• Home
  • »
  • News
  • »
  • jobs
  • »
  • Visual Merchandising: ವಸ್ತುವನ್ನು ನೋಡಿದ ಕೂಡಲೇ ಖರೀದಿಸುವಂತೆ ಮಾಡುವುದು ಕೂಡ ಒಂದು ವೃತ್ತಿ

Visual Merchandising: ವಸ್ತುವನ್ನು ನೋಡಿದ ಕೂಡಲೇ ಖರೀದಿಸುವಂತೆ ಮಾಡುವುದು ಕೂಡ ಒಂದು ವೃತ್ತಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯಾವುದೇ ವಸ್ತು ಮಾರಾಟವಾಗಬೇಕು ಎಂದಾದಲ್ಲಿ ಅದನ್ನು ಪ್ರಸ್ತುತಪಡಿಸುವುದು ಮುಖ್ಯವಾಗಿರುತ್ತದೆ.  ಆ ವಸ್ತು ಗ್ರಾಹಕರನ್ನು ಉತ್ತೇಜಿಸುವಂತಿರಬೇಕು ಹಾಗೂ ನೋಡಿದ ಕೂಡಲೇ ಅದನ್ನು ಖರೀದಿಸಬೇಕು ಎನ್ನುವ ತುಡಿತ ಖರೀದಿಸುವವರಿಗೆ ಉಂಟಾಗಬೇಕು.

  • Share this:

    ಬೋರ್ಡ್ ಎಕ್ಸಾಮ್ ಫಲಿತಾಂಶಗಳು (Exam Result) ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಶಾಲೆಗಳಿಂದ ಕಾಲೇಜುಗಳಿಗೆ ತೆರಳಲು ಸಿದ್ಧರಾಗುತ್ತಾರೆ. ಈ ರೀತಿಯ ಪರಿವರ್ತನೆಯಲ್ಲಿ ಮೊದಲು ಯಾವ ಉದ್ಯೋಗಕ್ಕೆ (Job) ಸೇರಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿಕೊಂಡು ಕಾಲೇಜಿನಲ್ಲಿ ಯಾವ ಕೋರ್ಸ್‌ಗೆ (Courses) ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿ.


    ವಿಶುವಲ್ ಮರ್ಚಂಡೈಸರ್ ಆಗಿ ವೃತ್ತಿ ಆಯ್ಕೆ


    ಯಾವುದೇ ವಸ್ತು ಮಾರಾಟವಾಗಬೇಕು ಎಂದಾದಲ್ಲಿ ಅದನ್ನು ಪ್ರಸ್ತುತಪಡಿಸುವುದು ಮುಖ್ಯವಾಗಿರುತ್ತದೆ.  ಆ ವಸ್ತು ಗ್ರಾಹಕರನ್ನು ಉತ್ತೇಜಿಸುವಂತಿರಬೇಕು ಹಾಗೂ ನೋಡಿದ ಕೂಡಲೇ ಅದನ್ನು ಖರೀದಿಸಬೇಕು ಎನ್ನುವ ತುಡಿತ ಖರೀದಿಸುವವರಿಗೆ ಉಂಟಾಗಬೇಕು.


    ಈ ಸಂದರ್ಭದಲ್ಲಿ ಆ ವಸ್ತು/ ಉತ್ಪನ್ನವನ್ನು ವಿನ್ಯಾಸಗೊಳಿಸುವುದು ಹಾಗೂ ಪ್ರದರ್ಶಿಸುವುದು ಮುಖ್ಯವಾಗಿರುತ್ತದೆ. ವಿಶುವಲ್ ಮರ್ಚಂಡೈಸಿಂಗ್ ಎನ್ನುವುದು ರಿಟೇಲ್ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸುವ ಹಾಗೂ ಉತ್ಪನ್ನಗಳನ್ನು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸುವ ಉದ್ಯೋಗವಾಗಿದೆ. ಇದರಿಂದ ಗ್ರಾಹಕರು ಆ ಉತ್ಪನ್ನದತ್ತ ಆಕರ್ಷಿತಗೊಳ್ಳುತ್ತಾರೆ ಹಾಗೂ ಅದನ್ನು ಖರೀದಿಸುತ್ತಾರೆ. ಇದರಿಂದ ವ್ಯಾಪಾರ ಕೂಡ ಅಭಿವೃದ್ಧಿಗೊಳ್ಳುತ್ತದೆ.




