೂನ್ಲೈಟ್ ಪ್ರಕರಣಗಳು
ವರ್ಕ್ ಫ್ರಮ್ ಹೋಮ್ ಕೆಲಸದ ವಿಧಾನ ಬಂದಾಗಿನಿಂದ ಮೂನ್ಲೈಟ್ (ಒಂದೇ ಸಮಯದಲ್ಲಿ ಎರೆಡೆರೆಡು ಕಂಪನಿಯಲ್ಲಿ ಕೆಲಸ) ಪ್ರಕರಣಗಳು ಹೆಚ್ಚಾಗಿವೆ ಅಂತಾ ವರದಿಗಳು ಆಗುತ್ತಲೇ ಇದೆ. ಹಲವು ಪ್ರತಿಷ್ಠಿತ ಕಂಪನಿಗಳು ಮೂನ್ಲೈಟಿಂಗ್ನಲ್ಲಿ ತೊಡಗಿರುವ ಉದ್ಯೋಗಿಗಳನ್ನು ಮುಲಾಜಿಲ್ಲದೇ ಮನೆಗೆ ಸಹ ಕಳಿಸಿವೆ. ಇಂತಹದ್ದೇ ಕೆಲ ಕಾರಣಕ್ಕಾಗಿ ಟ್ವಿಟ್ಟರ್ನಂತಹ ಕಂಪನಿಗಳು ಉದ್ಯೋಗಿಗಳಿಗೆ ಕಚೇರಿಯಿಂದಲೇ ಕೆಲಸ ಮಾಡಬೇಕು, ಎಲ್ಲರೂ ಕಚೇರಿಗೆ ಮರಳಿ ಎಂದು ತಾಕೀತು ನೀಡಿತ್ತು.
ಉದ್ಯೋಗಿಗಳ ಕೆಲಸವನ್ನು ಟ್ರ್ಯಾಕ್ ಮಾಡಲು ಸಾಫ್ಟ್ವೇರ್
ಮೂನ್ಲೈಟ್ನಂತಹ ಪ್ರಕರಣದ ಜೊತೆಗೆ ಮನೆಯಿಂದ ಕೆಲಸ ಮಾಡುತ್ತಿರುವವರು ಕಚೇರಿ ಕೆಲಸಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೂಡ ಈಗ ಕೇಳಿಬರುತ್ತಿದೆ.
ಇದನ್ನು ಪತ್ತೆ ಹಚ್ಚಲು ಕಂಪನಿಗಳು ಹೊಸ ಹೊಸ ಪ್ರಯೋಗಕ್ಕೂ ಮುಂದಾಗಿವೆ. ಆದರೆ ಇಲ್ಲೊಂದು ಬ್ರಿಟಿಷ್ ಕೊಲಂಬಿಯಾ ಮೂಲದ ಕಂಪನಿಯು ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಶಿಫ್ಟ್ ಸಮಯದಲ್ಲಿ ಕೆಲಸ ಮಾಡದಿದ್ದಾಗ ಕಂಡು ಹಿಡಿಯಲು ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿದೆ.
ಸಾಫ್ಟ್ವೇರ್ ಸಹಾಯದಿಂದ ಉದ್ಯೋಗಿಯ ಕಳ್ಳಾಟ ಪತ್ತೆ
ಟೈಮ್ಸ್ ನೌ ವರದಿ ಮಾಡಿದಂತೆ, ಬ್ರಿಟಿಷ್ ಕೊಲಂಬಿಯಾ ಕಂಪನಿಯು ಇತ್ತೀಚೆಗೆ ಮನೆಯಿಂದ ಕೆಲಸದ ಸಮಯದಲ್ಲಿ ಮನೆಯಲ್ಲಿ ತನ್ನ ವೈಯಕ್ತಿಕ ಕೆಲಸಕ್ಕೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದ ಓರ್ವ ಮಹಿಳೆಯನ್ನು ಪತ್ತೆ ಹಚ್ಚಿದ್ದು ಆಕೆಯನ್ನು ಕೆಲಸದಿಂದ ತೆಗೆದು ದಂಡ ಸಹ ವಿಧಿಸಿದೆ.