    ಉತ್ಪನ್ನಗಳನ್ನು ಪ್ರಸ್ತುತಪಡಿಸುವ ಶೈಲಿ


    ಹೆಚ್ಚಾಗಿ ಮಾಲ್‌ಗಳು, ರಿಟೇಲ್ ಮಳಿಗೆಗಳು ಹಾಗೂ ಬೊಟೀಕ್‌ಗಳಲ್ಲಿ ವಿಶುವಲ್ ಮರ್ಚಂಡೈಸಿಂಗ್ ಅಥವಾ ದೃಶ್ಯ ಪ್ರಸರಣ ಗ್ರಾಹಕರನ್ನು ಸೆಳೆಯುವಲ್ಲಿ ಸಹಾಯಕವಾಗಿದೆ. ನೀವು ಉತ್ಪನ್ನಗಳನ್ನು ಹೊಂದಿಸಿರುವ ರೀತಿ ಹಾಗೂ ಬಳಸಿರುವ ಗ್ರಾಫಿಕ್‌ಗಳಿಂದಲೇ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳತ್ತ ಆಕರ್ಷಿತರಾಗುತ್ತಾರೆ.


    ತಮಗೆ ಬೇಕಾದ ಉತ್ಪನ್ನಗಳು, ಗಾತ್ರಗಳನ್ನು ಅವರು ಕಣ್ಣೋಟದಲ್ಲಿಯೇ ಆಯ್ಕೆಮಾಡುತ್ತಾರೆ ಹಾಗೂ ಖರೀದಿಸುತ್ತಾರೆ. ಈ ಸಮಯದಲ್ಲಿ ಉತ್ಪನ್ನಗಳನ್ನು ಅವರಿಗೆ ಇಷ್ಟವಾಗುವ ರೀತಿ ಹಾಗೂ ಮೆಚ್ಚುವ ರೀತಿಯಲ್ಲಿ ಹೇಗೆ ಪ್ರದರ್ಶಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ.


    ಮಾರಾಟ ಹೆಚ್ಚಿಸಲು ವಿಶುವಲ್ ಮರ್ಚಂಡೈಸಿಂಗ್ ಅನುಕೂಲಕಾರಿ


    ವಿಶುವಲ್ ಮರ್ಚಂಡೈಸಿಂಗ್ ಮಾರಾಟವನ್ನು ಹೆಚ್ಚಿಸಲು ಅನುಕೂಲಕರವಾಗಿದೆ ಅಂತೆಯೇ ಉತ್ಪನ್ನಗಳ ಪ್ರದರ್ಶನ ಹಾಗೂ ಪ್ರಚಾರವನ್ನು ನಡೆಸುತ್ತದೆ. ಈ ಮೂಲಕ ಗ್ರಾಹಕರು ಆ ಉತ್ಪನ್ನದತ್ತ ಆಕರ್ಷಿತಗೊಂಡು ಹೆಚ್ಚೆಚ್ಚು ಶಾಪಿಂಗ್ ಮಾಡುತ್ತಾರೆ ಎನ್ನುವುದು ಇಲ್ಲಿರುವ ಟ್ರಿಕ್.


    ಹೆಚ್ಚಿನ ಬ್ರ್ಯಾಂಡ್‌ಗಳು ವಿಶುವಲ್ ಮರ್ಚಂಡೈಸಿಂಗ್‌ಗಾಗಿ ಸಾಕಷ್ಟು ಖರ್ಚುಮಾಡುತ್ತವೆ. ಲೈಟಿಂಗ್ ಆಗಿರಬಹುದು, ಉತ್ಪನ್ನಗಳನ್ನು ಪ್ರಸ್ತುತಪಡಿಸುವ ರೀತಿಯಾಗಿರಬಹುದು ಹೀಗೆ ಗ್ರಾಹಕರ ಮನಸೆಳೆಯುವ ರೀತಿಯಲ್ಲಿ ಉತ್ಪನ್ನಗಳನ್ನು ಮಳಿಗೆಗಳು ಪ್ರದರ್ಶಿಸುತ್ತವೆ.


    ಇದನ್ನೂ ಓದಿ: Art Field Careers: ಕಲಾ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳುವುದು ಹೇಗೆ, 7 ಉದ್ಯೋಗಾವಕಾಶಗಳ ಮಾಹಿತಿ ಇಲ್ಲಿದೆ


    ವೃತ್ತಿಗೆ ಬೇಕಾದ ಅರ್ಹತೆಗಳೇನು


    ವಿಶುವಲ್ ಮರ್ಚಂಡೈಸಿಂಗ್‌ನಲ್ಲಿ ನಿಮ್ಮ ವೃತ್ತಿ ಜೀವನ ಆರಂಭಿಸಬೇಕು ಎಂದಾದಲ್ಲಿ ಅದಕ್ಕನುಗುಣವಾದ ಕೋರ್ಸ್‌ಗಳನ್ನು ಮಾಡಬೇಕಾಗುತ್ತದೆ. ಕಲೆ, ವಿನ್ಯಾಸ, ಒಳಾಂಗಣ ವಿನ್ಯಾಸದಂತಹ ಕೋರ್ಸ್‌ಗಳನ್ನು ಕಲಿಯಬೇಕು. ಇದಕ್ಕಾಗಿ ಹಲವಾರು ಡಿಗ್ರಿ ಹಾಗೂ ಡಿಪ್ಲೊಮೊ ಕೋರ್ಸ್‌ಗಳಿವೆ.


    ಡಿಪ್ಲೊಮೊ ಕೋರ್ಸ್‌ನ ಅವಧಿ ಆರು ತಿಂಗಳಿನಿಂದ ಒಂದು ವರ್ಷವಾಗಿದೆ ಹಾಗೂ ಡಿಸೈನಿಂಗ್‌ನಲ್ಲಿ ಪದವಿ ಕೋರ್ಸ್‌ಗಳು ಮೂರರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ. ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಎರಡು ವರ್ಷಗಳ ಅವಧಿಯೊಂದಿಗೆ ಬರುತ್ತವೆ. ಡಿಸೈನಿಂಗ್ ಕೋರ್ಸ್ ನೀವು ಮಾಡಿಲ್ಲ ಎಂದಾದರೆ ನೇರವಾಗಿ ವಿಶುವಲ್ ಮರ್ಚಂಡೈಸಿಂಗ್ ಕೋರ್ಸ್‌ಗಳನ್ನು ಮಾಡಬಹುದಾಗಿದೆ. ಫ್ಯಾಶನ್, ರಿಟೇಲ್, ಎಕನಾಮಿಕ್ಸ್ ವಿಷಯಗಳ ಬಗ್ಗೆ ಪರಿಣಿತಿ ಹೊಂದಿರುವುದು ಅವಶ್ಯವಾಗಿದೆ.




    ಆರಂಭದಲ್ಲಿ ರಿಟೇಲ್ ಮಳಿಗೆಗಳು ಅಥವಾ ಬೊಟೀಕ್‌ಗಳಲ್ಲಿ ವಿಶುವಲ್ ಮರ್ಚಂಡೈಸರ್ ಆಗಿ ವೃತ್ತಿ ನಿಪುಣತೆಯನ್ನು ಪಡೆದುಕೊಳ್ಳಬಹುದು. ಈ ವೃತ್ತಿಯಲ್ಲಿ ಪರಿಣಿತಿ ಪಡೆದುಕೊಂಡಂತೆ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಜೊತೆಗೆ ಕೆಲಸ ಮಾಡಬಹುದು ಇಲ್ಲವೇ ಫ್ರಿಲ್ಯಾನ್ಸರ್ ಆಗಿಯೂ ವೃತ್ತಿ ಜೀವನವನ್ನು ಮುಂದುವರಿಸಬಹುದು.