3 ಲಕ್ಷ ರೂಪಾಯಿ ದಂಡ ವಿಧಿಸಿದ ಕಂಪನಿ
ಕೆಲಸದ ಸಮಯವನ್ನು ವ್ಯರ್ಥ ಮಾಡುವುದನ್ನು ಸಾಫ್ಟ್ವೇರ್ ಮೂಲಕ ಪತ್ತೆ ಹಚ್ಚಿದ ಬ್ರಿಟಿಷ್ ಕೊಲಂಬಿಯಾ ಮೂಲದ ಕಂಪನಿಯು ಕಾರ್ಲೀ ಬೆಸ್ಸೆ ಎಂಬ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿ, 3 ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿದೆ.
ಟೈಮ್ಕ್ಯಾಂಪ್ ಸಾಫ್ಟ್ವೇರ್
ಟೈಮ್ಕ್ಯಾಂಪ್ ಎಂಬ ಸಾಫ್ಟ್ವೇರ್ ಬಳಸಿ ಮನೆಯಿಂದಲೇ ಕೆಲಸ ಮಾಡುವಾಗ ಮಹಿಳಾ ಉದ್ಯೋಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಂಪನಿಯು ಕಂಡುಹಿಡಿದಿದೆ.
ಟೈಮ್ಕ್ಯಾಂಪ್ ಸಾಫ್ಟ್ವೇರ್ ಮೂಲತಃ ರಿಮೋಟ್ ಕೆಲಸ ಮಾಡುವಾಗ ಉದ್ಯೋಗಿಗಳ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. ಬ್ರಿಟಿಷ್ ಕೊಲಂಬಿಯಾದಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಬೆಸ್ಸೆ ದೂರಸ್ಥ ಕೆಲಸದ ಸಮಯದಲ್ಲಿ ಹೆಚ್ಚಾಗಿ ಕೆಲಸದಿಂದ ದೂರವಿರುವುದನ್ನು ಸಾಫ್ಟ್ವೇರ್ ಟ್ರ್ಯಾಕ್ ಮಾಡಿದ ನಂತರ ಮಹಿಳೆಯನ್ನು ವಜಾ ಮಾಡಲಾಗಿದೆ.
ಕಂಪನಿ ಕೆಲಸಕ್ಕಿಂತ ಹೆಚ್ಚಾಗಿ ಕಾಲಹರಣ ಮಾಡುತ್ತಿದ್ದ ಮಹಿಳಾ ಉದ್ಯೋಗಿ
ಮಹಿಳೆಯನ್ನು ವಜಾಗೊಳಿಸಿದ ನಂತರ, ಕಂಪನಿ ಯಾವುದೇ ಸೂಚನೆ ನೀಡದೆ ತನ್ನನ್ನು ವಜಾಗೊಳಿಸಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ. ಆದರೆ ಕಂಪನಿ ಆಕೆ ಶಿಫ್ಟ್ ಸಮಯದಲ್ಲಿ ಹೇಗೆ ಕೆಲಸ ಮಾಡಿದ್ದಾಳೆ ಎಂಬುದನ್ನು ಬಯಲು ಮಾಡಿದೆ. ಮಹಿಳೆ 50 ಗಂಟೆಗಳ ಕೆಲಸದ ಸಮಯವನ್ನು ದಾಖಲಿಸಿದ್ದಾಳೆ. ಆದರೆ ಅವಳು ತನ್ನ ಎಲ್ಲಾ ಸಮಯವನ್ನು ಕಂಪನಿಯ ಕೆಲಸಕ್ಕೆ ಬಳಸಿಲ್ಲ ಎಂದು ಕಂಪನಿ ಹೇಳಿದೆ.
ಕಂಪನಿಯ ಬಹಿರಂಗಪಡಿಸುವಿಕೆಯ ನಂತರ, ಮಹಿಳೆ ತನ್ನ ಕೆಲಸ ಮತ್ತು ವೈಯಕ್ತಿಕ ಸಮಯದ ನಡುವಿನ ವ್ಯತ್ಯಾಸವನ್ನು ಸಾಫ್ಟ್ವೇರ್ ಸರಿಯಾಗಿ ಗುರುತಿಸಲಿಲ್ಲ ಎಂದು ಮತ್ತೊಂದು ಆರೋಪ ಎಸಗಿದ್ದಾಳೆ. ಆದರೆ ಸಂಸ್ಥೆಯು ಮಹಿಳೆಯ ಆರೋಪಗಳನ್ನು ತಳ್ಳಿಹಾಕಿ ಸಾಫ್ಟ್ವೇರ್ನ ದಕ್ಷತೆಯನ್ನು ಸಾಬೀತುಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