    ವೃತ್ತಿಯ ಹುದ್ದೆ ಹಾಗೂ ಜವಬ್ದಾರಿಗಳೇನು


    ಮಳಿಗೆಯನ್ನು ಸ್ಟೈಲಿಶ್ ಆಗಿ ಸುಂದರವಾಗಿ ಇರಿಸುವ ಜವಬ್ದಾರಿ ವಿಶುವಲ್ ಮರ್ಚಂಡೈಸರ್‌ನದ್ದಾಗಿರುತ್ತದೆ. ಫ್ಯಾಶನ್ ಹಾಗೂ ವಿನ್ಯಾಸದ ಸಮಗ್ರ ತಿಳುವಳಿಕೆಯ ಅಗತ್ಯವಿರುತ್ತದೆ. ಮಳಿಗೆಯನ್ನು ಸುಂದರವಾಗಿಸುವುದರ ಜೊತೆಗೆ ಗ್ರಾಹಕರನ್ನು ಸೆಳೆಯುವಂತೆ ಮಾಡುವುದು ವಿಶುವಲ್ ಮರ್ಚಂಡೈಸರ್‌ನ ಕೆಲಸವಾಗಿದೆ.


    ಪ್ರಾಡಕ್ಟ್ ರಿಲೀಸ್ ಅಥವಾ ಹಬ್ಬ ಹರಿದಿನಗಳ ಸಮಯದಲ್ಲಿ ಆ ಥೀಮ್‌ಗಳಿಗೆ ಅನುಗುಣವಾಗಿ ಮಳಿಗೆಗೆಳನ್ನು ಸಜ್ಜುಗೊಳಿಸಬೇಕಾಗುತ್ತದೆ.


    ಬ್ರ್ಯಾಂಡ್ ಡಿಸ್‌ಪ್ಲೇ ಮಾರ್ಗಸೂಚಿಗಳ ಕುರಿತು ತಂಡದ ಸದಸ್ಯರಿಗೆ ಮಾರ್ಗದರ್ಶನ ನೀಡುವುದು


    ತಂಡದ ಸದಸ್ಯರು ಮತ್ತು ಮಧ್ಯಸ್ಥಗಾರರೊಂದಿಗೆ ಸಂವಹನ ನಡೆಸುವುದು ಹಾಗೂ ಬ್ಯುಸಿನೆಸ್‌ ಅನ್ನು ಲಾಭದಾಯಕವಾಗಿಸುವುದು.




    ಕೌಶಲ್ಯಗಳು


    ನಿಮ್ಮಲ್ಲಿ ಸೃಜನಶೀಲತೆ ಮುಖ್ಯವಾಗಿರಬೇಕು. ಅಂತೆಯೇ ಕ್ರಿಯಾತ್ಮಕ ಆಲೋಚನೆಗಳು ನಿಮ್ಮಲ್ಲಿರಬೇಕು. ಹೊಸ ಹೊಸ ಐಡಿಯಾಗಳೊಂದಿಗೆ ಬರುವವರಾಗಿರಬೇಕು. ಉತ್ತಮ ಸಂವಹನ ಸಾಮರ್ಥ್ಯ ನಿಮ್ಮಲ್ಲಿರಬೇಕು. ಟೀಮ್ ಪ್ಲೇಯರ್‌ನಂತೆ ಕಾರ್ಯನಿರ್ವಹಿಸಬೇಕು.


    ಸಂಬಳ


    ವಿಶುವಲ್ ಮರ್ಚಂಡೈಸಿಂಗ್ ಹುದ್ದೆಗೆ ಉತ್ತಮ ಬೇಡಿಕೆ ಇದೆ. ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಮೂರರಿಂದ ನಾಲ್ಕು ಲಕ್ಷ ಖರ್ಚುಮಾಡಬೇಕಾಗುತ್ತದೆ. ಇನ್ನು ವಿಶುವಲ್ ಮರ್ಚಂಡೈಸಿಂಗ್‌ನಲ್ಲಿ ವೃತ್ತಿ ಆರಂಭಿಸುವವರು ಕೈತುಂಬಾ ಆದಾಯ ಗಳಿಸಬಹುದು. ವಿದ್ಯಾರ್ಥಿಗಳಿಗೆ ಸರಾಸರಿ ವಾರ್ಷಿಕ ವೇತನವು ಐದು ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ.

    Published by:Kavya V
    First published: